×
Ad

100ನೆ ಟೆಸ್ಟ್ ಪಂದ್ಯವನ್ನಾಡಲು ಬಾಂಗ್ಲಾದೇಶ ಸಿದ್ಧತೆ

Update: 2017-03-13 23:52 IST

ಕೊಲಂಬೊ, ಮಾ.13: ಟೆಸ್ಟ್ ಕ್ರಿಕೆಟ್‌ನ 140ನೆ ವರ್ಷಾಚರಣೆ(ಮಾ.15)ದಿನದಂದೇ ಬಾಂಗ್ಲಾದೇಶ ತಂಡ ಕೊಲಂಬೊದ ಪಿ. ಸಾರಾ ಓವಲ್‌ನಲ್ಲಿ ಶ್ರೀಲಂಕಾ ವಿರುದ್ಧ 100ನೆ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗುತ್ತಿದೆ.

ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ನೂರು ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವ 10ನೆ ತಂಡ ಬಾಂಗ್ಲಾದೇಶ. 2000ರ ನವೆಂಬರ್‌ನಲ್ಲಿ ಢಾಕಾದಲ್ಲಿ ಸೌರವ್ ಗಂಗುಲಿ ನೇತೃತ್ವದ ಭಾರತ ವಿರುದ್ಧ ಟೆಸ್ಟ್ ಪಂದ್ಯ ಆಡುವುದರೊಂದಿಗೆ ಬಾಂಗ್ಲಾದೇಶ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶ ಪಡೆದಿತ್ತು.

ಬಾಂಗ್ಲಾದೇಶ ತಂಡ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ್ದ ಎರಡನೆ ತಂಡವೆನಿಸಿಕೊಂಡಿತ್ತು. ಅಮಿನುಲ್ ಇಸ್ಲಾಮ್ ಬಾಂಗ್ಲಾದೇಶದ ಪರ ಮೊದಲ ಶತಕ ಬಾರಿಸಿದ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದಾರೆ. 27 ಟೆಸ್ಟ್ ಪಂದ್ಯಗಳ ಬಳಿಕ ಮೊದಲ ಗೆಲುವು ಸಾಧಿಸಿದ್ದ ಬಾಂಗ್ಲಾದೇಶ ತನ್ನ 35ನೆ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸಿತ್ತು.

ಬುಧವಾರ ಶ್ರೀಲಂಕಾದ ವಿರುದ್ಧ ನೂರನೆ ಟೆಸ್ಟ್ ಪಂದ್ಯವನ್ನಾಡಲಿದೆ. ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು 15 ಬಾರಿ ಸೋಲಿಸಿದೆ.

ಬಾಂಗ್ಲಾದೇಶ ಟೆಸ್ಟ್ ಪಯಣದ ಹಿನ್ನೋಟದ ಅಂಕಿ-ಅಂಶ...

08: ಬಾಂಗ್ಲಾದೇಶ 99 ಟೆಸ್ಟ್ ಪಂದ್ಯಗಳಲ್ಲಿ ಕೇವಲ 8ರಲ್ಲಿ ಜಯ ಸಾಧಿಸಿದೆ. ನ್ಯೂಝಿಲೆಂಡ್ ಮೊದಲ 100 ಟೆಸ್ಟ್ ಪಂದ್ಯಗಳಲ್ಲಿ ಕೇವಲ 7ರಲ್ಲಿ ಜಯ ಸಾಧಿಸಿತ್ತು. ಬಾಂಗ್ಲಾದೇಶಕ್ಕೆ ಹೋಲಿಸಿದರೆ (76 ಪಂದ್ಯಗಳಲ್ಲಿ ಸೋಲು) ಕಿವೀಸ್ ಕೇವಲ 46 ಪಂದ್ಯಗಳಲ್ಲಿ ಸೋಲುಂಡಿದೆ.

03: ಬಾಂಗ್ಲಾದೇಶ 99 ಟೆಸ್ಟ್‌ಗಳಲ್ಲಿ ಕೇವಲ 3 ಬಾರಿ ಸರಣಿ ಗೆದ್ದುಕೊಂಡಿದೆ. 2015 ಹಾಗೂ 2014ರಲ್ಲಿ ಸ್ವದೇಶದಲ್ಲಿ ಝಿಂಬಾಬ್ವೆ ವಿರುದ್ಧ ಜಯ ಸಾಧಿಸಿದ್ದ ಬಾಂಗ್ಲಾ 2009ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸರಣಿ ಜಯಿಸಿತ್ತು.

2014: ಬಾಂಗ್ಲಾದೇಶ 2014ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿತ್ತು. 2014ರಲ್ಲಿ 3 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. 2003ರಲ್ಲಿ ಅತ್ಯಂತ ಕಳಪೆ ಪ್ರದರ್ಶನನೀಡಿದ್ದ ಬಾಂಗ್ಲಾ ಆ ವರ್ಷ ಗರಿಷ್ಠ ಪಂದ್ಯಗಳನ್ನು(9) ಆಡಿದ್ದರೂ ಎಲ್ಲ ಪಂದ್ಯಗಳನ್ನು ಸೋತಿತ್ತು.

21: ಬಾಂಗ್ಲಾದೇಶ 2001 ನವೆಂಬರ್‌ನಿಂದ 2004ರ ಫೆಬ್ರವರಿ ತನಕ ಸತತ 21 ಪಂದ್ಯಗಳಲ್ಲಿ ಸೋತಿತ್ತು. ಇದು ಟೆಸ್ಟ್ ಚರಿತ್ರೆಯಲ್ಲಿ ದೀರ್ಘಾವಧಿಯ ಸೋಲಾಗಿದೆ.

 03: ಬಾಂಗ್ಲಾದೇಶ ಟೆಸ್ಟ್ ಪಯಣದಲ್ಲಿ ಈ ತನಕ ಮೂರು ತಂಡಗಳನ್ನು ಸೋಲಿಸಿದೆ. ಝಿಂಬಾಬ್ವೆ(5ಬಾರಿ), ವೆಸ್ಟ್‌ಇಂಡೀಸ್(2) ಹಾಗೂ ಇಂಗ್ಲೆಂಡ್(1)ನ್ನು ಸೋಲಿಸಿತ್ತು. ಆಸ್ಟೇಲಿಯ ವಿರುದ್ಧ ಆಡಿರುವ ಎಲ್ಲ ನಾಲ್ಕು ಪಂದ್ಯಗಳನ್ನು ಸೋತಿದೆ.

3,546: ಒಟ್ಟು 3,546 ರನ್ ಗಳಿಸಿರುವ ತಮೀಮ್ ಇಕ್ಬಾಲ್ ಬಾಂಗ್ಲಾದೇಶದ ಪರ ಗರಿಷ್ಠ ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್. ಇಕ್ಬಾಲ್ ಏಕದಿನ(5,120) ಹಾಗೂ ಟ್ವೆಂಟಿ-20( 1201)ಯಲ್ಲಿ ಬಾಂಗ್ಲಾ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದರು. ಎಲ್ಲ 3 ಮಾದರಿ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಬಾಂಗ್ಲಾದ ಏಕೈಕ ಬ್ಯಾಟ್ಸ್‌ಮನ್.

170: ಶಾಕಿಬ್ ಅಲ್ ಹಸನ್(170) ಬಾಂಗ್ಲಾದೇಶದ ಪರ ಗರಿಷ್ಠ ವಿಕೆಟ್ ಪಡೆದಿರುವ ಟೆಸ್ಟ್ ಬೌಲರ್. ತಮೀಮ್‌ರಂತೆಯೇ ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನದಲ್ಲಿ 220 ಹಾಗೂ ಟಿ-20ಯಲ್ಲಿ 67 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮುಹಮ್ಮದ್ ರಫೀಕ್(100) ಬಾಂಗ್ಲಾ ಪರ 100 ವಿಕೆಟ್ ಪಡೆದ ಎರಡನೆ ಬೌಲರ್ ಆಗಿದ್ದಾರೆ.

61: ಮುಹಮ್ಮದ್ ಅಶ್ರಫುಲ್ ಬಾಂಗ್ಲಾದೇಶದ ಪರ ಗರಿಷ್ಠ ಪಂದ್ಯಗಳನ್ನು(61) ಆಡಿರುವ ಬ್ಯಾಟ್ಸ್‌ಮನ್ ಆಗಿದ್ದಾರೆ.

29: ಮುಶ್ಫಿಕುರ್ರಹೀಂ ಬಾಂಗ್ಲಾದೇಶವನ್ನು ಅತ್ಯಂತ ಹೆಚ್ಚು ಪಂದ್ಯಗಳಲ್ಲಿ(29) ನಾಯಕನಾಗಿ ಮುನ್ನಡೆಸಿದ್ದಾರೆ. ಮುಶ್ಫಿಕುರ್ರಹೀಂ ನಾಯಕತ್ವದಲ್ಲಿ ಬಾಂಗ್ಲಾದೇಶ 5ರಲ್ಲಿ ಜಯ, 9ರಲ್ಲಿ ಡ್ರಾ ಹಾಗೂ 15ರಲ್ಲಿ ಸೋತಿದೆ. ಬಾಂಗ್ಲಾದೇಶ ನಾಯಕರ ಪೈಕಿ ಮುಶ್ಫಿಕರ್ ಸಾಧನೆ ಉತ್ತಮವಾಗಿದೆ.

595/8: ಬಾಂಗ್ಲಾದೇಶ ಈವರ್ಷದ ಜನವರಿಯಲ್ಲಿ ವೆಲ್ಲಿಂಗ್ಟನ್‌ನಲ್ಲಿ ನ್ಯೂಝಿಲೆಂಡ್‌ನ ವಿರುದ್ಧ ಎರಡನೆ ಗರಿಷ್ಠ ಮೊತ್ತ(595/8) ದಾಖಲಿಸಿತ್ತು. ಶಾಕಿಬ್ ಅಲ್ ಹಸನ್ ದ್ವಿಶತಕ(217) ಬಾರಿಸಿದ್ದಲ್ಲದೆ ಮುಶ್ಫಿಕುರ್ರಹೀಂರೊಂದಿಗೆ 5ನೆ ವಿಕೆಟ್‌ಗೆ ಬಾಂಗ್ಲಾದೇಶ ಪರ ಗರಿಷ್ಠ ಜೊತೆಯಾಟ(359) ನಡೆಸಿದ್ದರು. ಆದರೆ,ಈ ಪಂದ್ಯವನ್ನು ಸೋತಿತ್ತು.

05: ಶಾಕಿಬ್ ಟೆಸ್ಟ್ ಕ್ರಿಕೆಟ್‌ನಲ್ಲಿ 5 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಬಾಂಗ್ಲಾದೇಶದ ಪರ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News