ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ

Update: 2017-02-24 18:20 GMT

ಪುಣೆ, ಫೆ.24: ಭಾರತದ ನಾಯಕ ವಿರಾಟ್ ಕೊಹ್ಲಿ ಪ್ರತಿಬಾರಿ ಬ್ಯಾಟಿಂಗ್‌ಗೆ ಇಳಿದಾಗ ಕ್ರಿಕೆಟ್ ಅಭಿಮಾನಿಗಳು ಅವರಿಂದ ಶತಕವನ್ನು ನಿರೀಕ್ಷಿಸುತ್ತಾರೆ. ಕೊಹ್ಲಿ ಕೂಡ ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಆದರೆ, ಆಸ್ಟ್ರೇಲಿಯ ವಿರುದ್ಧ ಶನಿವಾರ ಇಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಖಾತೆ ತೆರಯದೇ ಔಟಾಗಿದ್ದು, ಎಲ್ಲರಿಗೆ ಅಚ್ಚರಿ ತಂದಿದೆ.

 ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 14.4ನೆ ಓವರ್‌ನಲ್ಲಿ ಕೊಹ್ಲಿ ಅವರನ್ನು ಔಟ್ ಮಾಡಿ ಶಾಕ್ ನೀಡಿದರು. 2 ಎಸೆತ ಎದುರಿಸಿದ್ದ ಕೊಹ್ಲಿ ಒಂದೂ ರನ್ ಗಳಿಸದೇ ಪೆವಿಲಿಯನ್ ಸೇರಿದರು. ಆಗ ಭಾರತದ ಸ್ಕೋರ್ 3 ವಿಕೆಟ್‌ಗೆ 44. ಭಾರತದ ನಾಯಕ ಕೊಹ್ಲಿ ಅಪರೂಪಕ್ಕೊಮ್ಮೆ ಬೇಗನೆ ಔಟಾದಾಗ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಲ್ಲಿ ವೌನ ಆವರಿಸಿತು. ಕೊಹ್ಲಿ ಕಳೆದ ವರ್ಷದ ಜುಲೈ ಬಳಿಕ ನಾಲ್ಕು ಬಾರಿ ದ್ವಿಶತಕ ಬಾರಿಸಿದ್ದಾರೆ. ಕೊಹ್ಲಿ 2014ರ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ ಕೊನೆಯ ಬಾರಿ ಶೂನ್ಯಕ್ಕೆ ಔಟಾಗಿದ್ದರು.

ಮೊದಲ ಇನಿಂಗ್ಸ್‌ನಲ್ಲಿ 61ರನ್ ಗಳಿಸಿದ್ದ ಸ್ಟಾರ್ಕ್ 3 ಎಸೆತಗಳಲ್ಲಿ 2 ವಿಕೆಟ್‌ಗಳನ್ನು ಪಡೆಯುವುದರೊಂದಿಗೆ ಆಸ್ಟ್ರೇಲಿಯಕ್ಕೆ ಆರಂಭದಲ್ಲೇ ಮೇಲುಗೈ ಒದಗಿಸಿಕೊಟ್ಟಿದ್ದರು.

 14.2ನೆ ಓವರ್‌ನಲ್ಲಿ ಚೇತೇಶ್ವರ ಪೂಜಾರ ವಿಕೆಟ್‌ನ್ನು ಉರುಳಿಸಿದ ಸ್ಟಾರ್ಕ್ 14.4ನೆ ಓವರ್‌ನಲ್ಲಿ ಕೊಹ್ಲಿ ವಿಕೆಟ್ ಪಡೆದರು. ಸ್ಟಾರ್ಕ್ ಎಸೆದ ವೈಡ್ ಎಸೆತವನ್ನು ಕೆಣಕಲು ಹೋದ ಕೊಹ್ಲಿ ಮೊದಲ ಸ್ಪಿಪ್‌ನಲ್ಲಿ ಫೀಲ್ಡಿಂಗ್ ನಿರತರಾಗಿದ್ದ ಹ್ಯಾಂಡ್ಸ್‌ಕಾಂಬ್‌ಗೆ ಕ್ಯಾಚ್ ನೀಡಿದರು.

ಕೊಹ್ಲಿ ಟೆಸ್ಟ್ ವೃತ್ತಿಜೀವನದಲ್ಲಿ 5ನೆ ಬಾರಿ ಶೂನ್ಯಕ್ಕೆ ಔಟಾದರು. ಭಾರತದಲ್ಲಿ ಮೊದಲ ಬಾರಿ ಶೂನ್ಯ ಸಂಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News