ಮಾಡದ ತಪ್ಪಿಗೆ ಐಪಿಎಲ್ ಅವಕಾಶ ಕಳಕೊಂಡ ಯುವ ಪ್ರತಿಭೆ

Update: 2017-02-23 05:36 GMT

ಮುಂಬೈ, ಫೆ.23: ಮಧ್ಯ ಪ್ರದೇಶದ ಪ್ರತಿಭಾವಂತ ಕ್ರಿಕೆಟಿಗ ಹರಪ್ರೀತ್ ಸಿಂಗ್ ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಇನ್ಯಾರದೋ ತಪ್ಪಿಗೆ ಬೆಲೆತೆತ್ತು ಅವಕಾಶ ಕಳೆದುಕೊಂಡ ಘಟನೆ ನಡೆದಿದೆ.

ಐಪಿಎಲ್ ಹರಾಜು ನಡೆದ ಸೋಮವಾರ ಬೆಳಗ್ಗೆ ಇನ್ನೊಬ್ಬ ಅಂಡರ್ 19 ಕ್ರಿಕೆಟಿಗ ಹರ್ಮೀತ್ ಸಿಂಗ್ ಅವರು ತಮ್ಮ ಕಾರನ್ನು ನೇರವಾಗಿ ಮುಂಬೈಯ ಅಂಧೇರಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ಗೇ ನುಗ್ಗಿಸಿ ಬಂಧನಕ್ಕೊಳಗಾಗಿದ್ದರು. ಆದರೆ ಸುದ್ದಿ ಸಂಸ್ಥೆಗಳು ಹರ್ಮೀತ್ ಸಿಂಗ್ ಎಂದು ಈ ಸುದ್ದಿಯನ್ನು ಪ್ರಕಟಿಸುವ ಬದಲು 'ಹರಪ್ರೀತ್‌ಸಿಂಗ್ ತಪ್ಪು ಮಾಡಿದ್ದಾರೆ' ಎಂದು ವರದಿ ಮಾಡಿದ್ದವು. ಇದನ್ನು ತಿಳಿದ ಕೂಡಲೇ ಐಪಿಎಲ್ ಹರಾಜಿನಲ್ಲಿ ಹರಪ್ರೀತ್ ಅವರನ್ನು ತೆಗೆದುಕೊಳ್ಳಲು ಉತ್ಸುಕವಾಗಿದ್ದರೂ ಅವರನ್ನು ಕೈಬಿಡಲಾಗಿತ್ತು.

24 ವರ್ಷದ ಹರ್ಮೀತ್ ಹಾಗೂ 25 ವರ್ಷದ ಹರ್‌ಪ್ರೀತ್ ಇಬ್ಬರೂ ಜೂನಿಯರ್ ವರ್ಲ್ಡ್ ಕಪ್ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ನಂತರ ಅವರಿಬ್ಬರ ದಾರಿಯೂ ಬೇರೆ ಬೇರೆಯಾಗಿತ್ತು. ಹರ್ಮೀತ್ ಅವರು ನಂತರ ಮುಂಬೈಯ ಯಾವೊಂದು ತಂಡದಲ್ಲೂ ಅವಕಾಶ ಪಡೆದಿಲ್ಲ. ಆದರೆ ಹರಪ್ರೀತ್ ಅವರು ಮಧ್ಯಪ್ರದೇಶ ತಂಡದಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಸಯ್ಯದ್ ಮುಶ್ತಾಕ್ ಅಲಿ ಟ್ರೋಫಿ ಪಂಧ್ಯಾಟದಲ್ಲಿ ಅವರು ಟಾಪ್ ಸ್ಕೋರರ್ ಆಗಿದ್ದರಲ್ಲದೆ, ಸೆಂಟ್ರಲ್ ಝೋನ್ ಪ್ರತಿನಿಧಿಸಿದ್ದ ಅವರು ನಾಲ್ಕು ಪಂದ್ಯಗಳಲ್ಲಿ 211 ರನ್ನುಗಳನ್ನು ಬಾರಿಸಿದ್ದರು. ದಕ್ಷಿಣ ವಲಯದೆದುರಿನ ಪಂದ್ಯದಲ್ಲಿ ಅವರು 51 ಬಾಲುಗಳಿಗೆ 92 ರನ್ ಬಾರಿಸಿದ್ದರಲ್ಲದೆ, ಎರಡು ಅರ್ಧ ಶತಕಗಳನ್ನೂ ಸಿಡಿಸಿದ್ದರು.

ಇದೀಗ ಅವರ ಐಪಿಎಲ್ ಭವಿಷ್ಯ ಡೋಲಾಯಮಾನವಾಗಿದೆ. ತಮ್ಮಹೆಸರೇ ಹಾಳಾಗಿ ಹೋಯಿತೆಂದು ಹರಪ್ರೀತ್ ದುಃಖಿಸುತ್ತಾರೆ. ಆದರೆ ಈಗಲೂ ಎಲ್ಲವೂ ಮುಗಿದು ಹೋಗಿಲ್ಲ. ಯಾವ ಆಟಗಾರನಾದರೂ ಗಾಯಾಳುವಾದರೆ, ಹರಪ್ರೀತ್ ನಮ್ಮ ಮೊದಲ ಆಯ್ಕೆಯಾಗುತ್ತಾರೆ ಎಂದು ಫ್ರಾಂಚೈಸಿಯೊಂದರ ಪ್ರತಿನಿಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News