ಭಾರತ-ಇಂಗ್ಲೆಂಡ್ ಅಂಡರ್-19 ತಂಡಗಳ ದ್ವಿತೀಯ ಟೆಸ್ಟ್ ಡ್ರಾದತ್ತ

Update: 2017-02-23 18:07 GMT

ನಾಗ್ಪುರ, ಫೆ.24: ಭಾರತ ಹಾಗೂ ಇಂಗ್ಲೆಂಡ್‌ನ ಅಂಡರ್-19 ತಂಡಗಳ ನಡುವೆ ಇಲ್ಲಿನ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯ ಡ್ರಾದತ್ತ ಮುಖ ಮಾಡಿದೆ.

ಮೂರನೆ ದಿನವಾದ ಗುರುವಾರ 3 ವಿಕೆಟ್ ನಷ್ಟಕ್ಕೆ 153 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಸೌರಭ್ ಸಿಂಗ್(109) ಶತಕ, ಅಭಿಷೇಕ್ ಗೋಸ್ವಾಮಿ(58), ಡಿ.ಸುಂದರ್(55) ಹಾಗೂ ಸಿದ್ದಾರ್ಥ್(54) ಅರ್ಧಶತಕದ ನೆರವಿನಿಂದ 9 ವಿಕೆಟ್‌ಗಳ ನಷ್ಟಕ್ಕೆ 388ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಮೊದಲ ಇನಿಂಗ್ಸ್‌ನಲ್ಲಿ 13 ರನ್ ಮುನ್ನಡೆ ಸಾಧಿಸಿತು.

ಆತಿಥೇಯರ ಪರವಾಗಿ ಸೌರಭ್ ಹಾಗೂ ನೈಟ್‌ವಾಚ್‌ಮನ್ ಕನಿಷ್ಕ್ ಸೇಠ್ ಬ್ಯಾಟಿಂಗ್ ಮುಂದುವರಿಸಿದರು. ಕನಿಷ್ಕ್ ಆಟ ಆರಂಭವಾಗಿ ಒಂದು ಗಂಟೆಯಲ್ಲಿ ಪೆವಿಲಿಯನ್‌ಗೆ ಸೇರಿದರು.

 ಸೌರಭ್‌ಗೆ ಸಾಥ್ ನೀಡಿದ ಸುಂದರ್ 70 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಇಬ್ಬರು 5ನೆ ವಿಕೆಟ್‌ಗೆ 97 ರನ್ ಜೊತೆಯಾಟ ನಡೆಸಿ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸುವ ಸೂಚನೆ ನೀಡಿದ್ದರು. ದರೆ, ಆ್ಯರೊನ್ ಬಿಯರ್ಡ್ ಈ ಜೋಡಿಯನ್ನು ಬೇರ್ಪಡಿಸಿದರು.

ಮೊದಲ ಪಂದ್ಯದಲ್ಲಿ ತಾಳ್ಮೆಯ 62 ರನ್ ಗಳಿಸಿದ್ದ 19ರ ಹರೆಯದ ಸೌರಭ್ 266 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ ಶತಕ ತಲುಪಿದರು. ಸೌರಭ್ ಟೀ ವಿರಾಮದ ಬಳಿಕ 109 ರನ್ ಗಳಿಸಿ ಔಟಾದರು. ಸಿದ್ದಾರ್ಥ್ ಅಕ್ರೆ 84 ಎಸೆತಗಳಲ್ಲಿ 50 ರನ್ ಪೂರೈಸಿದರು.

ಎರಡನೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಅಂಡರ್-19 ತಂಡ: 375, 34/2

ಭಾರತ ಅಂಡರ್-19 ತಂಡ: 388/9 ಡಿಕ್ಲೇರ್

(ಸೌರಭ್ ಸಿಂಗ್ 109, ಅಭಿಷೇಕ್ ಗೋಸ್ವಾಮಿ 58, ಡಿ.ಸುಂದರ್ 55, ಅಕ್ರೆ 54,ಬಿಯರ್ಡ್ 2/56, ವುಡ್ಸ್ 2-61)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News