×
Ad

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಕೊಹ್ಲಿ, ಅಶ್ವಿನ್ ಸ್ಥಾನ ಭದ್ರ, ಸ್ಮಿತ್‌ಗೆ ಭಡ್ತಿ

Update: 2017-02-26 23:46 IST

 ದುಬೈ,ಫೆ.26: ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ದಾಂಡಿಗರ ಪೈಕಿ ದ್ವಿತೀಯ ಸ್ಥಾನ ಹಾಗೂ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಬೌಲರ್‌ಗಳು ಹಾಗೂ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಭಾರತ ತಂಡ ಪುಣೆಯಲ್ಲಿ ಶನಿವಾರ ಕೊನೆಗೊಂಡ ಮೊದಲ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋತಿದ್ದರೂ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಧಕ್ಕೆಯಾಗಿಲ್ಲ. ಇದೇ ವೇಳೆ ಕರ್ನಾಟಕದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಆಸೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 64 ಹಾಗೂ 10 ರನ್ ಗಳಿಸಿರುವ ಹಿನ್ನೆಲೆಯಲ್ಲಿ ಜೀವನಶ್ರೇಷ್ಠ ರ್ಯಾಂಕ್(46ನೆ ಸ್ಥಾನ) ತಲುಪಿದ್ದಾರೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಆಸ್ಟೇಲಿಯದ ಕೆಲವು ಆಟಗಾರರು ರ್ಯಾಂಕಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮೊದಲ ಪಂದ್ಯದ ಹೀರೊ ಸ್ಟೀವನ್ ಓ’ಕೀಫೆ, ನಾಯಕ ಸ್ಟೀವ್ ಸ್ಮಿತ್ ಹಾಗೂ ಮ್ಯಾಟ್ ರೆನ್‌ಶಾ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ.

ಜೀವನಶ್ರೇಷ್ಠ ರೇಟಿಂಗ್ ಪಾಯಿಂಟ್(939) ಗಳಿಸಿರುವ ಸ್ಮಿತ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಮಾತ್ರವಲ್ಲ ಡಾನ್ ಬ್ರಾಡ್ಮನ್(961), ಲೆನ್ ಹಟ್ಟನ್(945), ಜಾಕ್ ಹಾಬ್ಸ್ ಹಾಗೂ ರಿಕಿ ಪಾಂಟಿಂಗ್(942) ಹಾಗೂ ಪೀಟರ್ ಮೇ(941) ಬಳಿಕ ಆರನೆ ಶ್ರೇಷ್ಠ ರೇಟಿಂಗ್ ಪಾಯಿಂಟ್ ಪಡೆದಿದ್ದಾರೆ.

ಗ್ಯಾರಿ ಸೋಬರ್ಸ್, ವಿವಿ ರಿಚರ್ಡ್ಸ್ ಹಾಗೂ ಕುಮಾರ ಸಂಗಕ್ಕರ ಜೀವನಶ್ರೇಷ್ಠ 938ನೆ ರ್ಯಾಂಕಿಗೆ ತಲುಪಿದ್ದರು.

ಪುಣೆ ಟೆಸ್ಟ್‌ನಲ್ಲಿ 27 ಹಾಗೂ 109 ರನ್ ಗಳಿಸಿದ್ದ ಸ್ಮಿತ್ ಆರು ಅಂಕ ಸಂಪಾದಿಸಿದ್ದು, ಕೊಹ್ಲಿಗಿಂತ 66 ಅಂಕ ಮುನ್ನಡೆಯಲ್ಲಿದ್ದಾರೆ. ಮೂರನೆ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಜೋ ರೂಟ್(848 ಅಂಕ) 3ನೆ ರ್ಯಾಂಕಿನಲ್ಲಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ 68 ಹಾಗೂ 31 ರನ್ ಗಳಿಸಿದ್ದ ರೆನ್‌ಶಾ 18 ಸ್ಥಾನ ಭಡ್ತಿ ಪಡೆದು 34ನೆ ಸ್ಥಾನಕ್ಕೇರಿದ್ದಾರೆ.

 ಸ್ಟೀವನ್ ಓ’ಕೀಫೆ ಜೀವನಶ್ರೇಷ್ಠ ಸಾಧನೆ: ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯದ ಎಡಗೈ ಸ್ಪಿನ್ನರ್ ಸ್ಟೀವನ್ ಓ’ಕೀಫೆ 33 ಸ್ಥಾನಗಳ ಭಡ್ತಿ ಪಡೆದು ಜೀವನಶ್ರೇಷ್ಠ 29ನೆ ಸ್ಥಾನ ತಲುಪಿದ್ದಾರೆ. ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 70 ರನ್‌ಗೆ 12 ವಿಕೆಟ್‌ಗಳನ್ನು ಪಡೆದಿದ್ದ ಓ’ಕೀಫೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಓ’ಕೀಫೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕಡಿಮೆ ರನ್ ನೀಡಿ 12 ವಿಕೆಟ್ ಗೊಂಚಲು ಪಡೆದು ಹಾಲ್ ಆಫ್ ಫೇಮ್‌ನಲ್ಲಿ ಸ್ಥಾನ ಪಡೆದಿದ್ದ ಜಾರ್ಜ್ ಲೊಹ್ಮನ್ಸ್ ದಾಖಲೆ ಮುರಿದರು. ಲೊಹ್ಮನ್ಸ್ 1896ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ 71 ರನ್‌ಗೆ 12 ವಿಕೆಟ್ ಉಡಾಯಿಸಿದ್ದರು.

ಆಸೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಒಟ್ಟು 7 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್ 878 ಅಂಕದೊಂದಿಗೆ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಆರು ವಿಕೆಟ್‌ಗಳನ್ನು ಕಬಳಿಸಿದ್ದ ಭಾರತದ ವೇಗದ ಬೌಲರ್ ಉಮೇಶ್ ಯಾದವ್ ನಾಲ್ಕು ಸ್ಥಾನ ಭಡ್ತಿ ಪಡೆದು 30ನೆ ರ್ಯಾಂಕಿಗೆ ತಲುಪಿದ್ದಾರೆ.

ಆಲ್‌ರೌಂಡರ್ ಪಟ್ಟಿಯಲ್ಲಿ ಸ್ಟಾರ್ಕ್‌ಗೆ 4ನೆ ಸ್ಥಾನ:

ಇದೇ ವೇಳೆ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 3 ಸ್ಥಾನ ಭಡ್ತಿ ಪಡೆದು ನಾಲ್ಕನೆ ಸ್ಥಾನಕ್ಕೇರಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಸ್ಟಾರ್ಕ್ 61 ಹಾಗೂ 30 ರನ್ ಗಳಿಸಿ ಹೋರಾಟಕಾರಿ ಪ್ರದರ್ಶನ ನೀಡಿದ್ದರು. ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ 27 ಸ್ಥಾನ ಭಡ್ತಿ ಪಡೆದಿದ್ದ ಸ್ಟಾರ್ಕ್ 10ನೆ ಸ್ಥಾನ ತಲುಪಿದ್ದಾರೆ. ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜೀವನಶ್ರೇಷ್ಠ 61ನೆ ರ್ಯಾಂಕ್‌ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News