ಪುಣೆ ತಂಡದ ನಾಯಕತ್ವದಿಂದ ಧೋನಿ ನಿರ್ಗಮನ: ವೀರೇಂದ್ರ ಸೆಹ್ವಾಗ್ ಫುಲ್ ಖುಷ್!

Update: 2017-02-23 08:37 GMT

ಪುಣೆ,ಫೆ.22: ಹತ್ತನೆ ಆವೃತ್ತಿಯ ಐಪಿಎಲ್‌ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಒಂದು ದಿನ ಮುಂಚಿತವಾಗಿ ಐಪಿಎಲ್ ಫ್ರಾಂಚೈಸಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡ ಎಂಎಸ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್‌ಗೆ ನಾಯಕನ ಪಟ್ಟ ಕಟ್ಟಿತ್ತು. ಪುಣೆ  ತಂಡದ ಈ ನಿರ್ಧಾರ ಗೊಂದಲಕ್ಕೆ ಕಾರಣವಾಗಿದ್ದು, ಧೋನಿ ಸ್ವ- ಇಚ್ಛೆಯಿಂದ ನಾಯಕತ್ವ ತ್ಯಜಿಸಿದ್ದಾರೋ, ಅಥವಾ ಬಲವಂತವಾಗಿ ನಾಯಕತ್ವದಿಂದ ಕೆಳಿಸಲಾಗಿದೆಯೋ ಎಂಬ ಚರ್ಚೆ ನಡೆಯುತ್ತಿದೆ.

ಧೋನಿ ಪುಣೆ ತಂಡದ ನಾಯಕತ್ವ ಕಳೆದುಕೊಂಡಿರುವ ವಿಷಯದಿಂದ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ಗೆ ತುಂಬಾ ಸಂತೋಷವಾಗಿದೆಯಂತೆ. ಅದಕ್ಕೆ ಕಾರಣವೇನೆಂದು ಅವರೇ ಹೇಳಿದ್ದಾರೆ ಓದಿ..

‘‘ಧೋನಿ ಪುಣೆ ತಂಡದ ನಾಯಕನಾಗದೇ ಇರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಏಕೆಂದರೆ ನಮ್ಮ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ನು ಮುಂದೆ ಪುಣೆ ತಂಡವನ್ನು ಸುಲಭವಾಗಿ ಸೋಲಿಸಬಹುದಾಗಿದೆ. ಆದರೆ, ಧೋನಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕನಾಗಿದ್ದಾರೆ’’ ಎಂದು ಪಂಜಾಬ್ ತಂಡದ ಕ್ರಿಕೆಟ್ ಆಪರೇಶನ್ ಹೆಡ್ ಆಗಿರುವ ಸೆಹ್ವಾಗ್ ಹೇಳಿದರು.
ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧೋನಿ ಕಳೆದ 9 ಆವೃತ್ತಿಯ ಐಪಿಎಲ್‌ನಲ್ಲಿ ಐಪಿಎಲ್ ತಂಡದ ನಾಯಕನಾಗಿದ್ದರು. 2008 ರಿಂದ 2015ರ ತನಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಧೋನಿ ಚೆನ್ನೈ ಫ್ರಾಂಚೈಸಿ ಅಮಾನತುಗೊಂಡ ಬಳಿಕ 2016ರಲ್ಲಿ ಪುಣೆ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು.
 ಧೋನಿ ನಾಯಕತ್ವದಲ್ಲಿ ಪುಣೆ ತಂಡ 2016ರಲ್ಲಿ 14 ಪಂದ್ಯಗಳ ಪೈಕಿ ಕೇವಲ 5ರಲ್ಲಿ ಜಯ ಸಾಧಿಸಿತ್ತು. ಧೋನಿ ಬ್ಯಾಟಿಂಗ್‌ನಲ್ಲಿ ಕಾಣಿಕೆ ನೀಡಲು ವಿಫಲರಾಗಿದ್ದರು. ಧೋನಿ 14 ಪಂದ್ಯಗಳಲ್ಲಿ 284 ರನ್ ಗಳಿಸಿದ್ದರು. ಧೋನಿ ಒಟ್ಟು 143 ಐಪಿಎಲ್ ಪಂದ್ಯಗಳಲ್ಲಿ 3,271 ರನ್ ಗಳಿಸಿದ್ದು, 39.40ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News