×
Ad

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಕೊಹ್ಲಿಗೆ ಹಿಂಭಡ್ತಿ, ಆಲ್‌ರೌಂಡರ್ ಪಟ್ಟಿಯಲ್ಲಿ ಅಶ್ವಿನ್‌ಗೆ ಅಗ್ರ ಸ್ಥಾನ

Update: 2017-03-13 23:44 IST

ದುಬೈ, ಮಾ.13: ಭಾರತದ ನಾಯಕ ವಿರಾಟ್ ಕೊಹ್ಲಿ ಸೋಮವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಹಿಂಭಡ್ತಿ ಪಡೆದು ನಾಲ್ಕನೆ ಸ್ಥಾನಕ್ಕೆ ಕುಸಿದಿದ್ದಾರೆ. ಸಹ ಆಟಗಾರ ಆರ್.ಅಶ್ವಿನ್ ಆಲ್‌ರೌಂಡರ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಲ್ಲದೆ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಕೊಹ್ಲಿ ಆಸ್ಟ್ರೇಲಿಯ ವಿರುದ್ಧ ಈತನಕ ನಡೆದಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ 0, 13, 12 ಹಾಗೂ 15ರನ್ ಗಳಿಸಲಷ್ಟೇ ಶಕ್ತವಾಗಿದ್ದು, ಒಟ್ಟು 847 ಅಂಕ ಗಳಿಸಿದ್ದಾರೆ.ಭಾರತದ ಇನ್ನೋರ್ವ ಆಟಗಾರ ಚೇತೇಶ್ವರ ಪೂಜಾರ 6ನೆ ಸ್ಥಾನದಲ್ಲಿದ್ದಾರೆ.

ಎರಡು ಸ್ಥಾನ ಭಡ್ತಿ ಪಡೆದಿರುವ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ.

2015ರ ನವೆಂಬರ್-ಡಿಸೆಂಬರ್‌ನಲ್ಲಿ ಕೆಲವು ಕಾಲ ನಂ.1 ರ್ಯಾಂಕಿನಲ್ಲಿದ್ದ ವಿಲಿಯಮ್ಸನ್ ಇದೀಗ 869 ಅಂಕ ಗಳಿಸಿದ್ದಾರೆ. ಮೂರನೆ ಸ್ಥಾನದಲ್ಲಿರುವ ರೂಟ್(848)ಗಿಂತ 21 ಅಂಕ ಮುಂದಿದ್ದಾರೆ. ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ-10ರ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಕ್ರಮವಾಗಿ ಮೊದಲ ಹಾಗೂ ಎರಡನೆ ಸ್ಥಾನದಲ್ಲಿದ್ದಾರೆ.

ಇದೇ ವೇಳೆ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್(403) ಅವರನ್ನು 2ನೆ ಸ್ಥಾನಕ್ಕೆ ತಳ್ಳಿದ ಅಶ್ವಿನ್ 434 ಅಂಕ ಗಳಿಸಿ ಮೊದಲ ಸ್ಥಾನಕ್ಕೆ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News