ಮೊದಲ ಟೆಸ್ಟ್: ದಕ್ಷಿಣ ಆಫ್ರಿಕ ಗೌರವಾರ್ಹ ಮೊತ್ತ
ಡುನೆಡಿನ್, ಮಾ.8: ಆರಂಭಿಕ ಆಟಗಾರ ಡಿಯನ್ ಎಲ್ಗರ್ ಬಾರಿಸಿದ ಅಜೇಯ ಶತಕದ(128 ರನ್)ಸಹಾಯದಿಂದ ದಕ್ಷಿಣ ಆಫ್ರಿಕ ತಂಡ ನ್ಯೂಝಿಲೆಂಡ್ ವಿರುದ್ಧ ಬುಧವಾರ ಇಲ್ಲಿ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಗೌರವಾರ್ಹ ಮೊತ್ತ ದಾಖಲಿಸಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕದ ಆರಂಭ ಉತ್ತಮವಾಗಿರಲಿಲ್ಲ. ಪ್ರವಾಸಿಗರು 22 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು.
ಆಗ ತಂಡಕ್ಕೆ ಆಸರೆಯಾದ ಎಲ್ಗರ್(ಅಜೇಯ 128 ರನ್, 262 ಎಸೆತ, 22 ಬೌಂಡರಿ) ಏಳನೆ ಶತಕವನ್ನು ಪೂರೈಸಿದ್ದಲ್ಲದೆ ಎಫ್‌ಡು ಪ್ಲೆಸಿಸ್‌ರೊಂದಿಗೆ(52) ನಾಲ್ಕನೆ ವಿಕೆಟ್‌ಗೆ 126 ರನ್ ಹಾಗೂ ಟಿಂಬ ಬವುಮಾ(38)ರೊಂದಿಗೆ 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 81 ರನ್ ಸೇರಿಸಿ ತಂಡ ಮೊದಲ ದಿನದಾಟ ಕೊನೆಗೊಂಡಾಗ 90 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 229 ರನ್ ಗಳಿಸಲು ನೆರವಾದರು.
ನೀಲ್ ವಾಗ್ನರ್ ಹಾಗೂ ಟ್ರೆಂಟ್ ಬೌಲ್ಟ್ 19 ಓವರ್‌ಗಳಲ್ಲಿ ಸ್ಟೀಫನ್ ಕುಕ್(3), ಹಾಶಿಮ್ ಅಮ್ಲ(1) ಹಾಗೂ ಜೆ.ಪಿ. ಡುಮಿನಿ(1) ವಿಕೆಟ್‌ಗಳನ್ನು ಕಬಳಿಸಿ ಕಿವೀಸ್‌ಗೆ ಮೇಲುಗೈ ಒದಗಿಸಿಕೊಟ್ಟಿದ್ದರು.
ಬೌಲ್ಟ್ 9ನೆ ಓವರ್‌ನಲ್ಲಿ ಸ್ವಿಂಗ್ ಬೌಲಿಂಗ್‌ನಲ್ಲಿ ಕುಕ್ ವಿಕೆಟ್ ಉಡಾಯಿಸಿದರು. 19ನೆ ಓವರ್‌ನ 2ನೆ ಹಾಗೂ 6ನೆ ಎಸೆತದಲ್ಲಿ ಅಮ್ಲ ಹಾಗೂ ಡುಮಿನಿ ವಿಕೆಟ್ ಉರುಳಿಸಿದ ವಾಗ್ನರ್ ಆಫ್ರಿಕಕ್ಕೆ ಶಾಕ್ ನೀಡಿದರು.
ಕಿವೀಸ್‌ನ ಪರ ವಾಗ್ನರ್(2-59) ಯಶಸ್ವಿ ಬೌಲರ್ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ ಪ್ರಥಮ ಇನಿಂಗ್ಸ್: 90 ಓವರ್‌ಗಳಲ್ಲಿ 229/4
(ಎಲ್ಗರ್ ಅಜೇಯ 128, ಪ್ಲೆಸಿಸ್ 52, ಬವುಮ ಅಜೇಯ 38, ವಾಗ್ನರ್ 2-59).