×
Ad

ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದಲ್ಲೊಬ್ಬ ದೈತ್ಯ ಕ್ರಿಕೆಟಿಗ!

Update: 2017-03-02 17:41 IST

ಜಮೈಕಾ,ಮಾ.2: ಇಂಗ್ಲೆಂಡ್ ತಂಡ ಶುಕ್ರವಾರ ಮೊದಲ ಏಕದಿನ ಪಂದ್ಯವನ್ನಾಡುವ ಮೂಲಕ ವೆಸ್ಟ್‌ಇಂಡೀಸ್ ಪ್ರವಾಸವನ್ನು ಆರಂಭಿಸಲಿದೆ. ಉಭಯ ತಂಡಗಳಲ್ಲಿ 2016ರ ಟ್ವೆಂಟಿ-20 ವಿಶ್ವಕಪ್ ಫೈನಲ್ ಹೀರೋಗಳಾಗಿದ್ದ ಬೆನ್ ಸ್ಟೋಕ್ಸ್ ಹಾಗೂ ವಿಂಡೀಸ್‌ನ ಬ್ರಾತ್‌ವೇಟ್ ಆಕರ್ಷಣೆಯಾಗಿದ್ದಾರೆ. ಆದರೆ, ಸರಣಿ ಆರಂಭಕ್ಕೆ ಮೊದಲು ವಿಂಡೀಸ್‌ನ ಆಲ್‌ರೌಂಡರ್‌ವೊಬ್ಬರು ಭಾರೀ ಸುದ್ದಿ ಮಾಡುತ್ತಿದ್ದಾರೆ. ಪ್ರಾಕ್ಟೀಸ್ ಪಂದ್ಯಗಳನ್ನು ಆಡಿರುವ ಈ ಆಟಗಾರ ಆಲ್‌ರೌಂಡ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಆರು ಅಡಿ ಆರು ಇಂಚು ಎತ್ತರದ, ಸುಮಾರು 140 ಕೆಜಿ ತೂಕದ ಆ್ಯಂಟಿಗುವಾ ದ್ವೀಪದ ದೈತ್ಯ ಆಟಗಾರ ರಹಕೀಮ್ ಕಾರ್ನ್‌ವಾಲ್ ಅಭ್ಯಾಸ ಪಂದ್ಯಗಳಲ್ಲಿ ಆಲ್‌ರೌಂಡ್ ಪ್ರದರ್ಶನದಿಂದ ಮಿಂಚುತ್ತಿದ್ದಾರೆ.

 ಮುಂಬರುವ ದಿನಗಳಲ್ಲಿ ವೆಸ್ಟ್‌ಇಂಡೀಸ್ ತಂಡದಲ್ಲಿ ಈ ಆಟಗಾರ ಆಡಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಅತ್ಯಂತ ತೂಕದ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾಗುವುದು ಖಚಿತ.

 2016ರಲ್ಲಿ ಭಾರತ ತಂಡ ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಂಡಿದ್ದ ಸಂದರ್ಭ ಕಾರ್ನ್‌ವಾಲ್ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಯ ಇಲೆವೆನ್ ತಂಡದ ಪರ ಅಭ್ಯಾಸ ಪಂದ್ಯ ಆಡಿದ್ದರು. ಆ ಪಂದ್ಯದಲ್ಲಿ 41 ರನ್ ಗಳಿಸಿದ್ದ ಕಾರ್ನ್‌ವಾಲ್ ಅವರು ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಸಹಿತ ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.

ಶ್ರೀಲಂಕಾ ತಂಡಕ್ಕೆ ಪ್ರವಾಸ ಕೈಗೊಂಡಿದ್ದ ವೆಸ್ಟ್‌ಇಂಡೀಸ್ ಎ ತಂಡದಲ್ಲಿ ಆಯ್ಕೆಯಾಗಿದ್ದ ಕಾರ್ನ್‌ವಾಲ್ ಸರಣಿಯಲ್ಲಿ ಗರಿಷ್ಠ 23 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು.

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಕಾರ್ನ್‌ವಾಲ್ 59 ರನ್ ಗಳಿಸಿದ್ದಲ್ಲದೆ 10 ಓವರ್‌ಗಳಲ್ಲಿ 39 ರನ್‌ಗೆ 1 ವಿಕೆಟ್ ಪಡೆದಿದ್ದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 25 ಪಂದ್ಯಗಳನ್ನು ಆಡಿರುವ ಕಾರ್ಲ್‌ವಾಲ್ 24ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಬೌಲಿಂಗ್‌ನಲ್ಲಿ 125 ವಿಕೆಟ್‌ಗಳನ್ನು ಪಡೆದಿದ್ದರು.

ಲೀಸ್ಟ್ ಎ ಪಂದ್ಯಗಳಲ್ಲಿ 21 ಇನಿಂಗ್ಸ್‌ಗಳಲ್ಲಿ 557 ರನ್ ಗಳಿಸಿರುವ ಕಾರ್ಲ್‌ವಾಲ್ 20 ವಿಕೆಟ್‌ಗಳನ್ನು ಉರುಳಿಸಿದ್ದರು.

ಸರಣಿಯ ಮೊದಲ ಪಂದ್ಯದಲ್ಲಿಇಂಗ್ಲೆಂಡ್‌ನ ಬೆನ್‌ಸ್ಟೋಕ್ಸ್ ಹಾಗೂ ವಿಂಡೀಸ್‌ನ ಕಾರ್ಲಸ್ ಬ್ರಾತ್‌ವೇಟ್ ಮುಖಾಮುಖಿಯಾಗುತ್ತಿದ್ದಾರೆ. 2016ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಬ್ರಾತ್‌ವೇಟ್ ಕೊನೆಯ ಓವರ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆ ಸುರಿಸಿ ವಿಂಡೀಸ್ ಚಾಂಪಿಯನ್ ಪಟ್ಟಕ್ಕೆೇರಲು ನೆರವಾಗಿದ್ದರು.

ಇಂಗ್ಲೆಂಡ್ ತಂಡ ಸರಣಿ ಗೆಲ್ಲುವ ಫೇವರಿಟ್ ತಂಡವಾಗಿರುವ ಕಾರಣ ವಿಂಡೀಸ್‌ಗೆ ಕಠಿಣ ಸವಾಲು ಎದುರಾಗಿದೆ. ಆದಾಗ್ಯೂ ತವರಿನ ವಾತಾವರಣದ ಲಾಭವೆತ್ತುವ ವಿಶ್ವಾಸದಲ್ಲಿದೆ. ಮುಂಬರುವ ಪಂದ್ಯಗಳಲ್ಲಿ ಕಾರ್ಲ್‌ವಾಲ್‌ಗೆ ಅವಕಾಶ ನೀಡುವುದೇ ಕಾದುನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News