×
Ad

ಮತ್ತೆ ಐಪಿಎಲ್ ಕಮೆಂಟರಿ ಬಾಕ್ಸಿಗೆ ಹರ್ಷ ಭೋಗ್ಲೆ?

Update: 2017-03-14 15:58 IST

 ಹೊಸದಿಲ್ಲಿ, ಮಾ.14: ಕ್ರಿಕೆಟ್ ವೀಕ್ಷಕವಿವರಣೆಗಾರ ಹಾಗೂ ವಿಮರ್ಶಕ ಹರ್ಷ ಭೋಗ್ಲೆ ಮುಂಬರುವ 10ನೆ ಆವೃತ್ತಿಯ ಐಪಿಎಲ್‌ನಲ್ಲಿ ವಾಪಸಾಗಲಿದ್ದಾರೆ. ಭೋಗ್ಲೆ 2016ರ ಐಪಿಎಲ್‌ನಲ್ಲಿ ಕಮೆಂಟರಿ ಬಾಕ್ಸ್‌ನಿಂದ ಹೊರಗುಳಿದಿದ್ದರು.

ಕಳೆದ ವರ್ಷ ಐಪಿಎಲ್‌ನಿಂದ ಭೋಗ್ಲೆ ಹೊರಗುಳಿದಾಗ ಭಾರೀ ಸುದ್ದಿಯಾಗಿತ್ತು. ಐಪಿಎಲ್‌ನ ಮೊದಲ 8 ಆವೃತ್ತಿಗಳಲ್ಲಿ ಕಮೆಂಟರಿ ಹಾಗೂ ಟಿವಿ ಶೋ ಪ್ಯಾನಲ್‌ನಲ್ಲಿ ಸಕ್ರಿಯವಾಗಿದ್ದ ಭೋಗ್ಲೆ ಕಳೆದ ವರ್ಷ 9ನೆ ಆವೃತ್ತಿಯ ಟೂರ್ನಿಯಿಂದ ದೂರ ಉಳಿದಿದ್ದರು.

 ಈ ವರ್ಷದ ಐಪಿಎಲ್‌ಗೆ ಭೋಗ್ಲೆ ವಾಪಸಾಗಲಿದ್ದಾರೆ ಎಂದು ‘ಮುಂಬೈ ಮಿರರ್’ ಪತ್ರಿಕೆ ವರದಿ ಮಾಡಿದೆ. ಪ್ರಸಾರ ಸಂಸ್ಥೆಯಲ್ಲಿ ಎರಡರಲ್ಲಿ ಒಂದು ಸ್ಥಳದಲ್ಲಿ ಕಾರ್ಯನಿರ್ವಹಿಸಲು ಭೋಗ್ಲೆ ಸಜ್ಜಾಗಿದ್ದಾರೆ. ಮೈದಾನದಲ್ಲಿ ಕಮೆಂಟರಿ ಹೇಳುವುದು ಅಥವಾ ಟಿವಿ ಸ್ಟುಡಿಯೋದಲ್ಲಿ ಪಂದ್ಯ ಆರಂಭಕ್ಕೆ ಮೊದಲು ಹಾಗೂ ಆರಂಭದ ಬಳಿಕ ತಜ್ಞರೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.

2016ರ ಮಾರ್ಚ್-ಎಪ್ರಿಲ್‌ನಲ್ಲಿ ಭಾರತದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕೊನೆಯ ಬಾರಿ ವೀಕ್ಷಕವಿವರಣೆ ನೀಡಿದ್ದರು. ಟ್ವೆಂಟಿ-20 ವಿಶ್ವಕಪ್‌ನ ವೇಳೆ ಭೋಗ್ಲೆ ಅವರು ಭಾರತದ ಆಟಗಾರರಿಗಿಂತ ವಿದೇಶಿ ಆಟಗಾರರನ್ನು ಹೆಚ್ಚು ಹೈಲೈಟ್ ಮಾಡಿದ್ದರು ಎಂದು ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದರು. ಬಚ್ಚನ್ ಟ್ವೀಟ್ ದೊಡ್ಡ ವಿವಾದ ಸೃಷ್ಟಿಸಿದ್ದು, ಟ್ವೀಟ್‌ನಿಂದ ನೊಂದ ಭೋಗ್ಲೆ 2016ರ ಐಪಿಎಲ್‌ನಲ್ಲಿ ವೀಕ್ಷಕವಿವರಣೆ ತಂಡದಿಂದ ದೂರ ಉಳಿದಿದ್ದರು.

ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ರಮೀಝ್ ರಾಜಾ, ವಕಾರ್ ಯೂನಿಸ್ ಹಾಗೂ ಶುಐಬ್ ಅಖ್ತರ್ ಈವರ್ಷದ ಐಪಿಎಲ್‌ನ ಚರ್ಚಾಕೂಟದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ. ಈ ಹಿನ್ನೆಲೆಯಲ್ಲಿ ಭೋಗ್ಲೆ ಕಮೆಂಟರಿ ಬಾಕ್ಸ್‌ಗೆ ವಾಪಸಾಗಿದ್ದಾರೆ ಎನ್ನಲಾಗಿದೆ.

ಈ ವರ್ಷದ ಐಪಿಎಲ್‌ನ ಕಮೆಂಟರಿ ಪಟ್ಟಿಯಲ್ಲಿ ಸುನೀಲ್ ಗವಾಸ್ಕರ್, ರವಿಶಾಸ್ತ್ರಿ, ಎಲ್. ಶಿವರಾಮಕೃಷ್ಣನ್ ಹಾಗೂ ಸಂಜಯ್ ಮಾಂಜ್ರೇಕರ್ ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News