ಶ್ರೀಲಂಕಾ ಮಡಿಲಿಗೆ ಟ್ವೆಂಟಿ-20 ಸರಣಿ

Update: 2017-02-22 18:15 GMT

ಅಡಿಲೇಡ್,ಫೆ.22: ಲೆಗ್-ಸ್ಪಿನ್ನರ್ ಆಡಮ್ ಝಾಂಪ(3-25) ಹಾಗೂ ಆಲ್‌ರೌಂಡ್ ಜೇಮ್ಸ್ ಫಾಕ್ನರ್(3-20) ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯ ತಂಡ ಶ್ರೀಲಂಕಾ ವಿರುದ್ಧದ ಮೂರೆನ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯವನ್ನು 41 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಈ ಗೆಲುವಿನ ಮೂಲಕ ಸ್ವದೇಶದಲ್ಲಿ ಸತತ ವೈಟ್‌ವಾಶ್ ಭೀತಿಯಿಂದ ಪಾರಾಯಿತು.

ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ರೋಚಕವಾಗಿ ಜಯಿಸಿದ್ದ ಶ್ರೀಲಂಕಾ ತಂಡ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ಆಸ್ಟ್ರೇಲಿಯ 2014ರ ನವೆಂಬರ್‌ನ ಬಳಿಕ ಸ್ವದೇಶದಲ್ಲಿ ಮೊದಲ ಬಾರಿ ಟ್ವೆಂಟಿ-20 ಪಂದ್ಯವನ್ನು ಜಯಿಸಿದೆ. ಇದರೊಂದಿಗೆ ಸತತ 5 ಪಂದ್ಯಗಳ ಸೋಲಿನಿಂದ ಹೊರ ಬಂದಿದೆ. ಆಸ್ಟ್ರೇಲಿಯ ನೆಲದಲ್ಲಿ ಕಳೆದ 5 ಪಂದ್ಯಗಳನ್ನು ಜಯಿಸಿದ್ದ ಶ್ರೀಲಂಕಾ ಮೊದಲ ಬಾರಿ ಟ್ವೆಂಟಿ-20ಯಲ್ಲಿ ಸೋತಿದೆ.

ಬುಧವಾರ ಇಲ್ಲಿ ನಡೆದ 3ನೆ ಟ್ವೆಂಟಿ-20 ಪಂದ್ಯದಲ್ಲಿ ಗೆಲ್ಲಲು 188 ರನ್ ಕಠಿಣ ಸವಾಲು ಪಡೆದಿದ್ದ ಶ್ರೀಲಂಕಾ 18 ಓವರ್‌ಗಳಲ್ಲಿ 146 ರನ್‌ಗೆ ಆಲೌಟಾಯಿತು. ಮಧ್ಯ ಕ್ರಮಾಂಕದ ಕುಸಿತಕ್ಕೆ ಒಳಗಾದ ಶ್ರೀಲಂಕಾ 23 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕಳೆದೆರಡು ಪಂದ್ಯಗಳಲ್ಲಿ ಏಕಾಂಗಿಯಾಗಿ ಶ್ರೀಲಂಕಾಕ್ಕೆ ಗೆಲುವು ತಂದ ಅಸೆಲಾ ಗುಣರತ್ನೆ(4) ಸಹಿತ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದ ಝಾಂಪ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇನಿಂಗ್ಸ್ ಆರಂಭಿಸಿದ ಮುನವೀರ(37) ಹಾಗೂ ನಾಯಕ ತರಂಗ(14) ಮೊದಲ ವಿಕೆಟ್‌ಗೆ 41 ರನ್ ಸೇರಿಸಿ ಸಾಧಾರಣ ಆರಂಭ ನೀಡಿದ್ದರು. ಆದರೆ, ಉತ್ತಮ ಆರಂಭದ ಲಾಭ ಪಡೆಯಲು ಲಂಕೆ ವಿಫಲವಾಯಿತು. ಮಧ್ಯಮ ಕ್ರಮಾಂಕದಲ್ಲಿ ಸಿರಿವರ್ಧನ(35) ಎರಡಂಕೆಯ ಸ್ಕೋರ್ ದಾಖಲಿಸಿದರು.

ಆಸ್ಟ್ರೇಲಿಯ 187/6: ಇದಕ್ಕೆ ಮೊದಲು ಸತತ 3ನೆ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ತಂಡ ಆಸ್ಟ್ರೇಲಿಯವನ್ನು ಬ್ಯಾಟಿಂಗ್‌ಗೆ ಇಳಿಸಿತು. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಜೀವದಾನ ಪಡೆದ ಆಸೀಸ್ ನಾಯಕ ಆ್ಯರೊನ್ ಫಿಂಚ್(53) ಇನ್ನೋರ್ವ ಆರಂಭಿಕ ಆಟಗಾರ ಕ್ಲಿಂಜರ್(62 ರನ್) ಜೊತೆಗೂಡಿ ಮೊದಲ ವಿಕೆಟ್‌ಗೆ 79 ರನ್ ಜೊತೆಯಾಟದಲ್ಲಿ ಭರ್ಜರಿ ಆರಂಭ ಒದಗಿಸಿದರು.

36ರ ಪ್ರಾಯದ ಕ್ಲಿಂಜರ್ ಬೌಂಡರಿ ಬಾರಿಸುವುದರೊಂದಿಗೆ ಚೊಚ್ಚಲ ಟ್ವೆಂಟಿ-20 ಅರ್ಧಶತಕ ಪೂರೈಸಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಟ್ರೆವಿಸ್ ಹೆಡ್(16 ಎಸೆತ, 30ರನ್, 1 ಬೌಂಡರಿ, 2 ಸಿಕ್ಸರ್) ಆಸೀಸ್‌ನ ಸ್ಕೋರನ್ನು 180ರ ಗಡಿ ತಲುಪಿಸಿದರು.

200ರನ್ ಮೇಲೆ ಕಣ್ಣಿಟ್ಟಿದ್ದ ಆಸೀಸ್ ಐದು ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಕುಸಿತ ಕಂಡಿತು. ಕ್ಲಿಂಜರ್(62 ರನ್, 43 ಎಸೆತ) ರನೌಟಾದ ಬೆನ್ನಿಗೇ ಆಸೀಸ್‌ನ ರನ್ ವೇಗಕ್ಕೆ ಕಡಿವಾಣ ಬಿತ್ತು. ಲಂಕೆಯ ಪರ ಲಿಸಿತ್ ಮಾಲಿಂಗ(2-35) ಹಾಗೂ ಶನಕ(2-27) ತಲಾ 2 ವಿಕೆಟ್ ಪಡೆದರು.

ಶ್ರೀಲಂಕಾದ ಪರ ಸರಣಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿರುವ ಅಸೆಲಾ ಗುಣರತ್ನೆ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ: 20 ಓವರ್‌ಗಳಲ್ಲಿ 187/6

(ಕ್ಲಿಂಜರ್ 62, ಫಿಂಚ್ 53, ಹೆಡ್ 30, ಶನಕ 2-27, ಮಾಲಿಂಗ 2-35)

ಶ್ರೀಲಂಕಾ: 18 ಓವರ್‌ಗಳಲ್ಲಿ 146 ರನ್‌ಗೆ ಆಲೌಟ್

(ಮುನವೀರ 37, ಸಿರಿವರ್ದನ 35, ಫಾಕ್ನರ್ 3-20, ಝಾಂಪ 3-25)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News