ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಮುಖ್ಯ ಕೋಚ್?
ಹೊಸದಿಲ್ಲಿ, ಮಾ.11: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ನಿರ್ದೇಶಕರಾಗಿ ಭಡ್ತಿ ಪಡೆಯಲಿದ್ದು, ನೂತನ ಕೋಚ್ ಆಗಿ ‘ಮಹಾನ್‌ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಆಂಗ್ಲಪತ್ರಿಕೆ ವರದಿ ಮಾಡಿದೆ.
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಯಂತೆಯೇ ಬಿಸಿಸಿಐನಲ್ಲಿ ಖಾಯಂ ನಿರ್ದೇಶಕರನ್ನು ನೇಮಿಸಲು ಚಿಂತನೆ ನಡೆಸುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದೀಗ ಬಿಸಿಸಿಐ ಆಡಳಿತವನ್ನು ನೋಡಿಕೊಳ್ಳುತ್ತಿರುವ ಸುಪ್ರೀಂಕೋರ್ಟಿನಿಂದ ನೇಮಕಗೊಂಡಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಟೀಮ್ ಇಂಡಿಯಾಕ್ಕೆ ಕಳೆದ ವರ್ಷ ರವಿಶಾಸ್ತ್ರಿ ಅವರಿಂದ ತೆರವಾಗಿರುವ ನಿರ್ದೇಶಕ ಸ್ಥಾನಕ್ಕೆ ಕುಂಬ್ಳೆ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ಒಂದು ವೇಳೆ ಕುಂಬ್ಳೆ ಡೈರೆಕ್ಟರ್ ಆಗಿ ಆಯ್ಕೆಯಾದರೆ ಈಗ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಸರಣಿ ಕೋಚ್ ಆಗಿ ಅವರ ಕೊನೆಯ ಸರಣಿ ಎನಿಸಿಕೊಳ್ಳಲಿದೆ. ಎ.14 ರಿಂದ ಅವರು ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಎರಡನೆ ಟೆಸ್ಟ್ ಕೊನೆಗೊಂಡ ಬಳಿಕ ಸಿಒಎಯನ್ನು ಭೇಟಿಯಾಗಿರುವ ಕುಂಬ್ಳೆಗೆ ಡೈರೆಕ್ಟರ್ ಹುದ್ದೆ ಆಫರ್‌ನ್ನು ನೀಡಲಾಗಿತ್ತು ಎಂದು ವರದಿಯಾಗಿದೆ.
ಕುಂಬ್ಳೆ ಭಾರತ ತಂಡದ ನಿರ್ದೇಶಕರಾಗಿ ಆಯ್ಕೆಯಾದರೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗುವ ಸಾಧ್ಯತೆಯಿದೆ. ದ್ರಾವಿಡ್ ಪ್ರಸ್ತುತ ಭಾರತ ‘ಎ’ ಹಾಗೂ ಅಂಡರ್-19 ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.