ಒಲಿಂಪಿಕ್ಸ್ ಪ್ರತಿಭೆಗಾಗಿ ತಳಮಟ್ಟದ ಶೋಧ ಆರಂಭ

Update: 2017-02-24 18:14 GMT

  ಅಹ್ಮದಾಬಾದ್, ಫೆ. 24: ಯುವ ಕ್ರೀಡಾ ಪ್ರತಿಭೆಗಳ ಶೋಧಕ್ಕಾಗಿ ಇತ್ತೀಚೆಗೆ ಒಲಿಂಪಿಕ್ಸ್ ಕ್ಷಿಪ್ರ ಪಡೆ(ಒಟಿಎಫ್)ಯನ್ನು ಸ್ಥಾಪಿಸಲಾಗಿದ್ದು, ತಳಮಟ್ಟದಲ್ಲಿ ಕ್ರೀಡಾಪಟುಗಳ ಶೋಧ ಕಾರ್ಯಕ್ಕಾಗಿ ವಿಶೇಷ ಕಾರ್ಯಾಗಾರ ಗುರುವಾರ ಇಲ್ಲಿ ಆರಂಭವಾಗಿದೆ.

ಸರಕಾರಿ ಪ್ರತಿನಿಧಿಗಳು, ಕ್ರೀಡಾ ಸಂಸ್ಥೆಗಳು, ಕ್ರೀಡಾ ಪತ್ರಕರ್ತರು, ಕ್ರೀಡಾ ವೈದ್ಯಕೀಯ ತಜ್ಞರು, ಶಾಲಾ ಪ್ರಾಂಶುಪಾಲರು ಹಾಗೂ ಕೋಚ್‌ಗಳು ಕಾರ್ಯಾಗಾರಲ್ಲಿ ಭಾಗವಹಿಸಿ ಎಲ್ಲರೊಂದಿಗೆ ಸಂವಹನ ನಡೆಸಲಿದ್ದಾರೆ.

 ಈ ರೀತಿಯ ಕಾರ್ಯಾಗಾರ ಇದೇ ಮೊದಲ ಬಾರಿ ಆಯೋಜಿಸಲಾಗಿದ್ದು, ಒಲಿಂಪಿಕ್ಸ್ ಕ್ಷಿಪ್ರ ಪಡೆ ಎಲ್ಲರ ಹಿತಚಿಂತಕರಾಗಿ ಸಂಘಟಿತವಾಗಿ ಕೆಲಸ ಮಾಡಲಿದೆ ಎಮದು ಒಟಿಎಫ್ ಸದಸ್ಯ ಓಂ ಪಾಠಕ್ ಹೇಳಿದ್ದಾರೆ.

ಮುಖ್ಯವಾಗಿ ಒಲಿಂಪಿಕ್ಸ್‌ನಂತಹ ಪ್ರಮುಖ ಕ್ರೀಡಾ ಸ್ಪರ್ಧೆಯಲ್ಲಿ ಭಾರತದ ಉತ್ಸಾಹವನ್ನು ಹೆಚ್ಚಿಸುವುದು ಕಾರ್ಯಾಗಾರದಲ್ಲಿ ಭಾಗವಹಿಸಿರುವ ಎಲ್ಲ ಸ್ಪಷ್ಟ ಉದ್ದೇಶವಾಗಿತ್ತು. ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರದರ್ಶನವನ್ನು ಹೇಗೆ ಉತ್ತಮಪಡಿಸಬಹುದೆಂಬ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಯಿತು.

‘‘ಇಲ್ಲಿಗೆ ಆಗಮಿಸಿರುವ ಎಲ್ಲರ ಉತ್ಸಾಹವನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಅಹ್ಮದಾಬಾದ್ ಮೊತ್ತ ಮೊದಲ ಬಾರಿ ಇಂತಹ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದೆ. ನಮ್ಮ ರಾಜ್ಯದಲ್ಲಿ ಒಟಿಎಫ್ ರಚನೆ ಮಾಡಿದ ಬಳಿಕ ನಡೆದ ಮೊದಲ ರಾಷ್ಟ್ರೀಯ ಕಾರ್ಯಾಗಾರ ಇದಾಗಿದೆ ಎಂದು ಗುಜರಾತ್ ಕ್ರೀಡಾ ಪ್ರಾಧಿಕಾರದ ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್ ಹೇಳಿದ್ದಾರೆ.

ಭಾರತದ ಒಲಿಂಪಿಕ್ಸ್ ಕ್ರೀಡೆಯಲ್ಲಿ ಈಗಿನ ಪರಿಸ್ಥಿತಿ ಹಾಗೂ ಭಾರತೀಯ ಕ್ರೀಡಾಪಟುಗಳು ಹೆಚ್ಚಿನ ಪದಕ ಗೆಲ್ಲಲು ಅಡ್ಡಿಯಾಗಿರುವ ಅಂಶಗಳ ಬಗ್ಗೆ ಕಾರ್ಯಾಗಾರದಲ್ಲಿ ಪ್ರಮುಖವಾಗಿ ಚರ್ಚೆಯಾಗಿದೆ. ಭಾರತದ ಪ್ರದರ್ಶನ ಮಟ್ಟವನ್ನು ಹೆಚ್ಚಿಸಲು 2028ರ ಒಲಿಂಪಿಕ್ಸ್‌ಗೆ ದೀರ್ಘಕಾಲಿನ ರಣನೀತಿ ಹಾಗೂ 2020 ಹಾಗೂ 2024ರ ಒಲಿಂಪಿಕ್ ಗೇಮ್ಸ್‌ಗೆ ಸೀಮಿತ ಅವಧಿಯ ಯೋಜನೆಯ ಬಗ್ಗೆ ಪ್ರಸ್ತಾವಿಸಲಾಗಿದೆ.

ಈ ಸಭೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಭಾರತದ ಹಾಕಿ ತಂಡದ ಪ್ರದರ್ಶನ ಸುಧಾರಣೆಯಾಗಿದೆ. 2020ರ ಒಲಿಂಪಿಕ್ಸ್‌ನಲ್ಲಿ ನಮ್ಮ ತಂಡ ಸೆಮಿ ಫೈನಲ್ ತಲುಪುವ ಸಂಪೂರ್ಣ ಸಾಮರ್ಥ ಹೊಂದಲಿದೆ’’ ಎಂದು ಒಟಿಎಫ್ ಸದಸ್ಯರಾಗಿರುವ ಭಾರತದ ಮಾಜಿ ಹಾಕಿ ಆಟಗಾರ ವಿರೇನ್ ರಸ್ಕಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News