×
Ad

ಡಿಆರ್‌ಎಸ್ ಬಳಕೆಯಲ್ಲಿ ಸ್ಟೀವನ್ ಸ್ಮಿತ್ ವಂಚನೆ?

Update: 2017-03-07 23:38 IST

ಬೆಂಗಳೂರು, ಮಾ.7: ಅಂಪೈರ್ ತೀರ್ಪು ಪರಾಮರ್ಶೆ(ಡಿಆರ್‌ಎಸ್) ಬಳಕೆಯ ವೇಳೆ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ವಂಚನೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

‘‘ನಾವು ಡಿಆರ್‌ಎಸ್ ಬಳಕೆಯಲ್ಲಿ ಹೆಚ್ಚು ಯಶಸ್ಸಾಗಿಲ್ಲ. ಆದರೆ ನಾವು ಮೈದಾನದಲ್ಲೇ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದಕ್ಕಾಗಿ ಡ್ರೆಸ್ಸಿಂಗ್‌ರೂಮ್‌ನ ನೆರವು ಪಡೆಯುವುದಿಲ್ಲ. ಆಸ್ಟ್ರೇಲಿಯ ಆಟಗಾರರು ಡಿಆರ್‌ಎಸ್ ಪಡೆಯುವ ವೇಳೆ ಡ್ರೆಸ್ಸಿಂಗ್ ರೂಮ್‌ನತ್ತ ನೋಡಿರುವುದನ್ನು ಎರಡು ಬಾರಿ ಗಮನಿಸಿದ್ದೆ. ಅದನ್ನು ಅಂಪೈರ್ ಗಮನಕ್ಕೆ ತಂದಿದ್ದೆ. ಹಾಗೇ ಮಾಡಿದ್ದು ಯಾರೆಂದು ನಾನು ಹೇಳಲಾರೆ. ನಾವು ಮಾತ್ರ ಕ್ರಿಕೆಟ್ ಮೈದಾನದಲ್ಲಿ ಆ ರೀತಿ ವರ್ತಿಸಿಲ್ಲ’’ ಎಂದು ಕೊಹ್ಲಿ ಹೇಳಿದರು.

ನೀವು ಆಸ್ಟ್ರೇಲಿಯ ತಂಡ ಮೋಸ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದೀರಾ? ಎಂದು ಕೇಳಿದಾಗ, ನಾನು ಹಾಗೇ ಹೇಳುತ್ತಿಲ್ಲ ಎಂದರು.

ವೇಗದ ಬೌಲರ್ ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಸ್ಮಿತ್ ಎಲ್ಬಿಡಬ್ಲು ತೀರ್ಪಿಗೆ ಒಳಗಾಗಿದ್ದರು. ವಾರ್ನರ್ ಔಟಾದಾಗ ಡಿಆರ್‌ಎಸ್ ಮೊರೆ ಹೋಗಿ ವಿಫಲವಾಗಿದ್ದ ಆಸೀಸ್ ಸ್ಮಿತ್ ಔಟ್ ತೀರ್ಪನ್ನು ಪ್ರಶ್ನಿಸಬೇಕೆ, ಬೇಡವೇ ಎಂಬ ಗೊಂದಲಕ್ಕೆ ಸಿಲುಕಿತ್ತು. ಸ್ಮಿತ್ 15 ಸೆಕೆಂಡ್‌ನಲ್ಲಿ ನಾನ್‌ಸ್ಟ್ರೈಕ್‌ಗೆ ತೆರಳಿ ಅಭಿಪ್ರಾಯ ಪಡೆಯುವುದು ಕಡ್ಡಾಯವಾಗಿತ್ತು. ಆದರೆ, ಸ್ಮಿತ್ ಅವರು ಡ್ರೆಸ್ಸಿಂಗ್ ರೂಮ್‌ನತ್ತ ಸನ್ನೆ ಮಾಡಿ ಅಭಿಪ್ರಾಯ ಕೇಳಿದ್ದರು.

ಇದನ್ನು ತಕ್ಷಣವೇ ಗಮನಿಸಿದ ಅಂಪೈರ್ ಸ್ಮಿತ್ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು. ಕೊಹ್ಲಿ ಕೂಡ ಮಧ್ಯಪ್ರವೇಶಿಸಿದರು. ಈ ವಿಷಯಕ್ಕೆ ಸಂಬಂಧಿಸಿ ಕೊಹ್ಲಿ-ಸ್ಮಿತ್ ನಡುವೆ ಮಾತಿನ ಚಕಮಕಿ ನಡೆಯಿತು.

ಡಿಆರ್‌ಎಸ್ ಬಳಕೆಯ ನಿಯಮದ ಪ್ರಕಾರ ಡ್ರೆಸ್ಸಿಂಗ್ ರೂಮ್‌ನಿಂದ ಯಾವುದೇ ಸನ್ನೆ ಮಾಡುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News