ದ್ಯುತಿ ವಿದೇಶ ಪ್ರವಾಸಕ್ಕೆ ಗೋಪಿಚಂದ್ ಸಹಾಯಹಸ್ತ
ಹೈದರಾಬಾದ್, ಮಾ.7: ಲಂಡನ್ ಒಲಿಂಪಿಯನ್ ಸೈನಾ ನೆಹ್ವಾಲ್ ಹಾಗೂ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಯಶಸ್ಸಿನ ಹಿಂದಿನ ರೂವಾರಿ ಪಿ.ಗೋಪಿಚಂದ್ ಇದೀಗ ರಾಷ್ಟ್ರೀಯ ಮಹಿಳೆಯರ 100 ಮೀ. ಓಟದ ಚಾಂಪಿಯನ್ ದ್ಯುತಿ ಚಂದ್‌ಗೆ ಸಹಾಯದಹಸ್ತ ಚಾಚಿದ್ದಾರೆ.
ಫೆ.18 ರಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಇಂಟರ್‌ನ್ಯಾಶನಲ್ ಒಳಾಂಗಣ ಅಥ್ಲೆಟಿಕ್ಸ್ ಕೂಟದಲ್ಲಿ ಭಾಗವಹಿಸಲಿರುವ ದ್ಯುತಿಗೆ ವಿದೇಶ ಪ್ರವಾಸಕ್ಕೆ ಆರ್ಥಿಕ ನೆರವು ನೀಡಲು ಗೋಪಿಚಂದ್ ಮುಂದಾಗಿದ್ದಾರೆ.
‘‘ಭಾರತದಲ್ಲಿ ಒಳಾಂಗಣ ಸ್ಪರ್ಧೆಗಳು ಹೆಚ್ಚು ಪ್ರಸಿದ್ಧಿಯಲ್ಲಿಲ್ಲ. ಸರಕಾರದಿಂದ ಆರ್ಥಿಕ ನೆರವನ್ನು ಪಡೆಯುವುದು ದೊಡ್ಡ ಸವಾಲಾಗಿದೆ. ದ್ಯುತಿಗೆ ವಿಶ್ವದ ಅಗ್ರ ಅಥ್ಲೀಟ್‌ಗಳೊಂದಿಗೆ ಸ್ಪರ್ಧಿಸಲು ಇದು ಉತ್ತಮ ಅವಕಾಶ. ದ್ಯುತಿ ವಿದೇಶ ಪ್ರವಾಸಕ್ಕೆ ನೆರವು ನೀಡಿರುವ ಗೋಪಿಚಂದ್‌ಗೆ ಕೃತಜ್ಞತೆ ಸಲ್ಲಿಸುವೆ. ಗೋಪಿಚಂದ್‌ರಂತೆ ಎಲ್ಲರೂ ನೆರವು ನೀಡಿದರೆ ದೇಶದ ಕ್ರೀಡೆ ಬೆಳೆಯುತ್ತದೆ ಎಂದು ದ್ಯುತಿ ಕೋಚ್ ರಮೇಶ್ ಹೇಳಿದ್ದಾರೆ.