×
Ad

ಬಿಸಿಸಿಐ ಪ್ರಶಸ್ತಿ ಸಮಾರಂಭ ಬಹಿಷ್ಕರಿಸಲು ಕೆಎಸ್‌ಸಿಎ ಚಿಂತನೆ

Update: 2017-03-04 23:52 IST

ಬೆಂಗಳೂರು, ಮಾ.4: ಭಾರತ-ಆಸ್ಟ್ರೇಲಿಯ ನಡುವೆ ಶನಿವಾರ ಇಲ್ಲಿ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದ ಆತಿಥ್ಯವಹಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಬೆಂಗಳೂರಿನಲ್ಲಿ ಮಾ.8 ರಂದು ನಡೆಯಲಿರುವ ಎಂಎಕೆ ಪಟೌಡಿ ಸ್ಮಾರಕ ಉಪನ್ಯಾಸ ಹಾಗೂ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಈ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದೆ ಎನ್ನಲಾಗಿದೆ.

ದೇಶದ ಇತರ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಕೆಎಸ್‌ಸಿಎ ಹೆಜ್ಜೆಯನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ತಿಳಿಸಿದೆ.

ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಕಳೆದ ವಾರ ಕೆಎಸ್‌ಸಿಎಗೆ ಇ-ಮೇಲ್ ಸಂದೇಶ ಕಳುಹಿಸಿ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅರ್ಹತೆ ಇರುವ ಪದಾಧಿಕಾರಿಗಳು ಮಾತ್ರ ಬಿಸಿಸಿಐ ಕಾರ್ಯಕ್ರಮದಲ್ಲಿ ದಯವಿಟ್ಟು ಹಾಜರಿರಬೇಕು ಎಂದು ತಿಳಿಸಿದ್ದರು.

ಈ ಬಾರಿ ಐದನೆ ಆವೃತ್ತಿಯ ಎಂಎಕೆ ಪಟೌಡಿ ಸ್ಮಾರಕ ಉಪನ್ಯಾಸವನ್ನು ಮಾಜಿ ವಿಕೆಟ್‌ಕೀಪರ್ ಫಾರೂಕ್ ಇಂಜಿನಿಯರ್ ನೀಡಲಿದ್ದಾರೆ. ಕೆಎಸ್‌ಸಿಎ ಹಾಲಿ ಅಧ್ಯಕ್ಷ ಸಂಜಯ್ ದೇಸಾಯಿ ಹಾಗೂ ಕಾರ್ಯದರ್ಶಿ ಕೆ.ಸುಧಾಕರ್ ಮಾ.3 ರಂದು ಬಿಸಿಸಿಐಗೆ ಕಳುಹಿಸಿದ ಇ-ಮೇಲ್‌ನಲ್ಲಿ ಕಳೆದೊಂದು ದಶಕದಿಂದ ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸಿರುವವರನ್ನು ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಪಕ್ಷಪಾತದಿಂದ ನೋಡುತ್ತಿದೆ ಎಂದು ಖಾರವಾಗಿಯೇ ಉತ್ತರಿಸಿದ್ದರು.

ಕೆಎಸ್‌ಸಿಎ ಬಿಸಿಸಿಐಗೆ ಪತ್ರದ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿರುವ ಮೊದಲ ಕ್ರಿಕೆಟ್ ಸಂಸ್ಥೆಯಾಗಿದೆ. ಮಾ.8 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಇತರ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಭಾಗವಹಿಸುವ ಸಾಧ್ಯತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News