×
Ad

ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿ: ಸ್ಟಾನ್ ವಾವ್ರಿಂಕ ನಾಲ್ಕನೆ ಸುತ್ತಿಗೆ ಲಗ್ಗೆ

Update: 2017-03-14 23:33 IST

ಇಂಡಿಯನ್ ವೇಲ್ಸ್, ಮಾ.14: ಎಟಿಪಿ ಇಂಡಿಯನ್ ವೇಲ್ಸ್ ಮಾಸ್ಟರ್ಸ್‌ ಟೂರ್ನಿಯಲ್ಲಿ ಸ್ವಿಸ್‌ನ ಸ್ಟಾನ್ ವಾವ್ರಿಂಕ ನಾಲ್ಕನೆ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ 3ನೆ ಶ್ರೇಯಾಂಕದ ಸ್ಟಾನ್ ವಾವ್ರಿಂಕ ಅವರು ಜರ್ಮನಿಯ ಫಿಲಿಪ್ ಕೊಹ್ಲ್ಸ್‌ಕ್ರೆಬರ್‌ರನ್ನು 7-5, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

 ವಾವ್ರಿಂಕ ಅವರು ಫಿಲಿಪ್ ವಿರುದ್ದ ಆಡಿರುವ ಎಲ್ಲ ಐದು ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ. ಈ ಗೆಲುವಿನ ಮೂಲಕ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪುವ ವಿಶ್ವಾಸ ಹೆಚ್ಚಿಸಿಕೊಂಡರು.

ವಾವ್ರಿಂಕ ಮುಂದಿನ ಸುತ್ತಿನಲ್ಲಿ ಜಪಾನ್‌ನ ಯೊಶಿಹಿಟೊ ನಿಶಿಯೊಕರನ್ನು ಎದುರಿಸಲಿದ್ದಾರೆ. ನಿಶಿಯೊಕಾ ಝೆಕ್‌ನ 13ನೆ ಶ್ರೇಯಾಂಕದ ಥಾಮಸ್ ಬೆರ್ಡಿಕ್‌ರನ್ನು 1-6, 7-6(7/5), 6-4 ಸೆಟ್‌ಗಳ ಅಂತರದಿಂದ ಮಣಿಸಿ ಮೊದಲ ಬಾರಿ ಮಾಸ್ಟರ್ಸ್‌ ಟೂರ್ನಮೆಂಟ್‌ನಲ್ಲಿ ನಾಲ್ಕನೆ ಸುತ್ತಿಗೆ ತಲುಪಿದ್ದರು. 8ನೆ ಶ್ರೇಯಾಂಕದ ಆಸ್ಟ್ರೀಯದ ಡೊಮಿನಿಕ್ ಥಿಯೆಮ್ ಜರ್ಮನಿಯ ಮಿಸ್ಚಾ ಝ್ವೆರೆವ್‌ರನ್ನು 6-1, 6-4 ನೇರ ಸೆಟ್‌ಗಳಿಂದ ಮಣಿಸಿ ನಾಲ್ಕನೆ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಕೆರ್ಬರ್ 4ನೆ ಸುತ್ತಿಗೆ ಪ್ರವೇಶ:ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಇಂಡಿಯನ್ ವೇಲ್ಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕನೆ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಸೋಮವಾರ ನಡೆದ ಮೂರನೆ ಸುತ್ತಿನ ಪಂದ್ಯದಲ್ಲಿ ಕೆರ್ಬರ್ ಫ್ರಾನ್ಸ್‌ನ ಪೌಲಿನ್ ಪಾರ್ಮೆಂಟಿಯೆರ್‌ರನ್ನು 7-5, 3-6, 7-5 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಈತನಕ 9 ಬಾರಿ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಆಡಿದ್ದ ಕೆರ್ಬರ್ 2012-13ರಲ್ಲಿ ಮಾತ್ರ ಸೆಮಿ ಫೈನಲ್‌ಗೆ ತಲುಪಿದ್ದರು. ಕಳೆದ ಮೂರು ವರ್ಷ ಎರಡನೆ ಸುತ್ತಿನಲ್ಲಿ ಸೋತಿದ್ದರು.

2015ರ ಚಾಂಪಿಯನ್ ಸಿಮೊನಾ ಹಾಲೆಪ್ 28ನೆ ಶ್ರೇಯಾಂಕದ ಕ್ರಿಸ್ಟಿನಾ ಮ್ಲಾಡೆನೊವಿಕ್‌ರನ್ನು 6-3, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರು ಲೂಸಿ ಸಫರೋವಾರನ್ನು 6-4, 6-2 ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಮುಂದಿನ ಸುತ್ತಿಗೆ ತಲುಪಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News