ಭಾರತದ ಮಹಿಳಾ ಹಾಕಿ ತಂಡಕ್ಕೆ ಸರಣಿ
ಭೋಪಾಲ್, ಮಾ.8: ಮತ್ತೊಮ್ಮೆ ಶಿಸ್ತುಬದ್ಧ ಪ್ರದರ್ಶನ ನೀಡಿದ ಭಾರತದ ಮಹಿಳಾ ಹಾಕಿ ತಂಡ ಬೆಲಾರುಸ್ ವಿರುದ್ಧದ ಐದನೆ ಟೆಸ್ಟ್ ಪಂದ್ಯವನ್ನು 3-1 ಗೋಲುಗಳ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 5-0 ಅಂತರದಿಂದ ವಶಪಡಿಸಿಕೊಂಡಿತು.
ಬುಧವಾರ ಇಲ್ಲಿ ನಡೆದ ಐದನೆ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ವಂದನಾ ಕಟಾರಿಯಾ(6ನೆ ನಿಮಿಷ), ಗುರ್ಜಿತ್ ಕೌರ್(15ನೆ ನಿಮಿಷ) ಹಾಗೂ ರಾಣಿ(55ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ಬೆಲಾರುಸ್‌ನ ಪರ ಯೂಲಿಯ ಮಿಖೆಚಿಕ್(52ನೆ ನಿಮಿಷ) ಏಕೈಕ ಗೋಲು ಬಾರಿಸಿದರು.
ಸ್ಟ್ರೈಕರ್ ರಾಣಿ ನೇತೃತ್ವದ ಭಾರತ ತಂಡ 6ನೆ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿತು. ವಂದನಾ ಫೀಲ್ಡ್ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. 15ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಗುರ್ಜಿತ್ ಸಿಂಗ್ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.
ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟದಿಂದ ಗಮನ ಸೆಳೆದವು. 52ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಯೂಲಿಯಾ ಬೆಲಾರುಸ್ ಪರ ಸಮಾಧಾನಕರ ಗೋಲು ಬಾರಿಸಿದರು.
ಭಾರತ 55ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಲು ಯಶಸ್ವಿಯಾಯಿತು. ತಂಡದ ಪರ 3ನೆ ಗೋಲು ಬಾರಿಸಿದ ರಾಣಿ 3-1 ಅಂತರದಿಂದ ಜಯ ಸಾಧಿಸಲು ನೆರವಾದರು.