ಕಿವೀಸ್ ವಿರುದ್ಧ 3ನೆ ಟೆಸ್ಟ್: ದಕ್ಷಿಣ ಆಫ್ರಿಕ ತಂಡಕ್ಕೆ ಸ್ಪಿನ್ನರ್ ಡೇನ್ ವಾಪಸ್
ಗೌಟೆಂಗ್, ಮಾ.14: ನ್ಯೂಝಿಲೆಂಡ್ ವಿರುದ್ಧ ಮಾ.25 ರಂದು ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿರುವ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ದಕ್ಷಿಣ ಆಫ್ರಿಕ ತಂಡ ಆಫ್ ಸ್ಪಿನ್ನರ್ ಡೇನ್ ಪೀಡ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ದಕ್ಷಿಣ ಆಫ್ರಿಕದ ಆಯ್ಕೆಗಾರರು ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್‌ರನ್ನು ಸ್ಪೆಷಲಿಸ್ಟ್ ಸ್ಪಿನ್ನರ್‌ರನ್ನಾಗಿ ಆಯ್ಕೆ ಮಾಡಿದ್ದರು.
ಡುನೆಡಿನ್‌ನಲ್ಲಿ ಮಳೆಯಿಂದಾಗಿ ಡ್ರಾನಲ್ಲಿ ಕೊನೆಗೊಂಡ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ದಕ್ಷಿಣ ಆಫ್ರಿಕದ ಎರಡು ಇನಿಂಗ್ಸ್‌ನ ಒಟ್ಟು 224.4 ಓವರ್‌ಗಳಲ್ಲಿ 106 ಓವರ್‌ಗಳನ್ನು ಸ್ಪಿನ್ನರ್‌ಗಳು ನಿಭಾಯಿಸಿದ್ದರು.
ದಕ್ಷಿಣ ಆಫ್ರಿಕದ ಸ್ಪಿನ್ನರ್ ಮಹಾರಾಜ್ ನ್ಯೂಝಿಲೆಂಡ್ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ 28.3 ಓವರ್ ಬೌಲಿಂಗ್ ಮಾಡಿ 94 ರನ್‌ಗೆ 5 ವಿಕೆಟ್‌ಗಳನ್ನು ಕಬಳಿಸಿದ್ದರು.
27ರ ಹರೆಯದ ಪೀಡ್ ಏಳು ಟೆಸ್ಟ್ ಪಂದ್ಯಗಳಲ್ಲಿ 36.04ರ ಸರಾಸರಿಯಲ್ಲಿ ಒಟ್ಟು 24 ವಿಕೆಟ್‌ಗಳನ್ನು ಕಬಳಿಸಿದ್ದರು. ನವೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಪೀಡ್ ಬದಲಿಗೆ ಹೊಸ ಎಡಗೈ ಸ್ಪಿನ್ನರ್‌ಗಳಾದ ಮಹಾರಾಜ್ ಹಾಗೂ ತಬ್ರೈಝ್ ಶಂಸಿ ಅವರನ್ನು ಆಯ್ಕೆ ಮಾಡಲಾಗಿತ್ತು.