ಅಂಡರ್-17 ವಿಶ್ವಕಪ್ ಟಿಕೆಟ್ ಬೆಲೆ 100 ರೂ.ಗಿಂತ ಕಡಿಮೆ!

Update: 2017-02-23 18:23 GMT

ಕೋಲ್ಕತಾ, ಫೆ.23: ಭಾರತದಲ್ಲಿ ನಡೆಯಲಿರುವ ಮೊತ್ತ ಮೊದಲ ಅಂಡರ್-17 ವಿಶ್ವಕಪ್  ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಟಿಕೆಟ್‌ಗಳ ಬೆಲೆಯನ್ನು 100 ರೂ.ಗಿಂತ ಕಡಿಮೆ ನಿಗದಿಪಡಿಸಲಾಗುತ್ತದೆ ಎಂದು ಟೂರ್ನಮೆಂಟ್‌ನ ನಿರ್ದೇಶಕ ಜೇವಿಯೆರ್ ಸೆಪ್ಪಿ ತಿಳಿಸಿದ್ದಾರೆ.

‘‘ನಾವು ಮೇ ತಿಂಗಳ ಮಧ್ಯಭಾಗದಲ್ಲಿ ಟಿಕೆಟ್‌ಗಳ ಬಿಡುಗಡೆ ಮಾಡಲಿದ್ದೇವೆ. ಟಿಕೆಟ್‌ಗಳ ಬೆಲೆ ಸಿನೆಮಾ ಟಿಕೆಟ್‌ಗಳಿಗಿಂತ ಕಡಿಮೆ ಇರಲಿದೆ’’ ಎಂದು ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೆಪ್ಪಿ ತಿಳಿಸಿದ್ದಾರೆ.

‘‘ಕೋಲ್ಕತಾ ಸೇರಿದಂತೆ ಭಾರತದ ಇತರ ಐದು ಫುಟ್ಬಾಲ್ ತಾಣಗಳ ತಯಾರಿಯು ತೃಪ್ತಿ ನೀಡಿದೆ. ಇಲ್ಲಿನ ಸ್ಟೇಡಿಯಂ 1,20,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಆದರೆ, ಇದೀಗ 87,000ಕ್ಕೆ ಕುಸಿದಿದೆ. ಇಲ್ಲಿನ ಕಾಮಗಾರಿ ಪೂರ್ಣಗೊಳ್ಳಲು ಸಮಯ ಬೇಕು. ಮುಂದಿನ ತಿಂಗಳು ಫಿಫಾ ತಪಾಸಣಾ ತಂಡ ಇಲ್ಲಿಗೆ ಭೇಟಿ ನೀಡುವಾಗ 90 ರಿಂದ 95 ಶೇ. ಕಾಮಗಾರಿ ಮುಗಿಯಬಹುದು’’ ಎಂದು ಸೆಪ್ಪಿ ಹೇಳಿದ್ದಾರೆ.

ಸ್ಟೇಡಿಯಂನ ಅಧಿಕಾರಿಗಳ ಪ್ರಕಾರ ಫುಟ್ಬಾಲ್ ಸ್ಟೇಡಿಯಂ ನವೀಕರಣ ಕಾಮಗಾರಿಗೆ ಸುಮಾರು 150 ಕೋ.ರೂ. ಅಗತ್ಯವಿದೆ. ಕೇಂದ್ರ ಸರಕಾರ 14 ಕೋಟಿ. ರೂ. ನೀಡಲಿದ್ದು, ಉಳಿದ ಹಣವನ್ನು ರಾಜ್ಯ ಸರಕಾರವೇ ಭರಿಸಬೇಕಾಗಿದೆ. ಸ್ಟೇಡಿಯಂ ಕಾಮಗಾರಿ 2014ರಲ್ಲಿ ಆರಂಭವಾಗಿದ್ದು, ಮುಂದಿನ ತಿಂಗಳು ಕೊನೆಗೊಳ್ಳುವ ಸಾಧ್ಯತೆಯಿದೆ.

ದಿಲ್ಲಿ ಅಕ್ಟೋಬರ್ 6 ರಿಂದ 28ರ ತನಕ ನಡೆಯಲಿರುವ ವಿಶ್ವಕಪ್‌ನ ಆತಿಥ್ಯವಹಿಸಿಕೊಳ್ಳಲಿದೆ ಎಂದು ಸೆಪ್ಪಿ ಸ್ಪಷ್ಟಪಡಿಸಿದರು.

‘‘ನಾವು ದೀಪಾವಳಿಯ ಬಳಿಕ ಮಾಲಿನ್ಯದ ಪರಿಣಾಮದ ಬಗ್ಗೆ ಅವಲೋಕನ ನಡೆಸಲಿದ್ದೇವೆ. ಆ ಬಳಿಕ ಪಂದ್ಯ ಆಯೋಜಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವೆವು’’ ಎಂದು ಸೆಪ್ಪಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News