ಅಸೌಖ್ಯದಿಂದ ಇನಿಂಗ್ಸ್ ನಡುವೆ ಮೈದಾನಕ್ಕೆ ವಾಪಸಾದ ಮ್ಯಾಟ್ ರೆನ್ಶಾ

Update: 2017-02-23 18:27 GMT

ಪುಣೆ, ಫೆ.23: ಆಸ್ಟ್ರೇಲಿಯದ ಆರಂಭಿಕ ಆಟಗಾರ ಮ್ಯಾಟ್ ರೆನ್‌ಶಾ ಬ್ಯಾಟಿಂಗ್ ಮಾಡುತ್ತಿದ್ದಾಗ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಇನಿಂಗ್ಸ್ ನಡುವೆಯೇ ಮೈದಾನವನ್ನು ತೊರೆದ ಪ್ರಸಂಗ ನಡೆಯಿತು.

ಗುರುವಾರ ಇಲ್ಲಿ ಆರಂಭವಾದ ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ರೆನ್‌ಶಾ 38 ರನ್ ಗಳಿಸಿದ್ದಾಗ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆಸ್ಟ್ರೇಲಿಯದ ಮಾಜಿ ನಾಯಕ ಅಲನ್ ಬಾರ್ಡರ್ ಸಹಿತ ಹಲವರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ ಕಾರಣ ರೆನ್‌ಶಾ ದಿನದಾಟದಂತ್ಯಕ್ಕೆ ತಂಡ 6 ವಿಕೆಟ್‌ಗೆ 190 ರನ್ ಗಳಿಸಿದ್ದಾಗ ಕ್ರೀಸ್‌ಗೆ ವಾಪಸಾದರು. ರೆನ್‌ಶಾ 156 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್‌ಗಳಿರುವ 68 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.

ರೆನ್‌ಶಾ ಬ್ಯಾಟಿಂಗ್‌ನ್ನು ನಿಲ್ಲಿಸಿ ಮೈದಾನಕ್ಕೆ ವಾಪಸಾದ ಪ್ರವಾಸಿ ತಂಡದ ಮೊದಲ ಕ್ರಿಕೆಟಿಗನಲ್ಲ. ಈ ಹಿಂದೆಯೂ ಇಂತಹ ಪ್ರಸಂಗಗಳು ನಡೆದಿದ್ದವು.

  1986ರಲ್ಲಿ ಚೆನ್ನೈನಲ್ಲಿ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಟೆಸ್ಟ್ ಪಂದ್ಯ ಅಂಕಿ-ಅಂಶದ ಮೂಲಕ ಸ್ಮರಣೀಯವಾಗಿದ್ದರೂ, ಅಸೌಖ್ಯದ ನಡುವೆಯೂ ದ್ವಿಶತಕ ಬಾರಿಸಿದ ಡಿಯೊನ್ ಜೋನ್ಸ್ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದೊದ್ದರು. ಈ ಪಂದ್ಯದಲ್ಲಿ ಡಿಯನ್ ಜೋನ್ಸ್ 40 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ನಿರ್ಜಲೀಕರಣದ ಸಮಸ್ಯೆಗೆ ಒಳಗಾದರು.

100 ರನ್ ತಲುಪಿದ ಬಳಿಕ ಜೋನ್ಸ್ ವಾಂತಿಮಾಡಲಾರಂಭಿಸಿದರು. ಆ ಬಳಿಕ ಅವರು ಗಾಯಾಳು ನಿವೃತ್ತಿಯಾಗಲು ಬಯಸಿದ್ದರು. ಚೇತರಿಸಿಕೊಂಡ ಬಳಿಕ ಬ್ಯಾಟಿಂಗ್ ಮುಂದುವರಿಸಿದ್ದ ಜೋನ್ಸ್ 210 ರನ್ ಗಳಿಸಿದ್ದರು. ಪಂದ್ಯ ಮುಗಿದ ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

1988ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ನಲ್ಲಿ ನ್ಯೂಝಿಲೆಂಡ್ ತಂಡದ ಹೆಚ್ಚಿನ ಆಟಗಾರರು ಹೊಟ್ಟೆನೋವಿನ ಸಮಸ್ಯೆಗೆ ಒಳಗಾಗಿದ್ದರು. ಮಾಜಿ ನಾಯಕ ಜೆರೆಮಿ ಕಾನಿ ಹಾಗೂ ಇನ್ನೋರ್ವ ಟಿವಿ ವೀಕ್ಷಕವಿವರಣೆಗಾರ ಬದಲಿ ಫೀಲ್ಡರ್‌ಗಳಾಗಿ ಪಂದ್ಯದಲ್ಲಿ ಆಡಿದ್ದರು.

 1993ರಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ನಾಯಕ ಗ್ರಹಾಂ ಗೂಚ್ ಪಂದ್ಯದ ಬೆಳಗ್ಗಿನ ಅವಧಿಯಲ್ಲಿ ಅಸೌಖ್ಯವಾದ ಕಾರಣ ನಾಯಕತ್ವದ ಜವಾಬ್ದಾರಿಯನ್ನು ಅಲೆಕ್ ಸ್ಟೀವರ್ಟ್‌ಗೆ ವಹಿಸಿಕೊಟ್ಟಿದ್ದರು. ಹೊಟೇಲ್‌ವೊಂದರಲ್ಲಿ ಚಿಕನ್ ತಂದು ಹೊಟ್ಟೆ ಕೆಡಿಸಿಕೊಂಡಿದ್ದ ರಾಬಿನ್ ಸ್ಮಿತ್ ಕೂಡ ಅಸೌಖ್ಯಕ್ಕೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News