ನನ್ನ ನಾಯಕತ್ವದ ಶ್ರೇಷ್ಠ ಗೆಲುವು: ಕೊಹ್ಲಿ

Update: 2017-03-07 18:21 GMT

ಬೆಂಗಳೂರು, ಮಾ.7: ‘‘ನಾವು ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾಗಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸಬಲ್ಲೆವು ಎಂದು ತೋರಿಸುವ ಇಚ್ಛೆ ನಮಗಿತ್ತು. ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ. ನನ್ನ ನಾಯಕತ್ವದ ಶ್ರೇಷ್ಠ ಗೆಲುವು ಇದಾಗಿದೆ’’ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಟೆಸ್ಟ್‌ನಲ್ಲಿ ಕೊಹ್ಲಿ ಪಡೆ ಮೊದಲ ಇನಿಂಗ್ಸ್‌ನಲ್ಲಿ 87 ರನ್ ಹಿನ್ನಡೆ ಅನುಭವಿಸಿದ್ದರೂ ಎರಡನೆ ಟೆಸ್ಟ್ ಪಂದ್ಯವನ್ನು 75 ರನ್‌ಗಳ ಅಂತರದಿಂದ ಗೆದ್ದುಕೊಂಡು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.

 ‘‘ಮೊದಲ ಟೆಸ್ಟ್‌ನಲ್ಲಿ ನಾವು ಹೀನಾಯವಾಗಿ ಸೋತ ಬಳಿಕ ಮರು ಹೋರಾಟ ನೀಡಬೇಕೆಂಬ ಛಲ ತಂಡದಲ್ಲಿತ್ತು. ಆದರೆ, ಯಾರಿಗೂ ನಮ್ಮ ಸಾಮರ್ಥ್ಯ ತೋರಿಸುವ ಅಗತ್ಯ ನಮಗಿರಲಿಲ್ಲ. ನಾವು ಸ್ಪರ್ಧೆ ನೀಡಬಲ್ಲೆವು ಎಂದು ತೋರಿಸಿಕೊಟ್ಟಿದ್ದೇವೆ. ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾದಾಗ ನಮಗೆ ಅವಕಾಶ ಮುಕ್ತವಾಯಿತು. ಆಸೀಸ್ 188 ರನ್ ಗುರಿ ಪಡೆದಾಗ ನಮಗೆ ಗೆಲುವಿನ ವಿಶ್ವಾಸ ಹೆಚ್ಚಾಯಿತು ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

 2ನೆ ಇನಿಂಗ್ಸ್‌ನಲ್ಲಿ 5ನೆ ವಿಕೆಟ್‌ಗೆ 118 ರನ್ ಜೊತೆಯಾಟ ನಡೆಸಿದ ಇಬ್ಬರು ತಜ್ಞ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು ಎಂದು ಕೊಹ್ಲಿ ಶ್ಲಾಘಿಸಿದರು.

ಉತ್ತಮ ಪ್ರದರ್ಶನ ನೀಡಲು ಬೆಂಗಳೂರು ವೇದಿಕೆ: ರಾಹುಲ್

  ‘‘ಉತ್ತಮ ಪ್ರದರ್ಶನ ನೀಡಲು ಬೆಂಗಳೂರಿಗಿಂತ ಬೇರೆ ಸ್ಥಳ ನನಗೆ ಸಿಗದು. ಮೊದಲ ಟೆಸ್ಟ್‌ನಲ್ಲಿ ಸೋತ ಬಳಿಕ ಬೆಂಗಳೂರಿನಲ್ಲಿ ವಿಶೇಷವಾದ ಪ್ರದರ್ಶನ ನೀಡಬೇಕೆಂಬ ಯೋಜನೆ ಹಾಕಿಕೊಂಡಿದ್ದೆವು. ಆ ನಿಟ್ಟಿನಲ್ಲಿ ನಾವು ಯಶಸ್ಸು ಸಾಧಿಸಿದ್ದೇವೆ. ನಾವು 150 ರನ್ ಮುನ್ನಡೆ ಸಾಧಿಸಿದರೆ 30 ರನ್‌ನಿಂದ ಗೆಲ್ಲಬಹುದೆಂದು ನಾಯಕ ಕೊಹ್ಲಿ ಬಳಿ ಹೇಳಿದ್ದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಾಕಷ್ಟು ಕ್ರಿಕೆಟ್ ಆಡಿರುವ ತನಗೆ ನಾಲ್ಕನೆ ಇನಿಂಗ್ಸ್‌ನಲ್ಲಿ ಎಷ್ಟು ಸ್ಕೋರ್ ಇದ್ದರೆ ಗೆಲ್ಲಬಹುದೆಂಬ ಕಲ್ಪನೆ ನನ್ನಲ್ಲಿತ್ತು’’ ಎಂದು ಪಂದ್ಯಶ್ರೇಷ್ಠ ಕೆ.ಎಲ್. ರಾಹುಲ್ ಹೇಳಿದ್ದಾರೆ.

ಅಂಕಿ-ಅಂಶ

75: ಭಾರತ ಎದುರಾಳಿ ತಂಡಕ್ಕೆ 200ಗಿಂತ ಕಡಿಮೆ ಗುರಿ ನೀಡಿದ ಬಳಿಕ ಮೂರನೆ ದೊಡ್ಡ ಅಂತರದ ಜಯ(75) ಸಾಧಿಸಿತು. 1996-97ರಲ್ಲಿ ಅಹ್ಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಕ್ಕೆ 170ರನ್ ಗುರಿ ನೀಡಿದ್ದ ಭಾರತ 64 ರನ್ ಅಂತರದಿಂದ ಜಯ ಸಾಧಿಸಿತ್ತು.

11: ಆಸ್ಟ್ರೇಲಿಯ 11 ರನ್ ಗಳಿಸುವಷ್ಟರಲ್ಲಿ ಅಂತಿಮ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. 4 ವಿಕೆಟ್‌ಗೆ 101 ರನ್ ಗಳಿಸಿದ್ದ ಆಸ್ಟ್ರೇಲಿಯ 112 ರನ್‌ಗೆ ಆಲೌಟಾಯಿತು.

25: ಅಶ್ವಿನ್ 47ನೆ ಟೆಸ್ಟ್ ಪಂದ್ಯದಲ್ಲಿ 25ನೆ ಬಾರಿ 5 ವಿಕೆಟ್ ಗೊಂಚಲು ಪಡೆದರು. ಅಶ್ವಿನ್ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್. ರಿಚರ್ಡ್ ಹ್ಯಾಡ್ಲಿ ಹಾಗೂ ಮುತ್ತಯ್ಯ ಮುರಳೀಧರನ್ ಕ್ರಮವಾಗಿ 62 ಹಾಗೂ 63 ಪಂದ್ಯಗಳಲ್ಲಿ 25 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಭಾರತದ ಬೌಲರ್‌ಗಳ ಪೈಕಿ ಅನಿಲ್ ಕುಂಬ್ಳೆ(86 ಪಂದ್ಯಗಳು) ಹಾಗೂ ಹರ್ಭಜನ್ ಸಿಂಗ್(93) ಈ ಸಾಧನೆ ಮಾಡಿದ್ದಾರೆ.

269: ಅಶ್ವಿನ್ ಒಟ್ಟು 269 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಬಿಷನ್ ಸಿಂಗ್ ಬೇಡಿ(266) ಸಾಧನೆಯನ್ನು ಸರಿಗಟ್ಟಿದ್ದಾರೆ. 04: ಬೆಂಗಳೂರು ಟೆಸ್ಟ್‌ನಲ್ಲಿ ನಥನ್ ಲಿಯೊನ್(8-50), ರವೀಂದ್ರ ಜಡೇಜ(6-63), ಜೊಶ್ ಹೇಝಲ್‌ವುಡ್(6-67), ಅಶ್ವಿನ್ (6-41)ಇನಿಂಗ್ಸ್‌ವೊಂದರಲ್ಲಿ ಆರು, ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇದು ಟೆಸ್ಟ್ ಇತಿಹಾಸದಲ್ಲಿ ಮೊದಲ ದೃಷ್ಟಾಂತವಾಗಿದೆ. ಸುಮಾರು 100ಕ್ಕೂ ಅಧಿಕ ವರ್ಷಗಳ ಹಿಂದೆ ಕೇವಲ 2 ಟೆಸ್ಟ್ ಪಂದ್ಯಗಳಲ್ಲಿ ನಾಲ್ವರು ಬೌಲರ್‌ಗಳು 6 ವಿಕೆಟ್ ಗೊಂಚಲು ಪಡೆದಿದ್ದರು.

1979: ಜೊಶ್ ಹೇಝಲ್‌ವುಡ್(6-65) 1979ರ ಬಳಿಕ ಭಾರತದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯದ 2ನೆ ಬೌಲರ್. ಕಾನ್ಪುರದಲ್ಲಿ ಜೆಪ್ ಡಿಮೊಕ್(7-67) ಈ ಸಾಧನೆ ಮಾಡಿದ್ದರು. ಹೇಝಲ್‌ವುಡ್ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದರು. ಭಾರತದಲ್ಲಿ ಆಸೀಸ್ ಬೌಲರ್‌ನ 5ನೆ ಶ್ರೇಷ್ಠ ಪ್ರದರ್ಶನ ಇದಾಗಿದೆ. ಸ್ಟೀವ್ ಓ’ಕೀಫೆ ಹಾಗೂ ನಥಾನ್ ಲಿಯೊನ್ ಪ್ರಸ್ತುತ ಸರಣಿಯಲ್ಲಿ ಜೀವನಶ್ರೇಷ್ಠ ಬೌಲಿಂಗ್ ಮಾಡಿದ್ದರು.

01: ಚೇತೇಶ್ವರ ಪೂಜಾರ ಇದೇ ಮೊದಲ ಬಾರಿ ನರ್ವಸ್ ನೈಂಟಿಗೆ ಔಟಾಗಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಪೂಜಾರ 92 ರನ್‌ಗೆ ಔಟಾದರು. ಈ ಹಿಂದೆ 10 ಬಾರಿ 90 ರನ್ ಕ್ರಮಿಸಿದ ಬಳಿಕ ಶತಕ ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News