×
Ad

ಲಾಹೋರ್‌ನಲ್ಲಿ ಕ್ರಿಕೆಟ್ ಆಡಲು ಇಂಗ್ಲೆಂಡ್ ಆಟಗಾರರು ಹಿಂದೇಟು

Update: 2017-03-01 23:01 IST

ಲಾಹೋರ್, ಮಾ.1: ಲಾಭದಾಯಕ ಬೋನಸ್ ಕೊಡುಗೆ ನೀಡಿದ ಹೊರತಾಗಿಯೂ ಇಂಗ್ಲೆಂಡ್‌ನ ಹಾಲಿ ಹಾಗೂ ಮಾಜಿ ಆಟಗಾರರು ಭದ್ರತೆಯ ಭೀತಿಯನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಫೈನಲ್ ಪಂದ್ಯವನ್ನು ಲಾಹೋರ್‌ನಲ್ಲಿ ಆಡಲು ನಿರಾಕರಿಸಿದ್ದಾರೆ.

ಮಾಜಿ ನಾಯಕ ಕೇವಿನ್ ಪೀಟರ್ಸನ್, ಇತ್ತೀಚೆಗೆ ಐಪಿಎಲ್‌ನಲ್ಲಿ ಹರಾಜಿರಾಗಿದ್ದ ಟೈಮಲ್ ಮಿಲ್ಸ್ ಸೇರಿದಂತೆ ಇಂಗ್ಲೆಂಡ್‌ನ ಆಟಗಾರರು ಪಿಸಿಬಿ ನೀಡಿರುವ ಆಫರ್‌ನ್ನು ತಿರಸ್ಕರಿಸಿದ್ದಲ್ಲದೆ ಲಾಹೋರ್‌ನಲ್ಲಿ ಆಡಲು ಹಿಂದೇಟು ಹಾಕಿದ್ದಾರೆ.

 ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸುರಕ್ಷಿತವಾಗಿದೆ ಎಂದು ವಿಶ್ವ ಕ್ರಿಕೆಟ್‌ಗೆ ಮನವರಿಕೆ ಮಾಡಿಕೊಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಿಎಸ್‌ಎಲ್‌ನ ಫೈನಲ್ ಪಂದ್ಯವನ್ನು ಲಾಹೋರ್‌ನಲ್ಲಿ ನಿಗದಿಪಡಿಸಿತ್ತು. ಆದರೆ, ಇಂಗ್ಲೆಂಡ್‌ನ ಟ್ವೆಂಟಿ-20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳು 10,000 ರಿಂದ 50,000 ಡಾಲರ್ ಮೊತ್ತದ ಹೆಚ್ಚುವರಿ ಬೋನಸ್‌ನ್ನು ನಿರಾಕರಿಸಿ ಪಾಕ್‌ಗೆ ಬರಲು ಹಿಂದೇಟು ಹಾಕಿರುವುದು ಪಿಸಿಬಿಗೆ ತೀವ್ರ ಹಿನ್ನಡೆಯಾಗಿದೆ.

ಇಂಗ್ಲೆಂಡ್‌ನ ಮೂವರು ಆಟಗಾರರು ಫೈನಲ್‌ಗೆ ಅರ್ಹತೆ ಪಡೆದಿರುವ ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈಗಾಗಲೇ ಲಂಡನ್‌ಗೆ ವಾಪಸಾಗಿರುವ ಪೀಟರ್ಸನ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಮೂರು ಫ್ರಾಂಚೈಸಿಗಳಲ್ಲಿರುವ ಇತರ ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಪ್ರವಾಸಕೈಗೊಳ್ಳುವ ಸಾಧ್ಯತೆಯಿಲ್ಲ. ಕರಾಚಿ ಕಿಂಗ್ಸ್ ತಂಡದ ಕ್ರಿಸ್ ಗೇಲ್, ಕಿರೊನ್ ಪೊಲಾರ್ಡ್, ಕುಮಾರ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆ, ಪೇಶಾವರ ತಂಡದ ಡೇವಿಡ್ ಮಲಾನ್ ಹಾಗೂ ಕ್ರಿಸ್ ಜೋರ್ಡನ್, ಇಸ್ಲಾಮಾಬಾದ್ ಯುನೈಟೆಡ್ ತಂಡದ ಡ್ವೆಯ್ನೆ ಸ್ಮಿತ್, ಸ್ಯಾಮುಯೆಲ್ ಬದ್ರಿ, ಬ್ರಾಡ್ ಹಡಿನ್, ಶೇನ್ ವ್ಯಾಟ್ಸನ್ ಅವರು ಲಾಹೋರ್‌ನಲ್ಲಿ ಫೈನಲ್ ಪಂದ್ಯ ಆಡಲು ನಿರಾಸಕ್ತಿ ತೋರಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News