×
Ad

ಮೊದಲ ಟೆಸ್ಟ್: ಶ್ರೀಲಂಕಾ ತಂಡಕ್ಕೆ ಭರ್ಜರಿ ಜಯ

Update: 2017-03-11 23:34 IST

ಗಾಲೆ(ಶ್ರೀಲಂಕಾ), ಮಾ.11: ಹಂಗಾಮಿ ನಾಯಕ ರಂಗನ ಹೆರಾತ್(6-59) ಅತ್ಯುತ್ತಮ ಬೌಲಿಂಗ್ ನೆರವಿನಿಂದ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 259 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಇಲ್ಲಿನ ಗಾಲೆ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಐದನೆ ಹಾಗೂ ಅಂತಿಮ ದಿನವಾದ ಶನಿವಾರ ವಿಕೆಟ್ ನಷ್ಟವಿಲ್ಲದೆ 67 ರನ್‌ನಿಂದ ಎರಡನೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಲಂಚ್ ವಿರಾಮದ ಬಳಿಕ 197 ರನ್‌ಗೆ ಆಲೌಟಾಯಿತು.

ಖಾಯಂ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಅನುಪಸ್ಥಿತಿಯಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿದ ಹೆರಾತ್ 29ನೆ ಬಾರಿ ಐದು ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಗೊಂಚಲು ಪಡೆದು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಎಡಗೈ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

 ಗೆಲ್ಲಲು 457 ರನ್ ಕಠಿಣ ಗುರಿ ಪಡೆದಿದ್ದ ಬಾಂಗ್ಲಾದೇಶ ಅಂತಿಮ ದಿನವಾದ ಶನಿವಾರ 390 ರನ್ ಗಳಿಸಬೇಕಾಗಿತ್ತು. ಬಾಂಗ್ಲಾದೇಶದ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾದ ಹೆರಾತ್ ಪಂದ್ಯಗಳ ಒಟ್ಟು 9 ವಿಕೆಟ್‌ಗಳ ಗೊಂಚಲು ಪಡೆದರು.

ಮಾ.19ರಂದು 39ನೆ ವಸಂತಕ್ಕೆ ಕಾಲಿಡಲಿರುವ ಹೆರಾತ್ 79 ಪಂದ್ಯಗಳಲ್ಲಿ 366 ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ನ್ಯೂಝಿಲೆಂಡ್‌ನ ಮಾಜಿ ಎಡಗೈ ಸ್ಪಿನ್ನರ್ ಡೇನಿಯಲ್ ವೆಟೋರಿ(362 ವಿಕೆಟ್) ದಾಖಲೆಯನ್ನು ಮುರಿದರು.

ಬಾಂಗ್ಲಾದೇಶ ತಂಡ ದಿನದ ಎರಡನೆ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್ ವಿಕೆಟ್‌ನ್ನು ಕಳೆದುಕೊಂಡಿತು. ಸರ್ಕಾರ್ ನಿನ್ನೆಯ 53 ರನ್‌ಗೆ ಒಂದೂ ರನ್ ಸೇರಿಸದೇ ಅಸೆಲಾ ಗುಣರತ್ನೆ ಎಸೆತದಲ್ಲಿ ಔಟಾದರು. ಸರ್ಕಾರ್ ಔಟಾದ ಬಳಿಕ ಬಾಂಗ್ಲಾದೇಶದ ದಾಂಡಿಗರು ಪೆವಿಲಿಯನ್‌ಗೆ ಪರೇಡ್ ನಡೆಸಿದರು.

ಬಾಂಗ್ಲಾದೇಶದ ನಾಯಕ ಮುಶ್ಫಿಕುರ್ರಹೀಂ(34)ಹಾಗೂ ಲಿಟನ್ ದಾಸ್(35) 6ನೆ ವಿಕೆಟ್‌ಗೆ 54 ರನ್ ಜೊತೆಯಾಟ ನಡೆಸಿ ಒಂದಷ್ಟು ಪ್ರತಿರೋಧ ಒಡ್ಡಿದರು. ಲಿಟನ್ ದಾಸ್ ವಿಕೆಟ್ ಪಡೆದ ಹೆರಾತ್ ಈ ಜೋಡಿಯನ್ನು ಬೇರ್ಪಡಿಸಿದರು.

 27ನೆ ಓವರ್‌ನಲ್ಲಿ 3 ಎಸೆತಗಳ ಅಂತರದಲ್ಲಿ ಶಾಕಿಬ್ ಅಲ್ ಹಸನ್ ಹಾಗೂ ಮಹ್ಮೂದುಲ್ಲಾ ವಿಕೆಟ್‌ನ್ನು ಕಬಳಿಸಿದ ಹೆರಾತ್ ಕಿವೀಸ್‌ನ ಮಾಜಿ ಸ್ಪಿನ್ನರ್ ವೆಟೋರಿ ದಾಖಲೆಯನ್ನು ಸರಿಗಟ್ಟಿದರು.

ಉಭಯ ತಂಡಗಳು ಬುಧವಾರ ಕೊಲಂಬೊದಲ್ಲಿ 2ನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಆಡಲಿದೆ.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ ಪ್ರಥಮ ಇನಿಂಗ್ಸ್: 494 ರನ್‌ಗೆ ಆಲೌಟ್

 ಬಾಂಗ್ಲಾದೇಶ ಪ್ರಥಮ ಇನಿಂಗ್ಸ್: 312 ರನ್‌ಗೆ ಆಲೌಟ್

ಶ್ರೀಲಂಕಾ ದ್ವಿತೀಯ ಇನಿಂಗ್ಸ್: 274/6 ಡಿಕ್ಲೇರ್

 ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್: 197 ರನ್‌ಗೆ ಆಲೌಟ್

(ಸೌಮ್ಯ ಸರ್ಕಾರ್ 53, ಮುಶ್ಫಿಕುರ್ರಹೀಂ 34, ಲಿಟನ್ ದಾಸ್ 35, ಹೆರಾತ್ 6-59, ಪೆರೇರ 2-61)

ಪಂದ್ಯಶ್ರೇಷ್ಠ: ಕುಶಾಲ್ ವೆುಂಡಿಸ್.

ಅಂಕಿ-ಅಂಶ:

366: ಶ್ರೀಲಂಕಾದ ಹಂಗಾಮಿ ಟೆಸ್ಟ್ ತಂಡದ ನಾಯಕ ರಂಗನ ಹೆರಾತ್ ಒಟ್ಟು 366 ವಿಕೆಟ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ ಗರಿಷ್ಠ ವಿಕೆಟ್ ಪಡೆದ ವಿಶ್ವದ ಮೊದಲ ಎಡಗೈ ಸ್ಪಿನ್ನರ್ ಎನಿಸಿಕೊಂಡರು. ಹೆರಾತ್ ಅವರು ಕಿವೀಸ್‌ನ ಡೇನಿಯಲ್ ವೆಟೋರಿ(362 ವಿಕೆಟ್) ದಾಖಲೆಯನ್ನು ಮುರಿದರು. ಎಡಗೈ ಬೌಲರ್‌ಗಳ ಪೈಕಿ ಪಾಕಿಸ್ತಾನದ ವೇಗದ ದಂತಕತೆ ವಸಿಂ ಅಕ್ರಂ(414) ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

  09: ಹೆರಾತ್ ಅವರು ಗಾಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ 9ನೆ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಮುತ್ತಯ್ಯ ಮುರಳೀಧರನ್ ಎಸ್‌ಎಸ್‌ಸಿಯಲ್ಲಿ 14, ಕ್ಯಾಂಡಿ ಹಾಗೂ ಗಾಲೆಯಲ್ಲಿ ತಲಾ 11 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.

03: ಹೆರಾತ್ ಗಾಲೆಯಲ್ಲಿ ನಾಲ್ಕನೆ ಇನಿಂಗ್ಸ್‌ನಲ್ಲಿ 3ನೆ ಬಾರಿ 5 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು.

03: ಹೆರಾತ್ ನಾಯಕನಾಗಿ 3ನೆ ಟೆಸ್ಟ್ ಪಂದ್ಯದಲ್ಲಿ 3ನೆ ಜಯ ಸಾಧಿಸಿದರು. ಈ ಸಾಧನೆ ಮಾಡಿದ ಶ್ರೀಲಂಕಾದ ಮೊದಲ ನಾಯಕ ಎನಿಸಿಕೊಂಡರು. ಶ್ರೀಲಂಕಾ ಹೆರಾತ್ ನಾಯಕತ್ವದಲ್ಲಿ ಕಳೆದ ವರ್ಷ ಹರಾರೆಯಲ್ಲಿ ಎರಡೂ ಪಂದ್ಯಗಳನ್ನು ಜಯಿಸಿತ್ತು. ಶನಿವಾರ ಮೂರನೆ ಜಯ ಸಾಧಿಸಿದೆ.

 15: ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧ ಆಡಿರುವ 17 ಟೆಸ್ಟ್ ಪಂದ್ಯಗಳ ಪೈಕಿ 15ರಲ್ಲಿ ಜಯ ಸಾಧಿಸಿದೆ.

06: ಶ್ರೀಲಂಕಾ ತಂಡ ತವರು ನೆಲದಲ್ಲಿ ಸತತ ಆರನೆ ಪಂದ್ಯ ಜಯಿಸಿದೆ. ಈ ಮೂಲಕ ಎರಡನೆ ಬಾರಿ ಅಜೇಯ ದಾಖಲೆ ಕಾಯ್ದುಕೊಂಡಿತು. ಈ ಹಿಂದೆ 2006-07ರ ನಡುವೆ ಸತತ 6 ಪಂದ್ಯಗಳಲ್ಲಿ ಜಯ ಸಾಧಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News