ವಿಶ್ವದ ಎರಡು ಅಗ್ರ ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜು

Update: 2017-02-22 18:19 GMT

 ಪುಣೆ, ಫೆ.21: ವಿಶ್ವದ ಅಗ್ರ ಎರಡು ಟೆಸ್ಟ್ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯ ಗುರುವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಹೋರಾಟವನ್ನು ನಡೆಸಲಿವೆ.

ತವರು ನೆಲದಲ್ಲಿ ಸತತ 20ನೆ ಪಂದ್ಯವನ್ನು ಗೆದ್ದುಕೊಂಡು ಅಜೇಯ ಓಟವನ್ನು ಕಾಯ್ದುಕೊಂಡಿರುವ ವಿರಾಟ್ ಕೊಹ್ಲಿ ಪಡೆ ಇನ್ನೊಂದು ಪಂದ್ಯವನ್ನು ಜಯಿಸಿದರೆ ಸ್ವದೇಶದಲ್ಲಿ ಗರಿಷ್ಠ ಪಂದ್ಯಗಳನ್ನು ಗೆದ್ದುಕೊಂಡ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಮತ್ತೊಂದೆಡೆ, ಸ್ಟೀವನ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯ ತಂಡ ಕೊಹ್ಲಿ ಪಡೆಯ ಅಜೇಯ ಓಟಕ್ಕೆ ಕಡಿವಾಣ ಹಾಕಲು ಎದುರು ನೋಡುತ್ತಿದೆ. ಆದರೆ, ವಿರಾಟ್ ಕೊಹ್ಲಿ, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜರನ್ನು ನಿಯಂತ್ರಿಸಲು ಆಸ್ಟೇಲಿಯ ಯಾವ ತಂತ್ರದ ಮೊರೆ ಹೋಗಲಿದೆ ಎಂದು ಕಾದುನೋಡಬೇಕಾಗಿದೆ.

ಟೆಸ್ಟ್‌ನ ಅಗ್ರಮಾನ್ಯ ಬೌಲರ್‌ಗಳಾದ ಅಶ್ವಿನ್ ಹಾಗೂ ಜಡೇಜರನ್ನು ದಿಟ್ಟವಾಗಿ ಎದುರಿಸಲು ಯೋಜನೆ ರೂಪಿಸಲಾಗಿದೆ ಎಂದು ಕೆಲವು ಆಸ್ಟ್ರೇಲಿಯ ಆಟಗಾರರು ಹೇಳುತ್ತಿದ್ದಾರೆ. ಆದರೆ, ಆಸ್ಟ್ರೇಲಿಯ ತನ್ನ ಹಿಂದಿನ ಸೋಲನ್ನು ಮರುಕಳಿಸದಂತೆ ಮಾಡಲು ಅಸಾಮಾನ್ಯ ಪ್ರದರ್ಶನ ನೀಡಬೇಕಾಗುತ್ತದೆ.

ಆಸ್ಟ್ರೇಲಿಯ 2013ರಲ್ಲಿ ಮೈಕಲ್ ಕ್ಲಾರ್ಕ್ ನಾಯಕತ್ವದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಆಸೀಸ್ 0-4 ಅಂತರದಿಂದ ಹೀನಾಯವಾಗಿ ಸರಣಿ ಸೋತಿತ್ತು. ಕೋಚ್ ಮಿಕ್ಕಿ ಅರ್ಥರ್ ಮಾತುಕೇಳದ ತಂಡದ ನಾಲ್ವರು ಆಟಗಾರರನ್ನು ಸ್ವದೇಶಕ್ಕೆ ವಾಪಸು ಕಳುಹಿಸಿಕೊಡಲಾಗಿತ್ತು.

ಇದೀಗ ಸ್ಮಿತ್ ನಾಯಕತ್ವದಲ್ಲಿ ತಂಡದ ಚೇತೋಹಾರಿ ಪ್ರದರ್ಶನ ನೀಡುತ್ತಿದೆ. ಆದರೆ, ಕಳೆದ ವರ್ಷ ಶ್ರೀಲಂಕಾ ವಿರುದ್ಧ 0-3 ಅಂತರದ ಸೋಲು ತಂಡಕ್ಕೆ ಋಣಾತ್ಮಕವಾಗಿ ಪರಿಣಮಿಸಿದೆ. ಭಾರತದ ಮಾಜಿ ನಾಯಕ ಸೌರವ್ ಗಂಗುಲಿಯವರು ಭಾರತ ತಂಡ ಆಸೀಸ್ ವಿರುದ್ಧ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಲಿದೆ ಎಂದು ಭವಿಷ್ಯ ನುಡಿದರೆ, ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಸ್ಮಿತ್ ಪಡೆ ತಾನು ಕಂಡ ಅತ್ಯಂತ ದುರ್ಬಲ ತಂಡವಾಗಿದ್ದಾಗಿ ಹೇಳಿದ್ದಾರೆ.

ಭಾರತ ತಂಡ ನಾಯಕ ಕೊಹ್ಲಿಯನ್ನು ಹೆಚ್ಚು ನೆಚ್ಚಿಕೊಂಡಿದೆ. ಜುಲೈ ಬಳಿಕ ಕೊಹ್ಲಿ ನಾಲ್ಕು ಬಾರಿ ದ್ವಿಶತಕ ಬಾರಿಸಿದ್ದಾರೆ. ಕೊಹ್ಲಿಯ ಈಗಿನ ಫಾರ್ಮ್‌ನ್ನು ಡಾನ್ ಬ್ರಾಡ್ಮನ್(99.94 ಸರಾಸರಿ) ಸಾಧನೆಗೆ ಹೋಲಿಸಲಾಗುತ್ತಿದೆ. ಮತ್ತೊಂದೆಡೆ, ಆಸೀಸ್ ಮಾಜಿ ನಾಯಕ ಸ್ಟೀವ್‌ವಾ ಅವರು ಅಶ್ವಿನ್‌ರನ್ನು ಬೌಲಿಂಗ್‌ನ ಬ್ರಾಡ್ಮನ್ ಎಂದು ಬಣ್ಣಿಸಿದ್ದಾರೆ. ಟೀಮ್ ನ್ಯೂಸ್: ಭಾರತ ತಂಡ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಜಯಂತ್ ಯಾದವ್ ಅವರು ಅಶ್ವಿನ್ ಹಾಗೂ ಜಡೇಜರೊಂದಿಗೆ ದಾಳಿಗಿಳಿಯುವ ಸಾಧ್ಯತೆಯಿದೆ. ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿದ ತಂಡದಲ್ಲಿ ಕೇವಲ ಒಂದು ಬದಲಾವಣೆಯಾಗುವ ಸಾಧ್ಯತೆಯಿದ್ದು, ಯಾದವ್ ಸೇರ್ಪಡೆ ಅದರಲ್ಲಿ ಮುಖ್ಯವಾಗಿದೆ.

 ಆಸ್ಟ್ರೇಲಿಯ ತಂಡ ಡೇವಿಡ್ ವಾರ್ನರ್ ಹಾಗೂ ಕ್ವೀನ್ಸ್‌ಲ್ಯಾಂಡ್ ಓಪನ್ ಮ್ಯಾಟ್ ರೆನ್‌ಶಾಗೆ ಇನಿಂಗ್ಸ್ ಆರಂಭಿಸಲು ಸೂಚಿಸುವ ಸಾಧ್ಯತೆಯಿದೆ. ಉಸ್ಮಾನ್ ಖ್ವಾಜಾ ಅವಕಾಶ ಕಳೆದುಕೊಳ್ಳುವ ಸೂಚನೆಯಿದೆ. ಖ್ವಾಜಾ ಬದಲಿಗೆ ಶಾನ್ ಮಾರ್ಷ್ 3ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆಲ್‌ರೌಂಡರ್ ಹಿಲ್ಟನ್ ಕಾರ್ಟ್‌ರೈಟ್ ಬದಲಿಗೆ ಮಿಚೆಲ್ ಮಾರ್ಷ್ ಆಸ್ಟ್ರೇಲಿಯದ ಅಂತಿಮ 11ರ ಬಳಗಕ್ಕೆ ಸೇರುವ ಸಾಧ್ಯತೆಯಿದೆ.

ಮುಂಬೈನಲ್ಲಿ ನಡೆದಿದ್ದ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಕ್ರಮವಾಗಿ 4 ಹಾಗೂ 3 ವಿಕೆಟ್‌ಗಳನ್ನು ಕಬಳಿಸಿದ್ದ ಸ್ಪಿನ್ನರ್‌ಗಳಾದ ನಥಾನ್ ಲಿಯೊನ್ ಹಾಗೂ ಸ್ಟೀವ್ ಒ’ಕೀಫೆ ಅಂತಿಮ 11ರಲ್ಲಿ ಸ್ಥಾನ ಪಡೆಯುವುದು ಖಚಿತ.

ಪಿಚ್ ಹಾಗೂ ಹವಾಗುಣ

ಮೊತ್ತ ಮೊದಲ ಬಾರಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಂಡಿರುವ ಪುಣೆ ಪಿಚ್ ಹೆಚ್ಚು ಒಣಗಿದ್ದು, ಗರಿಷ್ಠ ಉಷ್ಣಾಂಶ 36 ಡಿಗ್ರಿಯಷ್ಟಿದೆ. ಪಿಚ್ ಡ್ರೈ ಆಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಮೂರನೆ ಸ್ಪಿನ್ನರ್‌ನ್ನು ಅಂತಿಮ 11ರ ಬಳಗಕ್ಕೆ ಪರಿಗಣಿಸಬಹುದು. ಪಿಚ್‌ನಲ್ಲಿ ಹೆಚ್ಚು ಟರ್ನ್ ಆಗುವ ಸಾಧ್ಯತೆಯಿಲ್ಲ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ. ಆದರೆ, ಪಿಚ್‌ನಲ್ಲಿ ರಿವರ್ಸ್ ಸ್ವಿಂಗ್ ಆಗುವ ಸಾಧ್ಯತೆಯಿದೆ.

ಹೈಲೈಟ್ಸ್

*ಪುಣೆಯ ಎಂಸಿಎ ಸ್ಟೇಡಿಯಂ ಟೆಸ್ಟ್ ಕ್ರಿಕೆಟ್‌ನ ಆತಿಥ್ಯವಹಿಸಿಕೊಳ್ಳುತ್ತಿರುವ ಭಾರತದ 25ನೆ ತಾಣವಾಗಿದೆ. ಆಸ್ಟ್ರೇಲಿಯದಲ್ಲಿ ಕೇವಲ 9 ಟೆಸ್ಟ್ ತಾಣಗಳಿವೆ.

*ಐಸಿಸಿ ಟೆಸ್ಟ್ ರ್ಯಾಂಕಿನ ಪ್ರಕಾರ ಪುಣೆ ಟೆಸ್ಟ್‌ನಲ್ಲಿ ವಿಶ್ವದ ಇಬ್ಬರು ಬ್ಯಾಟ್ಸ್‌ಮನ್‌ಗಳು, ವಿಶ್ವದ ಅಗ್ರಮಾನ್ಯ ಮೂವರು ಸ್ಪಿನ್ನರ್‌ಗಳು ಆಡಲಿದ್ದಾರೆ. ಅವರುಗಳೆಂದರೆ: ಸ್ಟೀವನ್ ಸ್ಮಿತ್, ವಿರಾಟ್ ಕೊಹ್ಲಿ, ಆರ್.ಅಶ್ವಿನ್, ರವೀಂದ್ರ ಜಡೇಜ ಹಾಗೂ ಜೊಶ್ ಹೇಝಲ್‌ವುಡ್.

* ಆಸ್ಟ್ರೇಲಿಯ ಕ್ರಿಕೆಟ್ ತಂಡ ಎರಡು ಪ್ರಕಾರದ ಪಂದ್ಯಗಳನ್ನು ಎರಡು ದೇಶಗಳಲ್ಲಿ ಸತತ ದಿನಗಳಲ್ಲಿ ಆಡುತ್ತಿದ್ದು, ಇದೊಂದು ವಿಶೇಷವಾಗಿದೆ. ಬುಧವಾರ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ ತಂಡ ಏಕದಿನ ಪಂದ್ಯ ಆಡಿದರೆ, ಗುರುವಾರದಿಂದ ಪುಣೆಯಲ್ಲಿ ಟೆಸ್ಟ್ ಪಂದ್ಯ ಆಡಲಿದೆ. 1930ರಲ್ಲಿ ಇಂಗ್ಲೆಂಡ್ ತಂಡ ಒಂದೇ ದಿನ ಎರಡು ಟೆಸ್ಟ್‌ಗಳನ್ನು ಆಡಿತ್ತು. ಒಂದು ಪಂದ್ಯ ನ್ಯೂಝಿಲೆಂಡ್‌ನಲ್ಲಿ, ಮತ್ತೊಂದು ಪಂದ್ಯ ವೆಸ್ಟ್‌ಇಂಡೀಸ್‌ನಲ್ಲಿ ಆಡಿತ್ತು.

ಭಾರತ(ಸಂಭಾವ್ಯ): ಕೆ.ಎಲ್.ರಾಹುಲ್, ಎಂ.ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ವೃದ್ದಿಮಾನ್ ಸಹಾ(ವಿಕೆಟ್‌ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಜಯಂತ್ ಯಾದವ್, ಇಶಾಂತ್ ಶರ್ಮ, ಉಮೇಶ್ ಯಾದವ್.

ಆಸ್ಟ್ರೇಲಿಯ(ಸಂಭಾವ್ಯ): ಡೇವಿಡ್ ವಾರ್ನರ್, ಮ್ಯಾಟ್ ರೆನ್‌ಶಾ, ಸ್ಟೀವನ್ ಸ್ಮಿತ್(ನಾಯಕ), ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಿಚೆಲ್ ಮಾರ್ಷ್, ಮ್ಯಾಥ್ಯೂವೇಡ್(ವಿಕೆಟ್‌ಕೀಪರ್), ಮಿಚೆಲ್ ಸ್ಟಾರ್ಕ್, ಸ್ಟೀವ್ ಒ’ಕೀಫೆ, ನಥನ್ ಲಿಯೊನ್, ಜೊಶ್ ಹೇಝಲ್‌ವುಡ್.

ಪಂದ್ಯದ ಸಮಯ:ಬೆಳಗ್ಗೆ 9:30.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News