ವಿಂಡೀಸ್ ಆಲ್‌ರೌಂಡರ್ ಸ್ಮಿತ್ ವಿದಾಯ
ಶಾರ್ಜಾ,ಮಾ.2: ವೆಸ್ಟ್‌ಇಂಡೀಸ್‌ನ ಸ್ಫೋಟಕ ದಾಂಡಿಗ ಡ್ವೆಯ್ನೆ ಸ್ಮಿತ್ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ಕೇಪ್‌ಟೌನ್‌ನಲ್ಲಿ 2004ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿರುವ ಆಲ್‌ರೌಂಡರ್ ಸ್ಮಿತ್ 2015ರ ಮಾರ್ಚ್‌ನಲ್ಲಿ ಐಸಿಸಿ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.
ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇಸ್ಲಾಮಾಬಾದ್ ಯನೈಟೆಡ್ ತಂಡದಲ್ಲಿ ಆಡುತ್ತಿರುವ ಸ್ಮಿತ್ ಶಾರ್ಜಾ ಸ್ಟೇಡಿಯಂನಲ್ಲಿ ಕರಾಚಿ ಕಿಂಗ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯವನ್ನು ಆಡುವ ಮೊದಲು ನಿವೃತ್ತಿಯ ನಿರ್ಧಾರ ಪ್ರಕಟಿಸಿದರು.
2003-04ರಲ್ಲಿ ವೆಸ್ಟ್‌ಇಂಡೀಸ್ ತಂಡ ದ.ಆಫ್ರಿಕ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಚೊಚ್ಚಲ ಪಂದ್ಯದಲ್ಲಿ ಅಜೇಯ 105 ರನ್ ಗಳಿಸಿದ್ದರು.
ಕೇವಲ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಸ್ಮಿತ್ 320 ರನ್ ಗಳಿಸಿದ್ದರು. ನೇಪಿಯರ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ 2006ರಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು.
ಸ್ಮಿತ್ ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿ ಬ್ಯಾಟ್ಸ್‌ಮನ್ ಆಗಿದ್ದರು. 105 ಏಕದಿನ ಪಂದ್ಯಗಳಲ್ಲಿ 1560 ರನ್ ಗಳಿಸಿದ್ದರು. ಇದರಲ್ಲಿ 8 ಅರ್ಧಶತಕಗಳಿವೆ. 61 ವಿಕೆಟ್‌ಗಳನ್ನು ಪಡೆದಿದ್ದರು. 33ರ ಪ್ರಾಯದ ಸ್ಮಿತ್ 2007, 2012 ಹಾಗೂ 2014ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ವಿಂಡೀಸ್‌ನ್ನು ಪ್ರತಿನಿಧಿಸಿದ್ದರು.
33 ಟಿ-20 ಪಂದ್ಯಗಳಲ್ಲಿ 580 ರನ್ ಗಳಿಸಿದ್ದು, 3 ಅರ್ಧಶತಕಗಳನ್ನು ಬಾರಿಸಿದ್ದು, 72 ಗರಿಷ್ಠ ಸ್ಕೋರಾಗಿದೆ. ಸ್ಮಿತ್ ಹಲವು ಟ್ವೆಂಟಿ-20 ಲೀಗ್‌ಗಳಲ್ಲಿ ಆಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಕ್ಕನ್ ಚಾರ್ಜರ್ಸ್, ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.