ಮನೋಹರ್ ಪಾರಿಕ್ಕರ್ ಗೋವಾದ ನೂತನ ಮುಖ್ಯಮಂತ್ರಿಯಾಗಿ ನೇಮಕ

Update: 2017-03-13 06:54 GMT

ಪಣಜಿ, ಮಾ.13: ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರನ್ನು ಗೋವಾದ ನೂತನ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ.
ರವಿವಾರ ಪ್ರಾದೇಶಿಕ ಪಕ್ಷಗಳು ಹಾಗೂ ಪಕ್ಷೇತರರ ಜತೆ ದಿನವಿಡೀ ಚರ್ಚೆ ನಡೆಸಿದ ಬಳಿಕ ಸರಕಾರಕ್ಕೆ ಅವರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಾರಿಕ್ಕರ್ ಅವರನ್ನು ಗೋವಾ ಸೇವೆಗೆ ನಿಯುಕ್ತಿಗೊಳಿಸಿದೆ.

ಸರಕಾರ ರಚನೆಗೆ ಅಗತ್ಯವಿರುವ 21 ಶಾಸಕರ ಬೆಂಬಲವನ್ನು ಪಾರಿಕ್ಕರ್ ತೋರಿಸಿಕೊಟ್ಟ ಬಳಿಕ, ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರು ಪಾರಿಕ್ಕರ್ ಅವರಿಗೆ ಸರಕಾರ ರಚಿಸುವಂತೆ ಆಹ್ವಾನ ನೀಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ 15 ದಿನಗಳ ಒಳಗಾಗಿ ಬಹುಮತ ಸಾಬೀತುಪಡಿಸುವಂತೆ ಅವರು ಸೂಚಿಸಿದ್ದಾರೆ.

ರವಿವಾರ ಸಂಜೆ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪಾರಿಕ್ಕರ್ ಉಮೇದುವಾರಿಕೆಯನ್ನು ಅಂತಿಮ ಪಡಿಸಲಾಯಿತು. ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಕಡಿಮೆ ಸ್ಥಾನ ಗೆದ್ದರೂ, ತಲಾ ಮೂವರು ಸದಸ್ಯರನ್ನು ಹೊಂದಿರುವ ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಬೆಂಬಲ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಪಕ್ಷೇತರ ಸದಸ್ಯರಾದ ರೋಹನ್ ಖನೂಟೆ ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೋವಿಂದ್ ಗೌಡೆ ಅವರ ನೆರವಿನೊಂದಿಗೆ ಸರಕಾರ ರಚನೆಗೆ ಬಿಜೆಪಿ ಮುಂದಾಗಿದೆ.

40 ಸದಸ್ಯಬಲದ ವಿಧಾನಸಭೆಯಲ್ಲಿ ಕೇಸರಿ ಪಕ್ಷ 13 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 17 ಸ್ಥಾನ ಗಳಿಸಿತ್ತು. ಪರಿಕ್ಕರ್ ಗೋವಾ ಸಿಎಂ ಆಗಿ ನಿಯುಕ್ತರಾಗಿರುವುದರಿಂದ ಭದ್ರತೆ ಕುರಿತ ಸಂಪುಟ ಸಮಿತಿಯಲ್ಲೂ ಸ್ಥಾನ ಖಾಲಿಯಾಗಿದೆ. ಹಿರಿಯ ಸಚಿವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿ ಈ ಸ್ಥಾನ ಭರ್ತಿ ಮಾಡಲಾಗುವುದು ಎಂದು ಬಿಜೆಪಿ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News