ಎರಡನೆ ಟೆಸ್ಟ್ ನಲ್ಲಿ ಭಾರತಕ್ಕೆ 75 ರನ್ ಗಳ ಜಯ
ಬೆಂಗಳೂರು,ಮಾ.7: ಭಾರತ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ 75 ರನ್‌ಗಳ ರೋಚಕ ಜಯ ದಾಖಲಿಸಿದೆ. ಇದರೊಂದಿಗೆ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 1-1 ಸಮಬಲ ಸಾಧಿಸಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್‌ನ ನಾಲ್ಕನೆ ದಿನ ಭಾರತದ ವಿರುದ್ಧ ಗೆಲುವಿಗೆ 188 ರನ್‌ಗಳ ಸುಲಭದ ಸವಾಲನ್ನು ಪಡೆದ ಆಸ್ಟ್ರೇಲಿಯ 35.4 ಓವರ್‌ಗಳಲ್ಲಿ 112 ರನ್‌ಗಳಿಗೆ ಆಲೌಟಾಗಿದೆ.
ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 41 ರನ್‌ಗೆ 6 ವಿಕೆಟ್ ಉಡಾಯಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪುಣೆಯಲ್ಲಿ ಮೊದಲ ಟೆಸ್ಟ್‌ನಲ್ಲಿ ಭಾರತದ ವಿಕೆಟ್‌ಗಳು ಉರುಳಿದಂತೆ ಇಲ್ಲಿ ಎರಡನೆ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ ಆಸ್ಸ್ರೇಲಿಯದ ವಿಕೆಟ್‌ಗಳು ಪತನಗೊಂಡಿತು. ಕೊನೆಯ 6 ವಿಕೆಟ್‌ಗಳು ಕೇವಲ 11 ರನ್‌ಗಳಿಗೆ ಉರುಳಿತು. ಪುಣೆಯಲ್ಲಿ ಮೊದಲ ಟೆಸ್ಟ್‌ನಲ್ಲಿ ಸೋತು ಆಘಾತಗೊಂಡಿದ್ದ ಕೊಹ್ಲಿ ಬಳಗ ಅನಿರೀಕ್ಷಿತ ಗೆಲುವು ದಾಖಲಿಸಿದೆ.
ಲೋಕೇಶ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ಮೊದಲ ಇನಿಂಗ್ಸ್‌ನಲ್ಲಿ 90 ಮತ್ತು ಎರಡನೆ ಇನಿಂಗ್ಸ್‌ನಲ್ಲಿ 51 ರನ್ ಗಳಿಸಿದ್ದರು.
ರಾಹುಲ್ ಅರ್ಧಶತಕ, ಚೇತೇಶ್ವರ ಪೂಜಾರ 92 ರನ್, ಅಜಿಂಕ್ಯ ರಹಾನೆ 52ರನ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ 20ರನ್ ನೆರವಿನಲ್ಲಿ ಭಾರತ ಎರಡನೆ ಇನಿಂಗ್ಸ್‌ನಲ್ಲಿ 97.1 ಓವರ್‌ಗಳಲ್ಲಿ 274 ರನ್ ಗಳಿಸಿತ್ತು.
ಭಾರತದ ಅಶ್ವಿನ್ (8 ವಿಕೆಟ್) ಮತ್ತು ರವೀಂದ್ರ ಜಡೇಜ(7 ವಿಕೆಟ್) ಆಸ್ಟ್ರೇಲಿಯದ ಪತನಗೊಂಡ 20 ವಿಕೆಟ್‌ಗಳಲ್ಲಿ 15 ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯದ ಪರ ನಾಯಕ ಸ್ಟೀವ್ ಸ್ಮಿತ್(28) ಮತ್ತು ಹ್ಯಾಂಡ್ಸ್‌ಕಂಬ್ (24) ಇವರನ್ನು ಹೊರತುಪಡಿಸಿದರೆ ಇತರ ಯಾರಿಗೂ 18ಕ್ಕಿಂತ ಹೆಚ್ಚು ರನ್ ದಾಖಲಿಸಲು ಸಾಧ್ಯವಾಗಲಿಲ್ಲ. ಡೇವಿಡ್ ವಾರ್ನರ್ (17) ಮತ್ತು ಮಿಷೆಲ್ ಮಾರ್ಷ್(13) ಎರಡಂಕೆಯ ಸ್ಕೋರ್ ದಾಖಲಿಸಿದರು.
ವಾರ್ನರ್ ಮತ್ತು ಮಾರ್ಷ್ ಐದನೆ ವಿಕೆಟ್‌ಗೆ 27 ರನ್‌ಗಳ ಜೊತೆಯಾಟ ನೀಡಿದರು. 10 ಓವರ್‌ಗಳು ಮುಕ್ತಾಯಗೊಳ್ಳುವ ತನಕ ಭಾರತ ಗೆಲ್ಲುವ ಯಾವುದೇ ಸೂಚನೆ ಇರಲಿಲ್ಲ. ಆಸ್ಟ್ರೇಲಿಯ ಗೆಲುವಿನ ಹಾದಿಯಲ್ಲಿ ಇತ್ತು. ಆರಂಭಿಕ ದಾಂಡಿಗ ಮ್ಯಾಟ್ ರೆನ್‌ಶಾ (5) ಔಟಾಗುವುದರೊಂದಿಗೆ ಆಸ್ಟ್ರೇಲಿಯ 42ಕ್ಕೆ 1 ವಿಕೆಟ್ ಕಳೆದುಕೊಂಡಿತ್ತು. ಇಶಾಂತ್ ಶರ್ಮ ಅವರು ರೆನ್‌ಶಾ ವಿಕೆಟ್ ಪಡೆದಿದ್ದರು.
9.1ನೆ ಓವರ್‌ನಲ್ಲಿ ಅಶ್ವಿನ್ ಅವರು ಆರಂಭಿಕ ದಾಂಡಿಗ ಡೇವಿಡ್ ವಾರ್ನರ್(17)ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಳಿಕ ಪಂದ್ಯ ಹೊಸ ತಿರುವು ಪಡೆಯಿತು.
ನಾಯಕ ಸ್ಮಿತ್ ಮತ್ತು ಶಾನ್ ಮಾರ್ಷ್‌ರನ್ನು ಎಲ್‌ಬಿಡಬ್ಯು ಬಲೆಗೆ ಬೀಳಿಸಿದ ಉಮೇಶ್ ಯಾದವ್ ಆಸ್ಟ್ರೇಲಿಯದ ಗೆಲುವಿನ ಹಾದಿಯನ್ನು ಬಂದ್ ಮಾಡಿದರು. ಮಾರ್ಷ್ 9ರನ್ ಗಳಿಸಿದರು.
ಮಿಷೆಲ್ ಮಾರ್ಷ್ ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್ ಐದನೆ ವಿಕೆಟ್‌ಗೆ 27 ರನ್‌ಗಳ ಜೊತೆಯಾಟ ನೀಡಿದರು. ಮಾರ್ಷ್, ಮ್ಯಾಥ್ಯೂ ವೇಡ್ ಮತ್ತು ಮಿಚೆಲ್ ಸ್ಟಾರ್ಕ್ ಔಟಾಗುವುದರೊಂದಿಗೆ 103 ರನ್‌ಗಳಿಗೆ ಆಸ್ಟ್ರೇಲಿಯದ 7 ವಿಕೆಟ್ ಪತನಗೊಂಡಿತು. ಬಳಿಕ ಆಸ್ಟ್ರೇಲಿಯ ಚೇತರಿಸಿಕೊಳ್ಳಲೇ ಇಲ್ಲ.ಅಶ್ವಿನ್‌ಗೆ ರವೀಂದ್ರ ಜಡೇಜ ಉತ್ತಮ ಬೆಂಬಲ ನೀಡಿ ಆಸ್ಟ್ರೇಲಿಯದ ಗೆಲುವಿನ ಕನಸನ್ನು ಮಣ್ಣುಗೂಡಿಸಿದರು.
ಅಂತಿಮವಾಗಿ ಲಿಯಾನ್ ಅವರು ಅಶ್ವಿನ್‌ಗೆ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸುವುದರೊಂದಿಗೆ ಆಸ್ಟ್ರೇಲಿಯದ ಹೋರಾಟ ಅಂತ್ಯಗೊಂಡಿತು.
ಭಾರತ 274: ಮೂರನೆ ದಿನದಾಟದಂತ್ಯಕ್ಕೆ 72 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 213 ರನ್ ಗಳಿಸಿದ್ದ ಭಾರತ ನಾಲ್ಕನೆ ದಿನದಾಟ ಮುಂದುವರಿಸಿ ಈ ಮೊತ್ತಕ್ಕೆ 61 ರನ್ ಸೇರಿಸಿತು. ಹೇಝಲ್‌ವುಡ್(67ಕ್ಕೆ 6), ಓ’ಕೀಫೆ (36ಕ್ಕೆ 2), ಮಿಷೆಲ್ ಸ್ಟಾರ್ಕ್(74ಕ್ಕೆ 2) ಅವರ ದಾಳಿಯ ಮುಂದೆ ಭಾರತಕ್ಕೆ 300 ಕ್ಕಿಂತ ಹೆಚ್ಚು ರನ್ ಸಂಪಾದಿಸುವ ಕನಸು ಈಡೇರಲಿಲ್ಲ. 36 ರನ್‌ಗಳಿಗೆ ಭಾರತದ ಆರು ವಿಕೆಟ್‌ಗಳು ಪತನಗೊಂಡಿತು
ಅಜಿಂಕ್ಯ ರಹಾನೆ (52) ಅರ್ಧಶತಕ ದಾಖಲಿಸಿ ಸ್ಟಾರ್ಕ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಕರ್ನಾಟಕದ ಕರುಣ್ ನಾಯರ್(0) ಖಾತೆ ತೆರೆಯಲಿಲ್ಲ. ತಾನು ಎದುರಿಸಿದ ಮೊದಲ ಎಸೆತದಲ್ಲೇ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.ಚೇತೇಶ್ವರ ಪೂಜಾರ ಶತಕ ವಂಚಿತಗೊಂಡರು.
ಪೂಜಾರ 92 ರನ್(221ಎ, 7ಬೌ) ಗಳಿಸಿ ಔಟಾದರು. ಅಶ್ವಿನ್(4), ಉಮೇಶ್ ಯಾದವ್(1) ಮತ್ತು ಇಶಾಂತ್ ಶರ್ಮ(6) ನಿರ್ಗಮಿಸುವುದರೊಂದಿಗೆ ಭಾರತದ ಎರಡನೆ ಇನಿಂಗ್ಸ್ ಮುಕ್ತಾಯಗೊಂಡಿತು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಔಟಾಗದೆ 20ರನ್(37ಎ, 2ಬೌ,1ಸಿ) ಗಳಿಸಿದರು.