ವಿಶ್ವಕಪ್ ವಿಜೇತ ಅಂಧರ ಕ್ರಿಕೆಟ್ ಪಟುಗಳಿಗೆ : ಕೇಂದ್ರ ಸಚಿವರಿಂದ ತಲಾ 5 ಲಕ್ಷ ರೂ.ಬಹುಮಾನ

Update: 2017-02-24 14:17 GMT

ಬೆಂಗಳೂರು, ಫೆ.24: ಇತ್ತೀಚೆಗೆ ನಡೆದ ಟಿ-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಸತತ ಎರಡು ಬಾರಿ ಟಿ-20 ವಿಶ್ವ ಚಾಂಪಿಯನ್‌ಶಿಪ್ ವಿಜೇತ ಭಾರತದ ಅಂಧರ ಕ್ರಿಕೆಟ್ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ 5 ಲಕ್ಷ ರೂ.ನಗದು ಬಹುಮಾನ ಘೋಷಿಸಿದ್ದಾರೆ.

ಹೊಸದಿಲ್ಲಿಯಲ್ಲಿನ ತಮ್ಮ ನಿವಾಸದಲ್ಲಿ ವರ್ಲ್ಡ್ ಬ್ಲೈಂಡ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮಹಾಂತೇಶ್ ಮತ್ತು ಖಜಾಂಚಿ ಜಾನ್ ಡೇವಿಡ್ ಹಾಗೂ ಭಾರತದ ತಂಡದ ತರಬೇತುದಾರ ಪ್ಯಾಟ್ರಿಕ್ ರಾಜ್‌ಕುಮಾರ್ ಸೇರಿದಂತೆ ಅಂಧರ ಕ್ರಿಕೆಟ್ ತಂಡವನ್ನು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ವಿಜಯ್ ಗೋಯೆಲ್, ‘ಸರಕಾರ ವಿಶೇಷ ಚೇತನ ಕ್ರೀಡಾಪಟುಗಳಿಗೆ ನೆರವಾಗಲು ಬದ್ಧ. ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ(ಸಿಎಬಿಐ) ಕ್ರೀಡಾ ಫೆಡರೇಷನ್ ಮಾನ್ಯತೆ ನೀಡಲಿದೆ. ಟಿ-20 ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದಿರುವ ತಂಡದ ಪ್ರತಿಯೊಬ್ಬ ಆಟಗಾರನೂ 5ಲಕ್ಷ ರೂ. ನಗದು ಬಹುಮಾನ ಪಡೆಯಲಿದ್ದಾರೆ. ಈ ಎಲ್ಲ ಆಟಗಾರರಿಗೂ ಭವಿಷ್ಯದ ಟೂರ್ನಮೆಂಟ್‌ಗೆ ುಭಾಶಯ ಕೋರುತ್ತೇನೆ ಎಂದರು.

ಇದೇ ವೇಳೆ ಮಾತನಾಡಿದ ಬ್ಲೈಂಡ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮಹಾಂತೇಶ್, ನಮ್ಮ ಹುಡುಗರ ಸಾಧನೆ ನನಗೆ ಹೆಮ್ಮೆ ತಂದಿದೆ. ನಗದು ಬಹುಮಾನಕ್ಕಾಗಿ ತಾನು ಕ್ರೀಡಾ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇಶದ ಎಲ್ಲ ಮೂಲೆಗಳಿಗೂ ಕ್ರೀಡೆಯನ್ನು ಕೊಂಡೊಯ್ಯಲು ಮತ್ತು ದೃಷ್ಟಿದೋಷವುಳ್ಳವರಿಗೆ ಈ ಕ್ರೀಡೆಯನ್ನು ವೃತ್ತಿಯಾಗಿ ತೆಗೆದು ಕೊಳ್ಳಲು ನಮಗೆ ಆರ್ಥಿಕ ಸ್ಥಿರತೆ ಅಗತ್ಯ.

ಹಣಕಾಸಿನ ಸ್ಥಿರತೆಯಿಂದ ಯುವ ಪ್ರತಿಭೆಗಳನ್ನು ಆಕರ್ಷಸುವುದು ಮತ್ತು ವಿವಿಧ ಟೂರ್ನಮೆಂಟ್‌ಗಳನ್ನು ಆಯೋಜಿಸುವುದು ಸುಲಭ. ಸರಕಾರ ಮತ್ತು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ(ಬಿಸಿಸಿಐ)ಗೆ ನಮಗೆ ಅಧಿಕೃತ ಮಾನ್ಯತೆ ನೀಡಲು ಕೋರುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News