ಪುಣೆಯಲ್ಲಿ ಆಸೀಸ್ ಮೇಲುಗೈ

Update: 2017-02-24 18:19 GMT

ಪುಣೆ, ಫೆ.24: ಆಸ್ಟ್ರೇಲಿಯ ಪಾಲಿಗೆ ವಿಶೇಷ ದಿನ. ಭಾರತವನ್ನು ಅದರದ್ದೇ ನೆಲದಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ಮೂಲಕ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೆ ದಿನ ಆಸ್ಟ್ರೇಲಿಯ ಅನಿರೀಕ್ಷಿತವಾಗಿ ಮೇಲುಗೈ ಸಾಧಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ನ ಎರಡನೆ ದಿನ ಆಸ್ಟ್ರೇಲಿಯ ಭಾರತದ ವಿರುದ್ಧ ಮುನ್ನಡೆ ಸಾಧಿಸಿದ್ದು, ದಿನದಾಟದಂತ್ಯಕ್ಕೆ 46 ಓವರ್‌ಗಳಲ್ಲಿ 4ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿದೆ.
ನಾಯಕ ಸ್ಟೀವ್ ಸ್ಮಿತ್ 59 ರನ್ ಮತ್ತು ಮಿಷೆಲ್ ಮಾರ್ಷ್ ಔಟಾಗದೆ 21 ರನ್ ಗಳಿಸಿ ಕೀಸ್‌ನಲ್ಲಿದ್ದಾರೆ.
ಆಸ್ಟ್ರೇಲಿಯ ಈ ಟೆಸ್ಟ್‌ನಲ್ಲಿ ಒಟ್ಟು 298 ರನ್‌ಗಳ ಮೇಲುಗೈ ಸಾಧಿಸಿದೆ.
ಎರಡನೆ ದಿನ ಒಟ್ಟು 15 ವಿಕೆಟ್‌ಗಳು ಪತನಗೊಂಡಿದ್ದು, ಸ್ಪಿನ್ನರ್‌ಗಳು ಯಶಸ್ಸು ಗಳಿಸಿದ್ದಾರೆ.
ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕೂಡಿ ಹಾಕುವ ಕನಸಿಗೆ ನಂ.1 ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಡ್ಡಿಪಡಿಸಿದರು.
   
ದಾಳಿ ಆರಂಭಿಸಿದ ಅಶ್ವಿನ್‌ಗೆ ಮೊದಲ ಓವರ್‌ನಲ್ಲಿ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ 5 ಎಸೆತಗಳಲ್ಲಿ 2 ಬೌಂಡರಿಗಳನ್ನು ಒಳಗೊಂಡ 10 ರನ್ ಕಬಳಿಸಿದರು. ಆದರೆ ಕೊನೆಯ ಎಸೆತದಲ್ಲಿ ಅಶ್ವಿನ್ ಅವರು ವಾರ್ನರ್‌ನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವ ಮೂಲಕ ವಾರ್ನರ್ ಆರ್ಭಟವನ್ನು ನಿಲ್ಲಿಸಿದರು. ವಾರ್ನರ್ ಜೊತೆ ಇನಿಂಗ್ಸ್ ಆರಂಭಿಸಿದ ಶಾನ್ ಮಾರ್ಷ್‌ಗೆ ಖಾತೆ ತೆರೆಯಲು ಅಶ್ವಿನ್ ಅವಕಾಶ ನೀಡಲಿಲ್ಲ. 21 ಎಸೆತಗಳನ್ನು ಎದುರಿಸಿದ್ದರೂ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.6.6ನೆ ಓವರ್‌ನಲ್ಲಿ ಮಾರ್ಷ್ ಅವರು ಅಶ್ವಿನ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು.ಪೀಟರ್ ಹ್ಯಾಂಡ್ಸ್‌ಕಂಬ್ ಮತ್ತು ನಾಯಕ ಸ್ಟೀವ್ ಸ್ಮಿತ್ 3ನೆ ವಿಕೆಟ್‌ಗೆ 38 ರನ್‌ಗಳ ಜೊತೆಯಾಟ ನೀಡಿದರು.
20.6ನೆ ಓವರ್‌ನಲ್ಲಿ ಹ್ಯಾಂಡ್ಸ್‌ಕಂಬ್ ಅವರು ಅಶ್ವಿನ್ ಎಸೆತದಲ್ಲಿ ಮುರಳಿ ವಿಜಯ್‌ಗೆ ಕ್ಯಾಚ್ ನೀಡಿದರು. ಹ್ಯಾಂಡ್ಸ್‌ಕಂಬ್ 19 ರನ್ ಗಳಿಸಿದರು.
 4ನೆ ವಿಕೆಟ್‌ಗೆ ಸ್ಮಿತ್‌ಗೆ ರೆನ್‌ಶಾ ಜೊತೆಯಾದರು. 52 ರನ್‌ಗಳ ಕಾಣಿಕೆ ನೀಡಿದರು. ಜಯಂತ್ ಯಾದವ್ ಅವರು ಕೊನೆಗೂ ರೆನ್‌ಶಾಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಯಶಸ್ವಿಯಾದರು. ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರೂ ಮೊದಲ ಇನಿಂಗ್ಸ್‌ನಲ್ಲಿ ರೆನ್‌ಶಾ 68 ರನ್ ಗಳಿಸಿದ್ದರು. ಎರಡನೆ ಇನಿಂಗ್ಸ್‌ನಲ್ಲಿ ಚೆನ್ನಾಗಿ ಆಡುವ ಪ್ರಯತ್ನ ನಡೆಸಿದ್ದರು. ಆದರೆ ಅವರ ಬ್ಯಾಟಿಂಗ್ 31ರಲ್ಲಿ ಕೊನೆಗೊಂಡಿತು.
ಐದನೆ ವಿಕೆಟ್‌ಗೆ ನಾಯಕ ಸ್ಮಿತ್ ಮತ್ತು ಮಿಷೆಲ್ ಮಾರ್ಷ್ ಮುರಿಯದ ಬ್ಯಾಟಿಂಗ್ ಪ್ರದರ್ಶಿಸಿ ಆಟವನ್ನು ಶನಿವಾರಕ್ಕೆ ಕಾಯ್ದಿರಿಸಿದ್ದಾರೆ.ಐದನೆ ವಿಕೆಟ್‌ಗೆ 30 ರನ್ ಸೇರಿಸಿದ್ದಾರೆ.
ಸ್ಮಿತ್ ಮೂರು ಬಾರಿ ಜೀವದಾನ ಪಡೆದು ಅರ್ಧಶತಕ ದಾಖಲಿಸಿದ್ದಾರೆ. ಅಶ್ವಿನ್ ಓವರ್‌ನಲ್ಲಿ ಎರಡು ಬಾರಿ ಔಟಾಗುವ ಅವಕಾಶದಿಂದ ಪಾರಾಗಿದ್ದಾರೆ.
  ಆಸ್ಟ್ರೇಲಿಯ ಆಲೌಟ್ 261: ಇಂದು ಬೆಳಗ್ಗೆ ಎರಡನೆ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 94.5 ಓವರ್‌ಗಳಲ್ಲಿ 260 ರನ್‌ಗಳಿಗೆ ಆಲೌಟಾಗಿತ್ತು.
 ಮೊದಲ ದಿನದ ಆಟ ನಿಂತಾಗ 94 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 256 ರನ್ ಗಳಿಸಿದ್ದ ಆಸ್ಟ್ರೇಲಿಯ ಈ ಮೊತ್ತಕ್ಕೆ ಕೇವಲ 4 ರನ್ ಸೇರಿಸಿತು. ಮಿಷೆೆಲ್ ಸ್ಟಾರ್ಕ್ ಅವರು ಅಶ್ವಿನ್ ಅವರ ಮೊದಲ ಓವರ್‌ನಲ್ಲಿ ಒಂದು ಬೌಂಡರಿ ಬಾರಿಸಿದರು. ಆದರೆ ಐದನೇ ಎಸೆತದಲ್ಲಿ ಜಡೇಜಗೆ ಕ್ಯಾಚ್ ನೀಡುವುದರೊಂದಿಗೆ 61 ರನ್ ಗಳಿಸಿ ತನ್ನ ಬ್ಯಾಟಿಂಗ್‌ನ್ನು ಕೊನೆಗೊಳಿಸಿದರು.
ಭಾರತದ ಉಮೇಶ್ ಯಾದವ್ 32ಕ್ಕೆ 4 ವಿಕೆಟ್, ಆರ್.ಅಶ್ವಿನ್ 63ಕ್ಕೆ 3, ಜಯಂತ್ ಯಾದವ್ 58ಕ್ಕೆ 1, ರವೀಂದ್ರ ಜಡೇಜ 74ಕ್ಕೆ 2 ವಿಕೆಟ್ ಪಡೆದರು.
ಓಕೀಫೆ ದಾಳಿಯ ಮುಂದೆ ಕೊಹ್ಲಿ ಪಡೆ ತತ್ತರ: ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನ್ನು ಬೇಗನೆ ಮುಗಿಸಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಸಾಧನೆ ಮಾಡಲಿಲ್ಲ.
ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ 64 ರನ್(97ಎ, 10ಬೌ,1ಸಿ) ಕೊಡುಗೆ ನೀಡಿರುವುದನ್ನು ಬಿಟ್ಟರೆ ಯಾರಿಂದಲೂ ಭಾರತದ ಖಾತೆಗೆ ಅರ್ಧಶತಕದ ಕೊಡುಗೆ ದೊರೆಯಲಿಲ್ಲ.
 ಮುರಳಿ ವಿಜಯ್(10), ಅಜಿಂಕ್ಯ ರಹಾನೆ(13) ಎರಡಂಕೆಯ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿದರೆ ತಂಡದ ಸಹ ಆಟಗಾರರು ಕಳಪೆ ಪ್ರದರ್ಶನ ನೀಡಿದರು.
ಭಾರತ ಮೊದಲ ಇನಿಂಗ್ಸ್‌ನ್ನು ಉತ್ಸಾದಿಂದಲೇ ಆರಂಭಿಸಿತ್ತು. ಭಾರತದ ದಾಂಡಿಗರನ್ನು ಕಟ್ಟಿ ಹಾಕಲು ಸ್ಮಿತ್ ಓಕೀಫೆ ಅವರನ್ನು ದಾಳಿಗಿಳಿಸಿ ಭಾರತದ ದಾಂಡಿಗರನ್ನು ಕಟ್ಟಿ ಹಾಕುತ್ತಾರೆ ಎನ್ನುವ ಅರಿವು ಭಾರತದ ನಾಯಕ ಕೊಹ್ಲಿಗೆ ಇರಲಿಲ್ಲ.
6.5ನೆ ಓವರ್‌ನಲ್ಲಿ ಹೇಝಲ್‌ವುಡ್ ಅವರು ವಿಜಯ್ ಮತ್ತು ರಾಹುಲ್ ಜೊತೆಯಾಟವನ್ನು ಮುರಿದು ತಂಡಕ್ಕೆ ಬೇಗನೆ ಯಶಸ್ಸು ತಂದುಕೊಟ್ಟರು.
ಚೇತೇಶ್ವರ ಪೂಜಾರ ಅವರು ಲೋಕೇಶ್ ರಾಹುಲ್‌ಗೆ ಜೊತೆಯಾದರು. ಎಂದಿನಂತೆ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಆದರೆ ಅವರು 23 ಎಸೆತಗಳನ್ನು ಎದುರಿಸಿ 1 ಬೌಂಡರಿ ಇರುವ 6 ರನ್ ಗಳಿಸಿ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.
  ಪೂಜಾರ ನಿರ್ಗಮನದ ಬಳಿಕ ಕ್ರೀಸ್‌ಗೆ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯಲು ಸ್ಟಾರ್ಕ್ ಅವಕಾಶ ನೀಡಲಿಲ್ಲ. ಮುಂದೆ ಲೋಕೇಶ್ ರಾಹುಲ್ ಮತ್ತು ರಹಾನೆ ತಂಡದ ರಕ್ಷಣೆಗೆ ಮುಂದಾದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ.
 ರಾಹುಲ್ ಒತ್ತಡದ ನಡುವೆಯೂ ಅರ್ಧಶತಕ ದಾಖಲಿಸಿದರು. ಅವರು 64 ರನ್(97ಎ, 10ಬೌ,1ಸಿ) ಗಳಿಸಿದ್ದಾಗ ಸ್ಟೀಫನ್ ಓಕೀಫೆ ಅವರು ಪೆವಿಲಿಯನ್ ಹಾದಿ ತೋರಿಸುವ ಮೂಲಕ ಪ್ರಹಾರ ಆರಂಭಿಸಿದರು. ರಾಹುಲ್ ಔಟಾದಾಗ ತಂಡದ ಸ್ಕೋರ್ 32.2 ಓವರ್‌ಗಳಲ್ಲಿ 94 ಆಗಿತ್ತು. ಬಳಿಕ ಓಕೀಫೆ ಭಾರತದ ದಾಂಡಿಗರಿಗೆ ಪ್ರಹಾರ ನೀಡಿದರು. ಕೇವಲ 11 ರನ್ ಸೇರುವಷ್ಟರಲ್ಲಿ ಭಾರತ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟಾಯಿತು.
ರಹಾನೆ (13), ವೃದ್ಧಿಮಾನ್ ಸಹಾ(0), ಆರ್ .ಅಶ್ವಿನ್ (1), ಜಯಂತ್ ಯಾದವ್(2), ರವೀಂದ್ರ ಜಡೇಜ(2), ಉಮೇಶ್ ಯಾದವ್(4), ಔಟಾಗುವುದರೊಂದಿಗೆ ಭಾರತ ಕಳಪೆ ಪ್ರದರ್ಶನ ನೀಡಿತು.
ಆಸ್ಟ್ರೇಲಿಯದ ಓಕೀಫೆ 35ಕ್ಕೆ 6 ವಿಕೆಟ್, ಸ್ಟಾರ್ಕ್ 38ಕ್ಕೆ 2, ಹೇಝಲ್‌ವುಡ್ 11ಕ್ಕೆ1 ಮತ್ತು ಲಿಯೊನ್ 21ಕ್ಕೆ 1 ವಿಕೆಟ್ ಪಡೆದರು.
,,,,,,,,,,,
ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 94.5 ಓವರ್‌ಗಳಲ್ಲಿ ಆಲೌಟ್ 260
            ರೆನ್‌ಶಾ ಸಿ ವಿಜಯ್ ಬಿ ಅಶ್ವಿನ್68
        ವಾರ್ನರ್ ಬಿ ಉಮೇಶ್ ಯಾದವ್ 38
            ಸ್ಮಿತ್ ಸಿ ಕೊಹ್ಲಿ ಬಿ ಅಶ್ವಿನ್ 27
        ಶಾನ್ ಮಾರ್ಷ್ ಸಿ ಕೊಹ್ಲಿ ಬಿ ಜಯಂತ್16
        ಹ್ಯಾಂಡ್ಸ್‌ಕಂಬ್ ಎಲ್‌ಬಿಡಬ್ಲು ಬಿ ಜಡೇಜ22
         ಎಂ ಮಾರ್ಷ್ ಎಲ್‌ಬಿಡಬ್ಲು ಬಿ ಜಡೇಜ04
    ಎಂ.ವೇಡ್ ಎಲ್‌ಬಿಡಬ್ಲು ಉಮೇಶ್ ಯಾದವ್08
        ಮಿಷೆಲ್ ಸ್ಟಾರ್ಕ್ ಸಿ ಜಡೇಜ ವಿ ಅಶ್ವಿನ್61
    ಸ್ಟೀಫನ್ ಓ ಕೀಫೆ ಸಿ ಸಹಾ ಬಿ ಉಮೇಶ್ ಯಾದವ್ 00
    ಲಿಯಾನ್ ಎಲ್‌ಬಿಡಬ್ಲು ಉಮೇಶ್ ಯಾದವ್00
            ಹೇಝಲ್‌ವುಡ್ ಔಟಾಗದೆ01
                    ಇತರೆ15
ವಿಕೆಟ್ ಪತನ: 1-82, 2-119, 3-149, 4-149, 5-166, 6-190, 7-196, 8-205, 9-205, 10-260
ಬೌಲಿಂಗ್ ವಿವರ
        ಇಶಾಂತ್ ಶರ್ಮ 11.0-00-27-0
        ಆರ್.ಅಶ್ವಿನ್ 34.5-10-63-3
    ಜಯಂತ್ ಯಾದವ್13.0-01-58-1
        ರವೀಂದ್ರ ಜಡೇಜ24.0-04-74-2
    ಉಮೇಶ್ ಯಾದವ್12.0-03-32-4
ಭಾರತ ಮೊದಲ ಇನಿಂಗ್ಸ್ 40.1 ಓವರ್‌ಗಳಲ್ಲಿ ಆಲೌಟ್ 105
    ಎಂ.ವಿಜಯ್ ಸಿ ವೇಡ್ ಬಿ ಹೇಝಲ್‌ವುಡ್10
        ರಾಹುಲ್ ಸಿ ವಾರ್ನರ್ ಬಿ ಓಕೀಫೆ 64
                 ಪೂಜಾರಸಿ ವೇಡ್ ಬಿ ಸ್ಟಾರ್ಕ್ 06
        ವಿ.ಕೊಹ್ಲಿ ಸಿ ಹ್ಯಾಂಡ್ಸ್‌ಕಂಬ್ ಬಿ ಸ್ಟಾರ್ಕ್ 00
    ಅಜಿಂಕ್ಯ ರಹಾನೆ ಸಿ ಹ್ಯಾಂಡ್ಸ್‌ಕಂಬ್ ಬಿ ಓಕೀಫೆ13
    ಆರ್.ಅಶ್ವಿನ್ ಸಿ ಹ್ಯಾಂಡ್ಸ್‌ಕಂಬ್ ಬಿ ಲಿಯೊನ್ 01
        ವೃದ್ಧಿಮಾನ್ ಸಹಾ ಸಿ ಸ್ಮಿತ್ ಬಿ ಓಕೀಫೆ00
            ಜಡೇಜ ಸಿ ಸ್ಟಾರ್ಕ್ ಬಿ ಓಕೀಫೆ02
    ಜಯಂತ್ ಯಾದವ್ ಸ್ಟಂ .ವೇಡ್ ಬಿ ಓಕೀಫೆ02
        ಉಮೇಶ್ ಯಾದವ್ ಸಿ ಸ್ಮಿತ್ ಬಿ ಓಕೀಫೆ04
            ಇಶಾಂತ್ ಶರ್ಮ ಔಟಾಗದೆ02
                    ಇತರೆ01
ವಿಕೆಟ್ ಪತನ: 1-26, 2-44, 3-44, 4-94, 5-95, 6-95, 7-95, 8-98, 9-101, 10-105
ಬೌಲಿಂಗ್ ವಿವರ
        ಸ್ಟಾರ್ಕ್ 09.0-2-38-2
        ಓಕೀಫೆ13.1-2-35-6
    ಹೇಝಲ್‌ವುಡ್07.0-3-11-1
    ಲಿಯೊನ್ 11.0-2-21-1
ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 46 ಓವರ್‌ಗಳಲ್ಲಿ 143/4
    ವಾರ್ನರ್ ಎಲ್‌ಬಿಡಬ್ಲು ಬಿ ಅಶ್ವಿನ್10
    ಎಸ್.ಮಾರ್ಷ್ ಎಲ್‌ಬಿಡಬ್ಲು ಬಿ ಅಶ್ವಿನ್00
            ಎಸ್.ಸ್ಮಿತ್ ಔಟಾಗದೆ59
    ಹ್ಯಾಂಡ್ಸ್‌ಕಂಬ್ ಸಿ ವಿಜಯ್ ಬಿ ಅಶ್ವಿನ್19
    ರೆನ್‌ಶಾ ಸಿ ಶರ್ಮ ಬಿ ಜೆ.ಯಾದವ್31
        ಎಂ.ಮಾರ್ಷ್ ಔಟಾಗದೆ21
                ಇತರೆ03
ವಿಕೆಟ್ ಪತನ: 1-10, 2-23, 3-61, 4-113
ಬೌಲಿಂಗ್ ವಿವರ
    ಆರ್.ಅಶ್ವಿನ್ 16-3-68-3
    ಆರ್.ಜಡೇಜ17-6-26-0
    ಯು.ಯಾದವ್ 05-0-13-0
    ಜೆ.ಯಾದವ್05-0-27-1
    ಐ.ಶರ್ಮ 03-0-06-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News