ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್: ಸಮೀರ್ ಜೀವನಶ್ರೇಷ್ಠ ಸಾಧನೆ

Update: 2017-02-23 18:12 GMT

ಹೊಸದಿಲ್ಲಿ, ಫೆ.23: ಇತ್ತೀಚೆಗೆ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಿಯನ್ನು ಗೆದ್ದುಕೊಂಡಿರುವ ಸಮೀರ್ ವರ್ಮ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ 11 ಸ್ಥಾನ ಭಡ್ತಿ ಪಡೆದು 23ನೆ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದರು.

22ರ ಹರೆಯದ ವರ್ಮ ಇದೀಗ ಅಗ್ರ ರ್ಯಾಂಕಿನ ಭಾರತೀಯ ಆಟಗಾರರಾದ ಅಜಯ್ ಜಯರಾಮ್, ಎಚ್‌ಎಸ್ ಪ್ರಣಯ್‌ಗಿಂತ ಕೇವಲ ನಾಲ್ಕು ಸ್ಥಾನದಿಂದ ಹಿಂದಿದ್ದಾರೆ. ಈ ಇಬ್ಬರು ಆಟಗಾರರು ರ್ಯಾಂಕಿಂಗ್‌ನಲ್ಲಿ 2 ಸ್ಥಾನ ಭಡ್ತಿ ಪಡೆದು 21ನೆ ಸ್ಥಾನಕ್ಕೇರಿದ್ದಾರೆ.

 ಕಳೆದ ತಿಂಗಳು ನ್ಯಾಶನಲ್ ಚಾಂಪಿಯನ್‌ಶಿಪ್ ಜಯಿಸಿದ್ದ ವರ್ಮ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಪ್ರಶಸ್ತಿಯನ್ನು ಜಯಿಸುವುದರೊಂದಿಗೆ ಚೊಚ್ಚಲ ಗ್ರಾನ್‌ಪ್ರಿಕ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಕಳೆದ ವರ್ಷ ಹಾಂಕಾಂಗ್ ಸೂಪರ್ ಸರಣಿಯಲ್ಲಿ ಫೈನಲ್‌ಗೆ ತಲುಪಿದ್ದರು.

ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಸೈನಾ ನೆಹ್ವಾಲ್ 10ನೆ ಸ್ಥಾನಕ್ಕೆ ಕುಸಿದಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಐದನೆ ಸ್ಥಾನ ತಲುಪಿದ್ದಾರೆ.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಣವ್ ಜೆ.ಚೋಪ್ರಾ ಹಾಗೂ ಎನ್.ಸಿಕ್ಕಿ ರೆಡ್ಡಿ 13ನೆ ಸ್ಥಾನಕ್ಕೇರಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಭಡ್ತಿ ಪಡೆದಿರುವ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ 23ನೆ ಸ್ಥಾನಕ್ಕೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News