ಅಶ್ವಿನ್ ಭಾರತದ ಐದನೆ ಯಶಸ್ವಿ ಟೆಸ್ಟ್ ಬೌಲರ್

Update: 2017-03-07 18:18 GMT

ಬೆಂಗಳೂರು, ಮಾ.7: ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ ಅಮೋಘ ಬೌಲಿಂಗ್(6-41) ಪ್ರದರ್ಶಿಸಿದ ಭಾರತದ ಸ್ಪಿನ್ ಬೌಲರ್ ಆರ್.ಅಶ್ವಿನ್ ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ವಿಕೆಟ್ ದಾಖಲೆ(266) ಮುರಿಯುವ ಮೂಲಕ ದೇಶದ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಐದನೆ ಸ್ಥಾನ ಪಡೆದರು.

ಮಂಗಳವಾರ ಟೀ ವಿರಾಮಕ್ಕೆ ಮೊದಲು ಮ್ಯಾಥ್ಯೂ ವೇಡ್ ವಿಕೆಟ್ ಪಡೆಯುವುದರೊಂದಿಗೆ ಭಾರತದ ಮಾಜಿ ನಾಯಕ ಬೇಡಿ(266) ಅವರ ಗರಿಷ್ಠ ವಿಕೆಟ್ ದಾಖಲೆ ಸರಿಗಟ್ಟಿದ ಅಶ್ವಿನ್, ಮಿಚೆಲ್ ಸ್ಟಾರ್ಕ್‌ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಬೇಡಿ ದಾಖಲೆಯನ್ನು ಹಿಂದಿಕ್ಕಿದರು. ಅಶ್ವಿನ್ ಗಳಿಸಿದ ಒಟ್ಟು ವಿಕೆಟ್‌ಗಳ ಸಂಖ್ಯೆ 269ಕ್ಕೆ ತಲುಪಿದೆ. ಅಶ್ವಿನ್ 25ನೆ ಬಾರಿ ಐದು ವಿಕೆಟ್ ಗೊಂಚಲು ಪಡೆದು ಗಮನ ಸೆಳೆದರು.

 30ರ ಹರೆಯದ ಅಶ್ವಿನ್ ಬೆಂಗಳೂರಿನಲ್ಲಿ 2ನೆ ಟೆಸ್ಟ್ ಆರಂಭವಾಗುವುದಕ್ಕೆ ಮೊದಲು 261 ವಿಕೆಟ್ ಗಳಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದಿದ್ದ ಅಶ್ವಿನ್ ಎರಡನೆ ಇನಿಂಗ್ಸ್‌ನಲ್ಲಿ ಸ್ಮಿತ್ ಬಳಗದ ಮೇಲೆ ಸವಾರಿ ಮಾಡಿ ಭಾರತಕ್ಕೆ ಅನಿರೀಕ್ಷಿತ ಗೆಲುವು ತಂದರು. ಮಾತ್ರವಲ್ಲ ಎಂ.ಚಿನ್ನಸ್ವಾಮಿ ಸ್ಟೇಡಿಯಂನ ನಾಲ್ಕನೆ ದಿನದಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದರು.

ಅಶ್ವಿನ್ ಭಾರತದ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ 5ನೆ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿರುವ ಇತರರೆಂದರೆ: ಮಾಜಿ ಸಹ ಆಟಗಾರ ಝಹೀರ್ ಖಾನ್(311), ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್(417), ಕಪಿಲ್ ದೇವ್(434),ಹಾಲಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ(619).

ಈವರೆಗೆ 47 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ ತವರು ನೆಲದಲ್ಲಿ ಒಟ್ಟು 202 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News