ಸಿಂಧುಗೆ ಆಂಧ್ರ ಸರಕಾರದ ಡೆಪ್ಯುಟಿ ಕಲೆಕ್ಟರ್ ಹುದ್ದೆ ಗಿಫ್ಟ್

Update: 2017-02-24 18:16 GMT

ಹೈದರಾಬಾದ್, ಫೆ.24: ಆಂಧ್ರ ಪ್ರದೇಶ ಸರಕಾರದಲ್ಲಿ ಗ್ರೂಪ್-1 ಅಧಿಕಾರಿಯ ಹುದ್ದೆಗೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೀಡಿರುವ ಆಫರ್‌ರನ್ನು ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸ್ವೀಕರಿಸಿದ್ದಾರೆ. ಈ ಮೂಲಕ ಆಂಧ್ರದ ರಾಜಧಾನಿ ಅಮರಾವತಿಯಲ್ಲಿ ನೆಲೆವೂರಲು ನಿರ್ಧರಿಸಿದ್ದಾರೆ.

 ಇತ್ತೀಚೆಗೆ ನಡೆದ ರಾಷ್ಟ್ರೀಯ ಮಹಿಳೆಯರ ಪಾರ್ಲಿಮೆಂಟ್‌ನಲ್ಲಿ ಹಾಜರಾಗಿದ್ದ ಸಿಂಧು ವಿಜಯವಾಡಕ್ಕೆ ತೆರಳಿದ್ದು, ಆಂಧ್ರ ಸರಕಾರಕ್ಕೆ ತನ್ನ ಸಮ್ಮತಿಯ ಪತ್ರವನ್ನು ನೀಡಿದ್ದಾರೆ. ಸರಕಾರ ಇದೀಗ ಉಳಿದ ಪ್ರಕ್ರಿಯೆಯನ್ನು ನಡೆಸುತ್ತಿದೆ ಎಂದು ಸಿಂಧು ಕುಟುಂಬ ಮೂಲಗಳು ತಿಳಿಸಿವೆ.

 ಸಿಂಧು ಹುದ್ದೆಯ ಆಫರ್‌ರನ್ನು ಸ್ವೀಕರಿಸಿದ್ದನ್ನು ದೃಢಪಡಿಸಿರುವ ಸಿಂಧು ತಾಯಿ ವಿಜಯಾ, ‘‘ರಿಯೋ ಒಲಿಂಪಿಕ್ಸ್‌ನಿಂದ ವಾಪಸಾದ ಬಳಿಕ ವಿಜಯವಾಡದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಆಂಧ್ರ ಸರಕಾರ ಸಿಂಧುಗೆ ಸರಕಾರಿ ಹುದ್ದೆಯ ಆಫರ್ ನೀಡಿತ್ತು. ಫೆ.10 ಹಾಗೂ 11 ರಂದು ನಡೆದ ರಾಷ್ಟ್ರೀಯ ಮಹಿಳೆಯರ ಸಂಸತ್‌ನಲ್ಲಿ ಭಾಗವಹಿಸಲು ತೆರಳಿದ್ದ ಸಿಂಧು ಸರಕಾರಕ್ಕೆ ಸಮ್ಮತಿಯ ಪತ್ತ ನೀಡಿದ್ದರು. ಆಕೆಗೆ ಯಾವ ರೀತಿಯ ಹುದ್ದೆ ನೀಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ನಾವು ನೇಮಕಾತಿ ಆದೇಶದ ಪ್ರತಿಯ ನಿರೀಕ್ಷೆಯಲ್ಲಿದ್ದು, ಈ ಹುದ್ದೆಯಿಂದ ಆಕೆಯ ವೃತ್ತಿಜೀವನಕ್ಕೆ ಧಕ್ಕೆಯಾಗುವುದಿಲ್ಲ’’ ಎಂದು ಹೇಳಿದ್ದಾರೆ.

 ಸಿಂಧು ಕಳೆದ ವರ್ಷ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿ ಐತಿಹಾಸಿಕ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರಕಾರ ಸಿಂಧು ಅವರನ್ನು ಸನ್ಮಾನಿಸಿದ್ದವು. ಆಂಧ್ರಪ್ರದೇಶದ ಸಂಪುಟ ಸಭೆಯಲ್ಲಿ ಸಿಂಧುಗೆ 3 ಕೋಟಿ ರೂ. ನಗದು ಬಹುಮಾನ ನೀಡಲು ನಿರ್ಧರಿಸಿತ್ತು. ತೆಲಂಗಾಣ ಸರಕಾರ ಕೂಡ 5 ಕೋ.ರೂ. ನಗದು ಬಹುಮಾನ ನೀಡಿ ಗೌರವಿಸಿತ್ತು.

ಆಂಧ್ರ ಪ್ರದೇಶ ಮುಖ್ಯಮಂತ್ರಿ ನಾಯ್ಡು ಸನ್ಮಾನ ಸಮಾರಂಭದಲ್ಲಿ ಸಿಂಧುಗೆ ಸರಕಾರಿ ಹುದ್ದೆಯ ಆಫರ್ ನೀಡಿದ್ದರು. ಸಿಂಧು ಈ ಬಗ್ಗೆ ಯೋಚಿಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು.

 ಬ್ಯಾಡ್ಮಿಂಟನ್ ಸ್ಟಾರ್ ಸಿಂಧುಗೆ ನಗದು ಬಹುಮಾನ, ಆಂಧ್ರ ರಾಜ್ಯ ಸರಕಾರದ ಗ್ರೂಪ್- ದರ್ಜೆಯ ಅಧಿಕಾರಿಯ ಹುದ್ದೆ ಮಾತ್ರವಲ್ಲ ಹೊಸ ರಾಜಧಾನಿ ಅಮರಾವತಿಯಲ್ಲಿ 1000 ಚದರ ಅಡಿ ಯಾರ್ಡ್ ರೆಸಿಡೆನ್ಶಿಯಲ್ ಪ್ಲ್ಯಾಟ್‌ನ್ನು ಉಡುಗೊರೆಯಾಗಿ ನೀಡಿತ್ತು. ಸಿಂಧು ಆಂಧ್ರಪ್ರದೇಶದ ಡೆಪ್ಯುಟಿ ಕಲೆಕ್ಟರ್ ಆಗಿ ನೇಮಕಗೊಳ್ಳುವ ಸಾಧ್ಯತೆಯಿದ್ದು, ಐದರಿಂದ ಆರು ವರ್ಷಗಳ ಬಳಿಕ ವಿಶೇಷ ಪರಿಗಣನೆಯ ಮೇರೆಗೆ ಐಎಎಸ್ ಭಡ್ತಿ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಿಂಧು ಯಾವ ರಾಜ್ಯಕ್ಕೆ ಸೇರಿದವರು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆದಿತ್ತು. ಸಿಂಧು ಅವರ ಹೆತ್ತವರು ಆಂಧ್ರಪ್ರದೇಶ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಸಿಂಧು ಹೈದರಾಬಾದ್‌ನಲ್ಲಿ ಜನಿಸಿದ್ದಾರೆ. ಇದೀಗ ಅದು ತೆಲಂಗಾಣದ ರಾಜಧಾನಿಯಾಗಿದೆ. ತಾನು ಯಾವ ಭಾರತೀಯಳು ಎಂದು ಹೇಳಿರುವ ಸಿಂಧು ಚರ್ಚೆಗೆ ತೆರೆ ಎಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News