×
Ad

ಲೀ ಚೊಂಗ್ ವೀ ಚಾಂಪಿಯನ್

Update: 2017-03-13 23:47 IST

 ಬರ್ಮಿಂಗ್‌ಹ್ಯಾಮ್(ಇಂಗ್ಲೆಂಡ್), ಮಾ.13: ಮಲೇಷ್ಯಾದ ಅಗ್ರ ಶ್ರೇಯಾಂಕಿತ ಆಟಗಾರ ಲೀ ಚೊಂಗ್ ವೀ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಾಲ್ಕನೆ ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಇಲ್ಲಿ ರವಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಲೀ ಚೊಂಗ್ ಅವರು ಚೀನಾದ ಬ್ಯಾಡ್ಮಿಂಟನ್ ಆಟಗಾರ ಶಿ ಯೂಖಿ ಅವರನ್ನು 21-12, 21-10 ನೇರ ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ. ನಾಲ್ಕನೆ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದ್ದ ಲೀ ತಮ್ಮದೇ ದೇಶದ ವಾಂಗ್ ಪೆಂಗ್ ಸುನ್ ಹಾಗೂ ಎಡ್ಡಿ ಚೂಂಗ್, ಡೆನ್ಮಾರ್ಕ್‌ನ ಮಾರ್ಟೆನ್ ಫೋರ್ಸ್ಟ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಫ್ರಾರ್ಸ್ಟ್ ಪ್ರಸ್ತುತ ಕೌಲಾಲಂಪುರದಲ್ಲಿ ಕೋಚಿಂಗ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘‘ನಾನು ಪ್ರತಿ ಬಾರಿ ಇಂಗ್ಲೆಂಡ್‌ಗೆ ಆಗಮಿಸಿದಾಗ ತವರು ನೆಲದಲ್ಲಿ ಆಡಿದ ಅನುಭವವಾಗುತ್ತದೆ. ಮುಂದಿನ ವರ್ಷವೂ ನನ್ನ ಫೇವರಿಟ್ ಟೂರ್ನಮೆಂಟ್‌ನಲ್ಲಿ ಆಡಲು ಇಂಗ್ಲೆಂಡ್‌ಗೆ ಬರುತ್ತೇನೆ’’ ಎಂದು 13ನೆ ಬಾರಿ ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಭಾಗವಹಿಸಿದ್ದ 34ರ ಹರೆಯದ ಲೀ ಹೇಳಿದ್ದಾರೆ. ಲೀ ಟೂರ್ನಿ ಆರಂಭಕ್ಕೆ ಮೊದಲು ಇದು ನನ್ನ 13ನೆ ಹಾಗೂ ಕೊನೆಯ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದರು.
ಲೀ ಫೆಬ್ರವರಿ 4 ರಂದು ತರಬೇತಿಯ ಮ್ಯಾಟ್‌ನಲ್ಲಿ ಜಾರಿಬಿದ್ದು ಎಡ ಮಂಡಿಗೆ ಗಾಯವಾಗಿತ್ತು. ಟೂರ್ನಿ ಆರಂಭವಾಗಲು ಕೇವಲ 9 ದಿನಗಳಿರುವಾಗ ಅವರು ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದರು.

10ನೆ ರ್ಯಾಂಕಿನ ಚೀನಾ ಆಟಗಾರ ಯೂಖಿ ಸೆಮಿ ಫೈನಲ್‌ನಲ್ಲಿ ಲಿನ್ ಡಾನ್‌ರನ್ನು ಮಣಿಸಿ ಮೊದಲ ಬಾರಿ ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರು.

 ‘‘ನಾನು ಪ್ರಶಸ್ತಿ ಗೆಲ್ಲುತ್ತೇನೆಂದು ಯೋಚಿಸಿಯೇ ಇರಲಿಲ್ಲ. ನನ್ನ ಈ ಗೆಲುವು ನನಗೆ ಅಚ್ಚರಿ ತಂದಿದೆ. ಇಂಗ್ಲೆಂಡ್‌ನಲ್ಲಿ ಇದು ನನ್ನ ಕೊನೆಯ ಟೂರ್ನಿಯೆಂದು ಭಾವಿಸಿಕೊಂಡು ಇಲ್ಲಿಗೆ ಬಂದಿದ್ದೆ. ಉತ್ತಮ ಪ್ರದರ್ಶನ ನೀಡುವ ಯೋಜನೆ ಹಾಕಿಕೊಂಡಿದ್ದೆ’’ ಎಂದು ಲೀ ಪ್ರತಿಕ್ರಿಯಿಸಿದರು.

 ‘‘ಎರಡು ಪಂದ್ಯಗಳನ್ನಾಡಿದ ಬಳಿಕ ಆತ್ಮವಿಶ್ವಾಸ ಪಡೆದುಕೊಂಡಿದ್ದೆ. ಆದರೆ, ತಾನು ಈಗಲೂ 100 ಶೇ. ಫಿಟ್‌ನೆಸ್ ಹೊಂದಿಲ್ಲ’’ ಎಂದು ಎಡ ಮಂಡಿನೋವಿನಿಂದ ಚೇತರಿಸಿಕೊಂಡು ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಭಾಗವಹಿಸಿದ್ದ ಲೀ ಹೇಳಿದ್ದಾರೆ.

 ಚೋಂಗ್ ವೀ ರಿಯೋ ಒಲಿಂಪಿಕ್ಸ್‌ನ ಬಳಿಕ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ರಿಯೋ ಗೇಮ್ಸ್‌ನಲ್ಲಿ ಲೀ ಬೆಳ್ಳಿ ಪದಕ ಜಯಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬ ಅವರ ಕನಸು ಈಡೇರಲಿಲ್ಲ.

ಯಿಂಗ್‌ಗೆ ಸಿಂಗಲ್ಸ್ ಕಿರೀಟ

ಬರ್ಮಿಂಗ್‌ಹ್ಯಾಮ್,ಮಾ.13: ಚೈನೀಸ್ ತೈಪೆಯ ಅಗ್ರ ಶ್ರೇಯಾಂಕದ ಆಟಗಾರ್ತಿ ತೈ ಝೂ ಯಿಂಗ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

 ವಿಶ್ವದ ನಂ.1 ಆಟಗಾರ್ತಿ ಯಿಂಗ್ ವಿಶ್ವದ ಮಾಜಿ ಚಾಂಪಿಯನ್ ಹಾಗೂ 5ನೆ ಶ್ರೇಯಾಂಕಿತೆ ಥಾಯ್ಲೆಂಡ್‌ನ ರಚಾನಾಕ್ ಇಂತನಾನ್‌ರನ್ನು 21-16, 22-20 ಗೇಮ್‌ಗಳ ಅಂತರದಿಂದ ಸೋಲಿಸಿದರು. ಈ ಮೂಲಕ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ತನ್ನ ದೇಶಕ್ಕೆ ಮೊದಲ ಟ್ರೋಫಿ ಗೆದ್ದುಕೊಟ್ಟರು.

  ಪುರುಷರ ಡಬಲ್ಸ್ ಫೈನಲ್‌ನಲ್ಲಿ ಇಂಡೋನೇಷ್ಯದ ಮಾರ್ಕಸ್ ಗಿಡೆಯೊನ್ ಹಾಗೂ ಕೆವಿನ್ ಸಂಜಯ್ ಸುಕುಮುಲ್ಜೊ ಚೀನಾದ ಜಿ ಜುಹ್ಯೂ ಹಾಗೂ ಲಿಯು ಯುಚೆನ್‌ರನ್ನು 34 ನಿಮಿಷಗಳ ಹೋರಾಟದಲ್ಲಿ 21-19, 21-14 ಗೇಮ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News