ಕಪಿಲ್‌ದೇವ್ ದಾಖಲೆ ಮುರಿದ ಅಶ್ವಿನ್

Update: 2017-02-24 18:19 GMT

ಪುಣೆ, ಫೆ.24: ಭಾರತದ ಹಿರಿಯ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಮೊದಲ ಟೆಸ್ಟ್‌ನ ಎರಡನೆ ದಿನದಾಟದಲ್ಲಿ ಆಸ್ಟ್ರೇಲಿಯದ ಮಿಚೆಲ್ ಸ್ಟಾರ್ಕ್ ವಿಕೆಟ್‌ನ್ನು ಕಬಳಿಸುವ ಮೂಲಕ ಕಪಿಲ್‌ದೇವ್ ನಿರ್ಮಿಸಿರುವ 37 ವರ್ಷ ಹಳೆಯ ದಾಖಲೆಯೊಂದನ್ನು ಮುರಿದರು.

 ಅಶ್ವಿನ್ ಶನಿವಾರ ಬೆಳಗ್ಗೆ ತಾನೆಸೆದ ಮೊದಲ ಓವರ್‌ನ 5ನೆ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್ ವಿಕೆಟ್‌ನ್ನು ಉರುಳಿಸಿ ಸ್ವದೇಶದಲ್ಲಿ ಒಂದೇ ಋತುವಿನಲ್ಲಿ 64ನೆ ವಿಕೆಟ್‌ನ್ನು ಪಡೆದರು. ತವರು ನೆಲದಲ್ಲಿ ಒಂದೇ ಋತುವಿನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿರುವ ಕಪಿಲ್‌ದೇವ್(63 ವಿಕೆಟ್) ದಾಖಲೆಯನ್ನು ಮುರಿದರು.

ಅಶ್ವಿನ್ 2016-17ರ ಸಾಲಿನಲ್ಲಿ 10ನೆ ಟೆಸ್ಟ್‌ನಲ್ಲಿ 67 ವಿಕೆಟ್‌ಗಳನ್ನು ಪಡೆದರೆ, ಕಪಿಲ್‌ದೇವ್ 1979-80ರ ಋತುವಿನಲ್ಲಿ 13 ಟೆಸ್ಟ್‌ಗಳಲ್ಲಿ 63 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದರು.

 ಅಶ್ವಿನ್ 2012-13ರಲ್ಲಿ ತವರು ನೆಲದಲ್ಲಿ ಆಡಿದ್ದ 10 ಟೆಸ್ಟ್‌ಗಳಲ್ಲಿ 61 ವಿಕೆಟ್‌ಗಳನ್ನು ಪಡೆದಿದ್ದರು. ಈ ಮೂಲಕ ತನ್ನ ಸಾಮರ್ಥ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರ್ಪಡಿಸಿದ್ದರು.

ಅಶ್ವಿನ್ ಈ ಋತುವಿನಲ್ಲಿ ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 27 ವಿಕೆಟ್‌ಗಳು, ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ 28 ವಿಕೆಟ್‌ಗಳು ಹಾಗೂ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್‌ಗಳನ್ನು ಉಡಾಯಿಸಿದ್ದರು. ಪ್ರಸ್ತುತ ಪುಣೆಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಸಂಪಾದಿಸಿರುವ ಅಶ್ವಿನ್ ಎರಡನೆ ಇನಿಂಗ್ಸ್‌ನಲ್ಲೂ 3 ವಿಕೆಟ್ ಪಡೆದು ವಿಕೆಟ್ ಬೇಟೆ ಮುಂದುವರಿಸಿದ್ದಾರೆ.

30ರ ಹರೆಯದ ಅಶ್ವಿನ್ 46 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 257 ವಿಕೆಟ್‌ಗಳನ್ನು ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News