ಬೆಂಗಳೂರು ಟೆಸ್ಟ್ ವೇಳೆ ಕೊಹ್ಲಿ-ಕುಂಬ್ಳೆ ಅಸಭ್ಯ ವರ್ತನೆ
ಬೆಂಗಳೂರು, ಮಾ.10: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಎರಡನೆ ಕ್ರಿಕೆಟ್ ಟೆಸ್ಟ್‌ನ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅಸಭ್ಯವಾಗಿ ವರ್ತಿಸಿದ್ದರೆಂದು ಆಸ್ಟ್ರೇಲಿಯದ ದಿನಪತ್ರಿಕೆಗಳು ಆರೋಪಿಸಿದೆ.
‘ಡೈಲಿ ಟೆಲಿಗ್ರಾಫ್ ’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯಂತೆ ಭಾರತದ ಎರಡನೆ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಅವರು ಹೇಝಲ್‌ವುಡ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ಔಟಾಗಿ ಪೆವಿಲಿಯನ್‌ಗೆ ವಾಪಸಾಗುವಾಗ ಕೋಪಗೊಂಡಿದ್ದರು. ಅವರಿಗೆ ತೀರ್ಪು ಸರಿ ಕಾಣಲಿಲ್ಲ.
ಆಸ್ಟ್ರೇಲಿಯದ ಎರಡನೆ ಇನಿಂಗ್ಸ್‌ನಲ್ಲಿ ಹ್ಯಾಂಡ್ಸ್‌ಕಂಬ್ ಅವರು ಅಶ್ವಿನ್ ಎಸೆತದಲ್ಲಿ ಸಹಾಗೆ ಕ್ಯಾಚ್ ನೀಡುವಾಗ ಕೊಹ್ಲಿ ಆಸ್ಟ್ರೇಲಿಯನ್ ಬಾಕ್ಸ್‌ನತ್ತ ನೋಡುತ್ತಾ ಆಸ್ಟ್ರೇಲಿಯ ದ ಕುತ್ತಿಗೆ ಕತ್ತರಿಸಿದಂತೆ ಕೈ ಸನ್ನೆ ಮಾಡಿದರು ಎಂದು ಮಾಧ್ಯಮಗಳು ಅರೋಪಿಸಿದೆ.
ಕೋಪದಿಂದ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ ಪಾನೀಯದ ಬಾಟ್ಲಿಯನ್ನು ಎಸೆದರು. ಅದು ಆಸ್ಟ್ರೇಲಿಯದ ಅಧಿಕಾರಿಯೊಬ್ಬರ ಕಾಲಿಗೆ ಬಡಿದಿದೆ. ಈ ದೃಶ್ಯ ಟಿವಿಗಳಲ್ಲಿ ಕಾಣಿಸಿಕೊಂಡಿತ್ತು. ಕೋಚ್ ಕುಂಬ್ಳೆ ಅವರು ಅಂಪೈರ್‌ಗಳ ಕೆಲವು ತೀರ್ಮಾನಗಳ ಬಗ್ಗೆ ಅತೃಪ್ತಿಗೊಂಡಿದ್ದರು. ಅಂಪೈರ್ ವಿರುದ್ಧ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್‌ಗೆ ದೂರು ಸಲ್ಲಿಸಿದ್ದರು ಎಂದು ಟೆಲಿಗ್ರಾಫ್ ಡೈಲಿ ಹೇಳಿದೆ.
ಭಾರತ ಈ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 75 ರನ್‌ಗಳ ಅಂತರದಲ್ಲಿ ಜಯ ಗಳಿಸಿತ್ತು. ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತ್ತು. ಈ ಟೆಸ್ಟ್‌ನಲ್ಲಿ ಹಲವು ವಿವಾದಗಳು ಕಾಣಿಸಿಕೊಂಡಿತ್ತು. ಡಿಆರ್‌ಎಸ್ ವಿಚಾರಕ್ಕೆ ಸಂಬಂಧಿಸಿ ಬಿಸಿಸಿಐ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಐಸಿಸಿಗೆ ದೂರು ನೀಡಿದೆ. ಡಿಆರ್‌ಎಸ್ ಮೊರೆ ಹೋಗಲು ಡ್ರೆಸ್ಸಿಂಗ್ ರೂಮ್‌ನಿಂದ ಸ್ಮಿತ್ ಸಿಗ್ನಲ್ ಪಡೆಯುತ್ತಾರೆಂದು ಸ್ಮಿತ್ ವಿರುದ್ದ ಆರೋಪ ಕೇಳಿ ಬಂದಿತ್ತು.