ಇಂಡಿಯನ್ ವೇಲ್ಸ್, ಮಿಯಾಮಿ ಟೂರ್ನಿಯಿಂದ ಹಿಂದೆ ಸರಿದ ಸೆರೆನಾ
ಲಾಸ್ ಏಂಜಲಿಸ್,ಮಾ.8: ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಇಂಡಿಯನ್ ವೇಲ್ಸ್ ಹಾಗೂ ಮಿಯಾಮಿಯಲ್ಲಿ ನಡೆಯಲಿರುವ ಮುಂಬರುವ ಡಬ್ಲುಟಿಎ ಟೂರ್ನಮೆಂಟ್‌ಗಳಿಂದ ಹೊರಗುಳಿದಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಲಮಂಡಿನಲ್ಲಿ ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಸೆರೆನಾ ಮಾಹಿತಿ ನೀಡಿದ್ದಾರೆ ಎಂದು ಕ್ಯಾಲಿಫೋರ್ನಿಯದಲ್ಲಿ ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.
‘‘ಇಂಡಿಯನ್ ವೇಲ್ಸ್ ಹಾಗೂ ಮಿಯಾಮಿ ಓಪನ್‌ನಿಂದ ಹಿಂದೆ ಸರಿಯುತ್ತಿರುವುದಕ್ಕೆ ತುಂಬಾ ಬೇಸರವಾಗುತ್ತಿದೆ. ಮಂಡಿನೋವಿನಿಂದಾಗಿ ಸರಿಯಾಗಿ ಅಭ್ಯಾಸ ನಡೆಸಲು ತನ್ನಿಂದ ಸಾಧ್ಯವಾಗಿಲ್ಲ. ಆದಷ್ಟು ಬೇಗನೆ ಟೆನಿಸ್‌ಅಂಗಳಕ್ಕೆ ವಾಪಸಾಗಲು ಪ್ರಯತ್ನಿಸುವೆ’’ ಎಂದು ಸೆರೆನಾ ತಿಳಿಸಿದ್ದಾರೆ.
ಸೆರೆನಾ ಮುಂಬರುವ 2 ಟೂರ್ನಿಗಳಿಂದ ಹಿಂದೆ ಸರಿದಿರುವುದರಿಂದ ಜರ್ಮನಿಯ ವಿಶ್ವದ ನಂ.2ನೆ ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್‌ಗೆ ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವ ಅವಕಾಶ ಲಭಿಸಲಿದೆ.
35ರ ಹರೆಯದ ಸೆರೆನಾ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸಹೋದರಿ ವೀನಸ್‌ರನ್ನು ಮಣಿಸಿ 23ನೆ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಬಳಿಕ ಯಾವುದೇ ಪಂದ್ಯವನ್ನು ಆಡಿಲ್ಲ.
ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೆನಾ ಕಳೆದ ವರ್ಷ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ರನ್ನರ್-ಅಪ್ ಪ್ರಶಸ್ತಿ ಪಡೆದಿದ್ದರು.