×
Ad

ಪಾಕಿಸ್ತಾನದ ದೇಶೀಯ ಕ್ರಿಕೆಟ್ ಲೀಗ್‌ನಲ್ಲಿ ಸಿಖ್ ಕ್ರಿಕೆಟಿಗನಿಗೆ ಅವಕಾಶ

Update: 2017-03-14 23:36 IST

 ಕರಾಚಿ,ಮಾ.14: ಸಿಖ್ ಕ್ರಿಕೆಟಿಗ ಮಹಿಂದರ್ ಪಾಲ್ ಸಿಂಗ್ ಮಂಗಳವಾರ ಪಾಕಿಸ್ತಾನದ ದೇಶೀಯ ಕ್ರಿಕೆಟ್ ಲೀಗ್‌ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಸಿಂಗ್ ಇತ್ತೀಚೆಗಿನ ದಿನಗಳಲ್ಲಿ ಪಾಕ್ ಕ್ರಿಕೆಟ್ ತಂಡದಲ್ಲಿ ಆಡಿದ ಮೊದಲ ಸಿಖ್ ಕ್ರಿಕೆಟಿಗನಾಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಗುಲಾಬ್ ಸಿಂಗ್ ಎಂಬ ಕ್ರಿಕೆಟಿಗ ಪಾಕ್ ಪರ ಮೂರು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಮಹಿಂದರ್ ಪಾಟ್ರೊನ್ಸ್ ಟ್ರೋಫಿ ಗ್ರೇಡ್-2 ಟೂರ್ನಮೆಂಟ್‌ನಲ್ಲಿ ಕ್ಯಾಂಡಿಲ್ಯಾಂಡ್ ತಂಡದ ಪರ ಆಡುವ ಅವಕಾಶ ಪಡೆದಿದ್ದಾರೆ.

‘‘ಪ್ಯಾಟ್ರೋನ್ಸ್ ಟ್ರೋಫಿ ಗ್ರೇಡ್-2 ಟೂರ್ನಿಯಲ್ಲಿ ಆಡುವ ಅವಕಾಶ ಲಭಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದಿದ್ದೆ. ಆದರೆ,ಗಾಯದ ಸಮಸ್ಯೆಯಿಂದಾಗಿ ಎರಡನೆ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ’’ ಎಂದು ಸ್ಟೇಟ್‌ಬ್ಯಾಂಕ್ ಮೈದಾನದಲ್ಲಿ ಕರಾಚಿ ಪೋರ್ಟ್ ಟ್ರಸ್ಟ್ ತಂಡದ ವಿರುದ್ಧ ಆಡಿದ ಬಳಿಕ ಸುದ್ದಿಸಂಸ್ಥೆಗೆ ಸಿಂಗ್ ತಿಳಿಸಿದರು.

ಕ್ಯಾಂಡಿಲ್ಯಾಂಡ್ ಮ್ಯಾನೇಜರ್ ಮಿರ್ಝಾ ಅವರು ನನಗೆ ಕರೆ ಮಾಡಿದಾಗ ನನಗೆ ತುಂಬಾ ಸಂತೋಷವಾಗಿತ್ತು. 2015ರಲ್ಲಿ ಕ್ಯಾಂಡಿಲ್ಯಾಂಡ್ ಆಯೋಜಿಸಿದ್ದ ಪ್ರತಿಭಾಶೋಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಪ್ರತಿಭಾಶೋಧ ಕಾರ್ಯಕ್ರಮವನ್ನು ಆಧರಿಸಿ ನನಗೆ ಕರೆ ಮಾಡಿದ್ದರು’’ ಎಂದು 21ರ ಹರೆಯದ ಸಿಂಗ್ ತಿಳಿಸಿದರು.

ಪಾಕಿಸ್ತಾನದಲ್ಲಿ 20,000ದಷ್ಟಿರುವ ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದರು. ಲಾಹೋರ್‌ನಿಂದ 100 ಕಿ.ಮೀ.ದೂರದ ನಾನ್‌ಕನಾ ಸಾಹಿಬ್ ಮಹಿಂದರ್ ಸಿಂಗ್ ಜನ್ಮಸ್ಥಳ. ‘‘ನನ್ನ ತಂದೆ ಹರ್ಜೀತ್ ಸಿಂಗ್ ವೈದ್ಯರು. ಕಳೆದ ಒಂದು ವರ್ಷದಿದ ಅವರು ನನಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಮುಲ್ತಾನ್‌ನಲ್ಲಿ ಪಿಸಿಬಿ ಆಯೋಜಿಸಿದ್ದ ಶಿಬಿರಕ್ಕೆ ಆಯ್ಕೆಯಾದ ಮೊದಲ ಸಿಖ್ ಆಟಗಾರನಾಗಿದ್ದೆ. ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಲಭಿಸಿರುವುದಕ್ಕೆ ಖುಷಿಯಾಗುತ್ತಿದೆ’’ ಎಂದು ಮಹಿಂದರ್ ಹೇಳಿದ್ದಾರೆ.

‘‘ಅಗ್ರ ತಂಡಗಳು ಹಾಗೂ ಆಟಗಾರರೊಂದಿಗೆ ಆಡಿದ ಬಳಿಕ ಸಾಕಷ್ಟು ಪಾಠ ಕಲಿತ್ತಿದ್ದೇನೆ. ಪಿಸಿಬಿ ಶಿಬಿರಕ್ಕೆ ಆಯ್ಕೆಯಾಗಿರುವುದು ನನ್ನಪಾಲಿಗೆ ಹೆಮ್ಮೆಯ ಕ್ಷಣ. ದೇಶೀಯ ಕ್ರಿಕೆಟ್ ಆಡುವ ಮೂಲಕ ನನ್ನ ಕನಸು ಈಡೇರಿದೆ. ಯುವ ಆಟಗಾರರಿಗೆ ದೊಡ್ಡ ವೇದಿಕೆಯಾಗಿರುವ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ನನ್ನ ಮುಂದಿನ ಗುರಿ’’ಎಂದು ಸಿಂಗ್ ತಿಳಿಸಿದರು.

ಪಂಜಾಬ್ ಯುನಿವರ್ಸಿಟಿಯ ಫಾರ್ಮಸಿ ವಿದ್ಯಾರ್ಥಿಯಾಗಿರುವ ಮಹಿಂದರ್ ಸಿಂಗ್ ಕಳೆದ ಕೆಲವು ಸಮಯದಿಂದ ಕ್ರಿಕೆಟ್‌ಗೆ ಹೆಚ್ಚು ಸಮಯ ನೀಡುತ್ತಿದ್ದಾರೆ. ಮಹಿಂದರ್ ತಂದೆ ಕೂಡ ಕ್ರಿಕೆಟ್ ಪ್ರೇಮಿಯಾಗಿದ್ದು, ಮಗನಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಈತನಕ ಕೇವಲ 7 ಮಂದಿ ಮುಸ್ಲಿಂಯೇತರರು ಪಾಕಿಸ್ತಾನ ಕ್ರಿಕೆಟ್‌ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಪೈಕಿ ಐವರು ಕ್ರಿಶ್ಚಿಯನ್ನರು ಹಾಗೂ ಇಬ್ಬರು ಹಿಂದೂಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News