×
Ad

ಐಎಸ್‌ಎಸ್‌ಎಫ್ ವಿಶ್ವಕಪ್: ಜೀತು-ಹೀನಾಗೆ ಚಿನ್ನ, ಅಂಕುರ್‌ಗೆ ಬೆಳ್ಳಿ

Update: 2017-02-27 23:46 IST

 ಹೊಸದಿಲ್ಲಿ, ಫೆ.27: ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್(ಐಎಸ್‌ಎಸ್‌ಎಫ್) ವಿಶ್ವಕಪ್‌ನ 10 ಮೀ. ಮಿಕ್ಸೆಡ್ ಟೀಮ್‌ನ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಶೂಟರ್‌ಗಳಾದ ಜೀತು ರಾಯ್ ಹಾಗೂ ಹೀನಾ ಸಿಧು ಸಾಹಸದ ನೆರವಿನಿಂದ ಭಾರತ ಚಿನ್ನದ ಪದಕಕ್ಕೆ ಗುರಿ ಇಟ್ಟಿತು. ಪುರುಷರ ಡಬಲ್ ಟ್ರಾಪ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿದ ಅಂಕುರ್ ಮಿತ್ತಲ್ ಜೀವನಶ್ರೇಷ್ಠ ಸಾಧನೆ ಮಾಡಿದ್ದಲ್ಲದೆ ಭಾರತದ ಸಂತಸವನ್ನು ಇಮ್ಮಡಿಗೊಳಿಸಿದರು.

ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಸೋಮವಾರ ನಡೆದ ಮಿಕ್ಸೆಡ್ ಡಬಲ್ಸ್ ಫೈನಲ್‌ನಲ್ಲಿ ಜಪಾನ್‌ನ ಯುಕಾರಿ ಕೊನಿಶಿ ಹಾಗೂ ಟೊಮೊಯುಕಿ ಮಟ್ಸುದಾರನ್ನು 5-3 ಅಂತರದಿಂದ ಮಣಿಸಿ ಚಿನ್ನದ ಪದಕ ಗೆದ್ದುಕೊಂಡರು.

ರಿಯೋ ಒಲಿಂಪಿಕ್ಸ್‌ನಲ್ಲಿ ಈ ಇಬ್ಬರು ಶೂಟರ್‌ಗಳ ಮೇಲೆ ಭಾರೀ ವಿಶ್ವಾಸ ಇಡಲಾಗಿತ್ತು. ಆದರೆ, ಇಬ್ಬರೂ ನಿರಾಶಾದಾಯಕ ಪ್ರದರ್ಶನ ನೀಡಿದ್ದರು.

ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿ ಶೂಟರ್‌ಗಳು ಮಿಕ್ಸೆಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ಮಿಕ್ಸೆಡ್ ಡಬಲ್ಸ್ ಸ್ಪರ್ಧೆಯನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.

ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಅಧಿಕೃತ ವಿಶ್ವಕಪ್ ಪದಕಗಳನ್ನು ನೀಡಲಾಗುತ್ತಿಲ್ಲ. ಶೂಟಿಂಗ್‌ನಲ್ಲಿ ಮಿಶ್ರ ಡಬಲ್ಸ್ ಸ್ಪರ್ಧೆಯನ್ನು ಸೇರ್ಪಡೆಗೊಳಿಸುವ ಬಗ್ಗೆ ಅಭಿನವ್ ಬಿಂದ್ರಾ ಅಧ್ಯಕ್ಷತೆಯ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್(ಐಎಸ್‌ಎಸ್‌ಎಫ್) ಅಥ್ಲೆಟಿಕ್ಸ್ ಸಮಿತಿ ಶಿಫಾರಸು ಮಾಡಿದ್ದು, ವಿಶ್ವ ಆಡಳಿತ ಮಂಡಳಿ ಶೀಘ್ರವೇ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಿದೆ. ಅಂಕುರ್ ಮಿತ್ತಲ್‌ಗೆ ಬೆಳ್ಳಿ

ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ವರ್ಷದ ಮೊದಲ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತದ ಖ್ಯಾತ ಶೂಟರ್‌ಗಳಾದ ಜೀತು ರಾಯ್, ಗಗನ್ ನಾರಂಗ್ ಹಾಗೂ ಹೀನಾ ಸಿಧು ಅವರೊಂದಿಗೆ ಅಂಕುರ್ ಸ್ಪರ್ಧಾಕಣದಲ್ಲಿ ಹೊಸ ಮುಖವಾಗಿದ್ದಾರೆ.

ವಿಶ್ವಕಪ್‌ನ ಪುರುಷರ ಡಬಲ್ಸ್ ಟ್ರಾಪ್‌ನಲ್ಲಿ ಅಂಕುರ್ ಮಿತ್ತಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

 ಸೋಮವಾರ ಇಲ್ಲಿ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಒಟ್ಟು 74 ಅಂಕಗಳನ್ನು ಗಳಿಸಿರುವ ಅಂಕುರ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. 75 ಅಂಕ ಬಾಚಿಕೊಂಡಿರುವ ಆಸ್ಟ್ರೇಲಿಯದ ಜೇಮ್ಸ್ ವಿಲ್ಲೆಟ್ ಚಿನ್ನದ ಪದಕವನ್ನು ಗೆದ್ದುಕೊಂಡರು. ಗ್ರೇಟ್ ಬ್ರಿಟನ್‌ನ ಜೇಮ್ಸ್ ಡೆಡ್ಮಾನ್ 56 ಅಂಕ ಗಳಿಸಿ ಮೂರನೆ ಸ್ಥಾನ ಪಡೆದರು.

ಅಂಕುರ್ ಸಹ ಆಟಗಾರ ಸಂಗ್ರಾಮ್ ದಾಹಿಯಾ ಅಗ್ರ-6ರಲ್ಲಿ ಸ್ಥಾನ ಪಡೆದಿದ್ದರೂ ಕೇವಲ 24 ಅಂಕ ಪಡೆಯಲು ಶಕ್ತರಾದರು.

ಇದಕ್ಕೆ ಮೊದಲು ಮಹಿಳೆಯರ 10 ಮೀ. ಏರ್ ರೈಫಲ್‌ನಲ್ಲಿ ಕಂಚಿನ ಪದಕವನ್ನು ಜಯಿಸಿರುವ ಪೂಜಾ ಘಾಟ್ಕರ್ ಭಾರತಕ್ಕೆ ಸ್ಪರ್ಧೆಯಲ್ಲಿ ಮೊದಲ ಪದಕ ಗೆದ್ದುಕೊಟ್ಟಿದ್ದರು. ಮಾಜಿ ಏಷ್ಯಾ ಚಾಂಪಿಯನ್ ಪೂಜಾ 10 ಮೀ. ಏರ್‌ರೈಫಲ್ ಫೈನಲ್‌ನಲ್ಲಿ 228.8 ಅಂಕವನ್ನು ಗಳಿಸಿ ಮೂರನೆ ಸ್ಥಾನ ಪಡೆದಿದ್ದರು. ವಿಶ್ವಕಪ್‌ನಲ್ಲಿ ಚೊಚ್ಚಲ ಪದಕ ಗೆದ್ದುಕೊಂಡಿದ್ದರು.

ಸೋಮವಾರ ನಡೆದ ಮಹಿಳೆಯರ 10 ಮೀ. ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಒಟ್ಟು 378 ಅಂಕ ಗಳಿಸಿರುವ ವಿಶ್ವದ ಮಾಜಿ ನಂ.1 ಶೂಟರ್ ಸಿಧು 11ನೆ ಸ್ಥಾನ ಪಡೆದು ನಿರಾಶೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News