×
Ad

ದ್ವಿತೀಯ ಟೆಸ್ಟ್: ಮೊದಲ ದಿನ ಆಸ್ಟ್ರೇಲಿಯ ಮೇಲುಗೈ

Update: 2017-03-04 23:56 IST

ಬೆಂಗಳೂರು, ಮಾ.4: ಆಫ್-ಸ್ಪಿನ್ನರ್ ನಥಾನ್ ಲಿಯೊನ್(8-50)ಸ್ಪಿನ್ ದಾಳಿಗೆ ನಲುಗಿದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಕೇವಲ 189 ರನ್‌ಗೆ ಆಲೌಟಾಗಿದೆ.

 ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ಮೊದಲ ದಿನದಾಟದಂತ್ಯಕ್ಕೆ 16 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದ್ದು, ಡೇವಿಡ್ ವಾರ್ನರ್(ಅಜೇಯ 23) ಹಾಗೂ ರೆನ್‌ಶಾ(ಅಜೇಯ 15) ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟವಾದ ಶನಿವಾರ ಆಸ್ಟ್ರೇಲಿಯ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಲಿಯೊನ್ ದಿನದ ಹೀರೋವಾಗಿ ಹೊರಹೊಮ್ಮಿದರು. ಭಾರತ ತಂಡ ಪುಣೆ ಟೆಸ್ಟ್‌ನಲ್ಲಿ ನೀಡಿರುವ ಪ್ರದರ್ಶನವನ್ನೇ ಪುನರಾವರ್ತಿಸಿತು. ಮೊದಲ ಟೆಸ್ಟ್‌ನಂತೆಯೇ 2ನೆ ಟೆಸ್ಟ್‌ನಲ್ಲಿಯೂ ಕೆ.ಎಲ್. ರಾಹುಲ್ ಏಕಾಂಗಿ ಹೋರಾಟ ನೀಡಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಲಿಯೊನ್ ಸಂಘಟಿಸಿದ ಜೀವನಶ್ರೇಷ್ಠ ಬೌಲಿಂಗ್‌ಗೆ ನಿರುತ್ತರವಾಗಿ 71.2 ಓವರ್‌ಗಳಲ್ಲಿ ಕೇವಲ 189 ರನ್‌ಗೆ ಆಲೌಟಾಯಿತು. ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಮೊದಲ ದಿನದಾಟದಲ್ಲೇ ಪಿಚ್ ಸ್ಪಿನ್ನರ್‌ಗಳ ಸ್ನೇಹಿಯಾಗಿ ಪರಿಣಮಿಸಿದ್ದು 22.2 ಓವರ್‌ಗಳ ಬೌಲಿಂಗ್ ನಡೆಸಿದ ಲಿಯೊನ್ 4 ಮೇಡನ್ ಓವರ್ ಸಹಿತ 50 ರನ್‌ಗೆ 8 ವಿಕೆಟ್‌ಗಳನ್ನು ಉಡಾಯಿಸಿದರು. ಬ್ರೆಟ್ ಲೀ ದಾಖಲೆಯನ್ನು ಮುರಿದ ಲಿಯೊನ್ ಭಾರತ ವಿರುದ್ಧ ಗರಿಷ್ಠ ವಿಕೆಟ್ ಪಡೆದ ಆಸೀಸ್ ಬೌಲರ್ ಎಂಬ ಕೀರ್ತಿಗೆ ಭಾಜನರಾದರು.

 ‘ಲೋಕಲ್ ಹೀರೊ’ ರಾಹುಲ್(90 ರನ್, 205 ಎಸೆತ, 9 ಬೌಂಡರಿ) ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರೆ, ಉಳಿದ ದಾಂಡಿಗರು ಆಸೀಸ್‌ನ ಶಿಸ್ತುಬದ್ಧ ಬೌಲಿಂಗ್ ದಾಳಿ ಎದುರಿಸಲಾಗದೇ ಶಸ್ತ್ರತ್ಯಾಗ ಮಾಡಿದರು. ಒಂದು ಹಂತದಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿದ್ದ ಭಾರತ 15 ರನ್ ಸೇರಿಸುವಷ್ಟರಲ್ಲಿ ಅಂತಿಮ 5 ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟಾಯಿತು. ಭಾರತದ ಕೆಳ ಕ್ರಮಾಂಕದ ಎಲ್ಲ ಐವರು ಬ್ಯಾಟ್ಸ್‌ಮನ್‌ಗಳು ಒಂದಂಕಿ ದಾಖಲಿಸಲಷ್ಟೇ ಶಕ್ತರಾದರು.

   ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದು ಕೇವಲ 10 ರನ್‌ನಿಂದ 5ನೇ ಶತಕ ವಂಚಿತರಾದರು. 30 ಹಾಗೂ 61 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ರಾಹುಲ್ ಸರಣಿಯಲ್ಲಿ ಸತತ 2ನೆ ಹಾಗೂ ಒಟ್ಟಾರೆ 3ನೆ ಅರ್ಧಶತಕವನ್ನು ಬಾರಿಸಿದರು. ಕೊನೆಯ ತನಕ ಹೋರಾಟ ನೀಡಿದ ಅವರು ಲಿಯೊನ್‌ಗೆ ವಿಕೆಟ್ ಒಪ್ಪಿಸಿದರು.

 ವೇಗಿಗಳಾದ ಸ್ಟಾರ್ಕ್ ಹಾಗೂ ಹೇಝಲ್‌ವುಡ್ ಹೊಸ ಚೆಂಡಿನಲ್ಲಿ ಬಿಗಿ ಬೌಲಿಂಗ್ ಮಾಡಿ ಆರಂಭದಲ್ಲೇ ಸವಾಲಾದರು. ಸ್ಟಾರ್ಕ್ ಅವರು ಅಭಿನವ್ ಮುಕುಂದ್(0) ವಿಕೆಟ್ ಪಡೆದು ಪ್ರವಾಸಿಗರ ವಿಕೆಟ್ ಬೇಟೆಗೆ ಚಾಲನೆ ನೀಡಿದರು.

ಗಾಯಗೊಂಡಿರುವ ಮುರಳಿ ವಿಜಯ್ ಬದಲಿಗೆ ರಾಹುಲ್‌ರೊಂದಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದಿದ್ದ ಚೆನ್ನೈ ಆಟಗಾರ ಅಭಿನವ್ ಮುಕುಂದ್ 8 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯಲು ವಿಫಲವಾಗಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.

ಆಗ 2ನೆ ವಿಕೆಟ್‌ಗೆ ಚೇತೇಶ್ವರ ಪೂಜಾರ(17) ಅವರೊಂದಿಗೆ 61 ರನ್ ಜೊತೆಯಾಟ ನಡೆಸಿದ ರಾಹುಲ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಯತ್ನ ನಡೆಸಿದರು. ಈ ಜೋಡಿಯನ್ನು ಲಿಯೊನ್ ಬೇರ್ಪಡಿಸಿದರು. 66 ಎಸೆತಗಳಲ್ಲಿ 1 ಬೌಂಡರಿ ಸಹಿತ ಕೇವಲ 17 ರನ್ ಗಳಿಸಿದ್ದ ಪೂಜಾರ ಅವರು ಲಿಯೊನ್‌ಗೆ ವಿಕೆಟ್ ಒಪ್ಪಿಸಿದರು. ಪೂಜಾರ ಔಟಾದ ಬಳಿಕ ಬಂದ ನಾಯಕ ಕೊಹ್ಲಿ ಹಾಗೂ ರಹಾನೆ(17) ಬೇಗನೆ ಔಟಾಗಿ ನಿರಾಸೆಗೊಳಿಸಿದರು.

 ನಾಯಕ ಕೊಹ್ಲಿ 17 ಎಸೆತಗಳನ್ನು ಎದುರಿಸಿ 2 ಬೌಂಡರಿಗಳಿರುವ 12 ರನ್ ಗಳಿಸಿ ಲಿಯೊನ್ ಬೀಸಿದ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಆಗ ತಂಡದ ಸ್ಕೋರ್ 3 ವಿಕೆಟ್‌ಗೆ 88. 4ನೆ ವಿಕೆಟ್‌ಗೆ ರಹಾನೆ ಹಾಗೂ ರಾಹುಲ್ 30 ರನ್ ಸೇರಿಸಿದರು. 17 ರನ್ ಗಳಿಸಿದ್ದ ರಹಾನೆ ಅವರು ಲಿಯೊನ್ ಎಸೆತದಲ್ಲಿ ವಿಕೆಟ್‌ಕೀಪರ್ ವೇಡ್‌ರಿಂದ ಸ್ಟಂಪ್ ಔಟಾದರು.

ಆಗ 5ನೆ ವಿಕೆಟ್‌ಗೆ ಕರುಣ್ ನಾಯರ್(26) ಹಾಗೂ ರಾಹುಲ್ 38 ರನ್ ಜೊತೆಯಾಟ ನೀಡಿ ತಂಡವನ್ನು ಆಧರಿಸುವ ಸೂಚನೆ ನೀಡಿದ್ದರು. ಕನ್ನಡಿಗ ನಾಯರ್ ವಿಕೆಟ್ ಉರುಳಿಸಿದ ಸ್ಪಿನ್ನರ್ ಸ್ಟೀಫನ್ ಓ’ಕೀಫೆ ಆಸೀಸ್‌ಗೆ ಮತ್ತೊಮ್ಮೆ ಮೇಲುಗೈ ತಂದರು.

ಭಾರತ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ ಮಾಡಿತ್ತು. ಚೆನ್ನೈ ಆರಂಭಿಕ ಆಟಗಾರ ಅಭಿನವ್ ಮುಕುಂದ್ ಗಾಯಗೊಂಡಿರುವ ಮುರಳಿ ವಿಜಯ್ ಬದಲಿಗೆ ಅವಕಾಶ ಪಡೆದರು. ಮುಕುಂದ್ ಐದೂವರೆ ವರ್ಷಗಳ ಬಳಿಕ ಆಡುವ 11ರ ಬಳಗಕ್ಕೆ ವಾಪಸಾದರು.

ಇಂಗ್ಲೆಂಡ್ ವಿರುದ್ಧ ಕಳೆದ ವರ್ಷ ಡಿಸೆಂಬರ್‌ನಲ್ಲಿ ತ್ರಿಶತಕ(303) ಸಿಡಿಸಿದ್ದ ಕನ್ನಡಿಗ ಕರುಣ್ ನಾಯರ್ ಅವರು ಜಯಂತ್ ಯಾದವ್ ಬದಲಿಗೆ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ವಿಜಯ್ ಹಾಗೂ ರಾಹುಲ್ ಪುಣೆ ಟೆಸ್ಟ್‌ನಲ್ಲಿ ಫೀಲ್ಡಿಂಗ್‌ನ ವೇಳೆ ಭುಜದ ನೋವಿಗೆ ಒಳಗಾಗಿದ್ದರು. ರಾಹುಲ್ ಸರಿಯಾದ ಸಮಯಕ್ಕೆ ಚೇತರಿಸಿಕೊಂಡಿದ್ದರೆ, ವಿಜಯ್ ಇನ್ನ್ನೂ ಫಿಟ್ ಆಗಿಲ್ಲ.

ಸ್ಕೋರ್ ವಿವರ

ಭಾರತ ಪ್ರಥಮ ಇನಿಂಗ್ಸ್: 71.2 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟ್

ಕೆಎಲ್ ರಾಹುಲ್ ಸಿ ರೆನ್‌ಶಾ ಬಿ ಲಿಯೊನ್ 90

ಎ.ಮುಕುಂದ್ ಎಲ್ಬಿಡಬ್ಲು ಬಿ ಸ್ಟಾರ್ಕ್ 00

ಚೇತೇಶ್ವರ ಪೂಜಾರ ಸಿ ಹ್ಯಾಂಡ್ಸ್‌ಕಾಂಬ್ ಬಿ ಲಿಯೊನ್ 17

ವಿರಾಟ್ ಕೊಹ್ಲಿ ಎಲ್ಬಿಡಬ್ಲು ಲಿಯೊನ್ 12

ಅಜಿಂಕ್ಯ ರಹಾನೆ ಸ್ಟಂ.ವೇಡ್ ಬಿ ಲಿಯೊನ್ 17

ಕರುಣ್ ನಾಯರ್ ಸ್ಟಂ.ವೇಡ್ ಬಿ ಓ’ಕೀಫೆ 26

ಆರ್.ಅಶ್ವಿನ್ ಸಿ ವಾರ್ನರ್ ಬಿ ಲಿಯೊನ್ 07

ವೃದ್ಧಿಮಾನ್ ಸಹಾ ಸಿ ಸ್ಮಿತ್ ಬಿ ಲಿಯೊನ್ 01

ರವೀಂದ್ರ ಜಡೇಜ ಸಿ ಸ್ಮಿತ್ ಬಿ ಲಿಯೊನ್ 03

ಉಮೇಶ್ ಯಾದವ್ ಅಜೇಯ 00

ಇಶಾಂತ್ ಶರ್ಮ ಸಿ ಹ್ಯಾಂಡ್ಸ್‌ಕಾಂಬ್ ಬಿ ಲಿಯೊನ್ 00

ಇತರ 16

ವಿಕೆಟ್ ಪತನ: 1-11, 2-72, 3-88, 4-118, 5-156, 6-174, 7-178, 8-188, 9-189, 10-189.

ಬೌಲಿಂಗ್ ವಿವರ:

ಮಿಚೆಲ್ ಸ್ಟಾರ್ಕ್ 15-05-39-01

ಹೇಝಲ್‌ವುಡ್ 11-02-42-00

ಸ್ಟೀಫನ್ ಓ’ಕೀಫೆ 21-5-40-1

ಮಿಚೆಲ್ ಮಾರ್ಷ್ 02-00-02-00

ಲಿಯೊನ್ 22.2-04-50-08

ಆಸ್ಟ್ರೇಲಿಯ ಮೊದಲ ಇನಿಂಗ್ಸ್: 16 ಓವರ್‌ಗಳಲ್ಲಿ 40/0

ಡೇವಿಡ್ ವಾರ್ನರ್ ಅಜೇಯ 23

ರೆನ್‌ಶಾ ಅಜೇಯ 15

ಇತರ 02

ಬೌಲಿಂಗ್ ವಿವರ:

ಇಶಾಂತ್ ಶರ್ಮ 05-00-08-00

ಉಮೇಶ್ ಯಾದವ್ 04-01-16-00

ಆರ್.ಅಶ್ವಿನ್ 06-00-11-00

ಆರ್.ಜಡೇಜ 01-00-05-00

ಅಂಕಿ-ಅಂಶ

8/50: ಲಿಯೊನ್ ಆಸ್ಟ್ರೇಲಿಯದ ಪರ ದ್ವಿತೀಯ ಶ್ರೇಷ್ಠ ಬೌಲಿಂಗ್ (8-50)ಸಂಘಟಿಸಿದರು. 1920-21ರಲ್ಲಿ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್‌ನ ವಿರುದ್ಧ ಅರ್ಥರ್ ಮೈಲೇ(9-121) ಆಸೀಸ್‌ನ ಪರ ಶ್ರೇಷ್ಠ ಬೌಲಿಂಗ್ ಮಾಡಿದ್ದರು.

04: ಲಿಯೊನ್ ಭಾರತದಲ್ಲಿ 8 ವಿಕೆಟ್ ಗೊಂಚಲು ಪಡೆದ ನಾಲ್ಕನೆ ವಿದೇಶಿ ಸ್ಪಿನ್ ಬೌಲರ್. ಲ್ಯಾನ್ಸ್ ಕ್ಲೂಸ್ನರ್, ಸಿಖಂದರ್ ಭಕ್ತ್ ಹಾಗೂ ಜೇಸನ್ ಕ್ರೇಝಾ ಈ ಸಾಧನೆ ಮಾಡಿದ್ದಾರೆ.

03: ಲಿಯೊನ್ ಭಾರತ ವಿರುದ್ಧ ಮೂರನೆ ಬಾರಿ 7 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. 2012-13ರ ದಿಲ್ಲಿ ಟೆಸ್ಟ್‌ನಲ್ಲಿ 94 ರನ್‌ಗೆ 7 ಹಾಗೂ 2014-15ರಲ್ಲಿ ಅಡಿಲೇಡ್‌ನಲ್ಲಿ 152 ರನ್‌ಗೆ 7 ವಿಕೆಟ್ ಪಡೆದಿದ್ದರು. ಲಿಯೊನ್ ಭಾರತ ವಿರುದ್ಧ ಆಡಿರುವ 12 ಟೆಸ್ಟ್‌ಗಳಲ್ಲಿ 4ನೆ ಬಾರಿ ಐದು ವಿಕೆಟ್ ಗೊಂಚಲು ಪಡೆದರು.

 58: ಲಿಯೊನ್ ಭಾರತದ ವಿರುದ್ಧ ಒಟ್ಟು 58 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬ್ರೆಟ್‌ಲೀ(57 ವಿಕೆಟ್) ದಾಖಲೆಯನ್ನು ಮುರಿದ ಲಿಯೊನ್ ಭಾರತ ವಿರುದ್ಧ ಗರಿಷ್ಠ ವಿಕೆಟ್ ಪಡೆದ ಆಸ್ಟ್ರೇಲಿಯದ ಬೌಲರ್ ಎನಿಸಿಕೊಂಡರು.

05: ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಟೆಸ್ಟ್‌ನಲ್ಲಿ ಐದು ಬಾರಿ ಲಿಯೊನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News