ರಾಸ್ ಟೇಲರ್ ಶತಕ, ನ್ಯೂಝಿಲೆಂಡ್‌ಗೆ ಆರು ರನ್ ಜಯ

Update: 2017-02-22 18:21 GMT

ಕ್ರೈಸ್ಟ್‌ಚರ್ಚ್, ಫೆ.22: ರಾಸ್ ಟೇಲರ್ ಬಾರಿಸಿದ ದಾಖಲೆಯ ಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ದ್ವಿತೀಯ ಏಕದಿನ ಪಂದ್ಯವನ್ನು 6 ರನ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ತಂಡ ಟೇಲರ್ ಶತಕದ(ಅಜೇಯ 102) ಸಹಾಯದಿಂದ ದಕ್ಷಿಣ ಆಫ್ರಿಕದ ಗೆಲುವಿಗೆ 290 ರನ್ ಕಠಿಣ ಗುರಿ ನೀಡಿತ್ತು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್(65 ಎಸೆತ, 57 ರನ್), ಡ್ವೈನ್ ಪ್ರಿಟೋರಿಯಸ್(26 ಎಸೆತ, 50 ರನ್) ಹಾಗೂ ಎಬಿಡಿವಿಲಿಯರ್ಸ್(49 ಎಸೆತ, 45) ಸಾಹಸದಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 283 ರನ್ ಗಳಿಸಿದ್ದ ಹರಿಣಪಡೆ ಗೆಲುವಿನ ಹೊಸ್ತಿಲಲ್ಲಿ ಎಡವಿತ್ತು.

ಈ ಸೋಲಿನೊಂದಿಗೆ ಸತತ 12 ಪಂದ್ಯಗಳಲ್ಲಿ ಅಜೇಯವಾಗುಳಿದಿದ್ದ ಆಫ್ರಿಕದ ಗೆಲುವಿನ ಓಟಕ್ಕೆ ಬ್ರೇಕ್ ಬಿತ್ತು. ರೋಚಕ ಜಯ ಸಾಧಿಸಿರುವ ಆತಿಥೇಯರು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದರು.

ಟೇಲರ್ ದಾಖಲೆಯ ಶತಕ: ಕಿವೀಸ್‌ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಾಸ್ ಟೇಲರ್ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ 17ನೆ ಶತಕವನ್ನು ಪೂರೈಸಿದರು. ಈ ಮೂಲಕ ತಮ್ಮದೇ ದೇಶದ ನಥನ್ ಆ್ಯಸ್ಟ್ಲೆ ನಿರ್ಮಿಸಿದ್ದ ದಾಖಲೆಯನ್ನು(16 ಶತಕ)ಮುರಿದರು.

ನಾಯಕ ಕೇನ್ ವಿಲಿಯಮ್ಸನ್(69 ರನ್, 75 ಎಸೆತ, 6 ಬೌಂಡರಿ) ಹಾಗೂ ಆಲ್‌ರೌಂಡರ್ ನೀಶಾಮ್(ಅಜೇಯ 71, 57 ಎಸೆತ, 6 ಬೌಂಡರಿ) ಅವರೊಂದಿಗೆ ನಿರ್ಣಾಯಕ ಜೊತೆಯಾಟ ನಡೆಸಿದ ಟೇಲರ್ 6000ರನ್ ಪೂರೈಸಿದ ನ್ಯೂಝಿಲೆಂಡ್‌ನ 4ನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್‌ನ ಆರಂಭ ಕಳಪೆಯಾಗಿತ್ತು. 13ನೆ ಓವರ್‌ನಲ್ಲಿ 53 ರನ್‌ಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಬ್ರೌನ್ಲಿ(34) ಹಾಗೂ ಲಥಾಮ್(02) ವಿಕೆಟ್‌ನ್ನು ಕಳೆದುಕೊಂಡಿತ್ತು. ಆಗ ವಿಲಿಯಮನ್ಸ್ ಹಾಗೂ ಟೇಲರ್ 3ನೆ ವಿಕೆಟ್‌ಗೆ 104 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ವಿಲಿಯಮ್ಸನ್ ಔಟಾದ ಬೆನ್ನಿಗೇ ಬ್ರೂಮ್(02) ಔಟಾದರು. ಆಗ ಕಿವೀಸ್ ಸ್ಕೋರ್ 4 ವಿಕೆಟ್‌ಗೆ 166. ಆಗ 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 123 ರನ್ ಸೇರಿಸಿದ ಟೇಲರ್-ನೀಶಮ್ ಜೋಡಿ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 289 ರನ್ ಗಳಿಸಲು ನೆರವಾದರು. ದ.ಆಫ್ರಿಕದ ಪರ ಪ್ರಿಟೋರಿಯಸ್(2-40) ಯಶಸ್ವಿ ಬೌಲರ್ ಎನಿಸಿಕೊಂಡರು.

 ಗೆಲ್ಲಲು ಕಠಿಣ ಗುರಿ ಪಡೆದಿದ್ದ ದ.ಆಫ್ರಿಕಕ್ಕೆ ಕ್ವಿಂಟನ್ ಡಿಕಾಕ್(57) ಹಾಗೂ ಡಿವಿಲಿಯರ್ಸ್(45) ಅಗ್ರ ಕ್ರಮಾಂಕದಲ್ಲಿ ಉತ್ತಮ ಆರಂಭವನ್ನೇ ಪಡೆದಿದ್ದರೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಪ್ರವಾಸಿಗರು ಒಂದು ಹಂತದಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 214 ರನ್ ಗಳಿಸಿದ್ದರು. ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ಪ್ರಿಟೋರಿಯಸ್(50 ರನ್, 27 ಎಸೆತ, 4 ಬೌಂಡರಿ, 2 ಸಿಕ್ಸರ್) ಪಂದ್ಯವನ್ನು ಸಮತೋಲಿನಕ್ಕೆ ತಂದರು.

15 ರನ್‌ಗೆ ಜೀವದಾನ ಪಡೆದಿದ್ದ ಪ್ರಿಟೋರಿಯಸ್‌ಗೆ ಟ್ರೆಂಟ್ ಬೌಲ್ಟ್(3-63) ಪೆವಿಲಿಯನ್ ಹಾದಿ ತೋರಿಸಿದರು. ಆಗ ದ.ಆಫ್ರಿಕದ ಗೆಲುವಿಗೆ ಒಂದು ಓವರ್‌ನಲ್ಲಿ 15 ರನ್ ಅಗತ್ಯವಿತ್ತು. ಆ್ಯಂಡಿಲ್ ಫೆಲುಕ್ವಾವೊ(ಅಜೇಯ 29) ಅಂತಿಮ 2 ಎಸೆತಗಳಲ್ಲಲಿ ಎರಡು ಬೌಂಡರಿ ಬಾರಿಸಲಷ್ಟೇ ಶಕ್ತರಾದರು. ಕಿವೀಸ್ 6 ರನ್‌ಗಳ ರೋಚಕ ಜಯ ಸಾಧಿಸಿತು.

ಸರಣಿಯ ಮೂರನೆ ಏಕದಿನ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ ಶನಿವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್

ನ್ಯೂಝಿಲೆಂಡ್: 50 ಓವರ್‌ಗಳಲ್ಲಿ 289/4

(ರಾಸ್ ಟೇಲರ್ ಅಜೇಯ 102, ನೀಶಾಮ್ ಅಜೇಯ 71, ವಿಲಿಯಮ್ಸನ್ 69, ಬ್ರೌನ್ಲೀ 34, ಪ್ರಿಟೋರಿಯಸ್ 2-40)

ದಕ್ಷಿಣ ಆಫ್ರಿಕ: 50 ಓವರ್‌ಗಳಲ್ಲಿ 283/9

 (ಕ್ವಿಂಟನ್ ಡಿಕಾಕ್ 57, ಪ್ರಿಟೋರಿಯಸ್ 50, ಡಿವಿಲಿಯರ್ಸ್ 45, ಡುಮಿನಿ 34, ಬೌಲ್ಟ್ 3-63, ಸ್ಯಾಂಟ್ನರ್ 2-46)

ಪಂದ್ಯಶ್ರೇಷ್ಠ: ರಾಸ್ ಟೇಲರ್.

ಅಂಕಿ-ಅಂಶ

12: ದಕ್ಷಿಣ ಆಫ್ರಿಕದ ಸತತ 12 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಹರಿಣ ಪಡೆ ಕಳೆದ ವರ್ಷ ಬ್ರಿಡ್ಜ್‌ಟೌನ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಬಾರಿ ಸೋತಿತ್ತು. ಆಸ್ಟ್ರೇಲಿಯದ ಬಳಿಕ(21 ಗೆಲುವು) ಗರಿಷ್ಠ ಸತತ ಪಂದ್ಯಗಳನ್ನು ಜಯಿಸಿದ ಎರಡನೆ ತಂಡ ಆಫ್ರಿಕ. ಆಫ್ರಿಕದ ಗೆಲುವಿನ ಓಟಕ್ಕೆ ಕಿವೀಸ್ ಕಡಿವಾಣ ಹಾಕಿದೆ.

06: ಎಲ್ಲ ಪೂರ್ಣ ಸದಸ್ಯ ರಾಷ್ಟ್ರದ ವಿರುದ್ಧ ಶತಕ ಬಾರಿಸಿದ ವಿಶ್ವದ ಆರನೆ ಬ್ಯಾಟ್ಸ್‌ಮನ್ ರಾಸ್ ಟೇಲರ್. ರಿಕಿ ಪಾಂಟಿಂಗ್, ಹರ್ಷಲ್ ಗಿಬ್ಸ್, ಸಚಿನ್ ತೆಂಡುಲ್ಕರ್, ಹಾಶಿಮ್ ಅಮ್ಲ ಹಾಗೂ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಟೇಲರ್ ಆಫ್ರಿಕದ ವಿರುದ್ಧ ಚೊಚ್ಚಲ ಶತಕ ಬಾರಿಸಿ ಈ ಸಾಧನೆ ಮಾಡಿದರು.

10: ಟೇಲರ್ ಹಾಗೂ ಕೇನ್ ವಿಲಿಯಮ್ಸನ್ 3ನೆ ವಿಕೆಟ್‌ನಲ್ಲಿ 10ನೆ ಬಾರಿ ಶತಕದ ಜೊತೆಯಾಟ ನಡೆಸಿದ್ದಾರೆ. ಈ ಮೂಲಕ ಕುಮಾರ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆಯೊಂದಿಗೆ ಜಂಟಿ ದಾಖಲೆ ನಿರ್ಮಿಸಿದರು. ಕಿವೀಸ್‌ನ ಈ ಜೋಡಿ ಒಟ್ಟಾರೆ 11ನೆ ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದೆ.

04: ರಾಸ್ ಟೇಲರ್ ಏಕದಿನ ಕ್ರಿಕೆಟ್‌ನಲ್ಲಿ 6000 ರನ್ ಪೂರೈಸಿದ ನ್ಯೂಝಿಲೆಂಡ್‌ನ 4ನೆ ಬ್ಯಾಟ್ಸ್‌ಮನ್. ಅಸ್ಟ್ಲೇ, ಸ್ಟೀಫನ್ ಫ್ಲೆಮಿಂಗ್, ಬ್ರೆಂಡನ್ ಮೆಕಲಂ ಈ ಸಾಧನೆ ಮಾಡಿದ್ದಾರೆ. 12: ಟ್ರೆಂಟ್ ಬೌಲ್ಟ್ ಈ ವರ್ಷ ಆಡಿರುವ 4ನೆ ಏಕದಿನ ಪಂದ್ಯದಲ್ಲಿ 12ನೆ ವಿಕೆಟ್ ಕಬಳಿಸಿದರು.

01: ಜೇಮ್ಸ್ ನಿಶಾಮ್ ತವರು ನೆಲದಲ್ಲಿ ಆಡಿದ 10ನೆ ಇನಿಂಗ್ಸ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದರು. ಒಟ್ಟಾರೆ 3ನೆ ಅರ್ಧಶತಕ ಇದಾಗಿದೆ. ಈ ಹಿಂದೆ ಭಾರತ ಹಾಗೂ ಆಸ್ಟ್ರೇಲಿಯದ ವಿರುದ್ಧ ಅರ್ಧಶತಕ ಬಾರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News