×
Ad

ಮೂರನೆ ಟೆಸ್ಟ್: ಪೂಜಾರ ಅಜೇಯ ಶತಕ; ಭಾರತ 360/6

Update: 2017-03-18 16:53 IST

ರಾಂಚಿ, ಮಾ.18: ಅಗ್ರ ಸರದಿಯ ದಾಂಡಿಗ ಚೇತೇಶ್ವರ ಪೂಜಾರ ಬಾರಿಸಿದ ಅಜೇಯ ಶತಕದ(130, 328 ಎಸೆತ) ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಮೂರನೆ ಟೆಸ್ಟ್‌ನ 3ನೆ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 360 ರನ್ ಗಳಿಸಿದೆ.

ಇಲ್ಲಿ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಮೂರನೆ ದಿನವಾದ ಶನಿವಾರ 1 ವಿಕೆಟ್ ನಷ್ಟಕ್ಕೆ 120ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಪೂಜಾರ ಆಸರೆಯಾದರು.

ಪ್ರಸ್ತುತ ಸರಣಿಯಲ್ಲಿ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಪೂಜಾರ ದಿನದಾಟದಂತ್ಯಕ್ಕೆ 328 ಎಸೆತಗಳಲ್ಲಿ 17 ಬೌಂಡರಿಗಳ ಸಹಿತ 130 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಪೂಜಾರಗೆ ವೃದ್ದಿಮಾನ್ ಸಹಾ(ಅಜೇಯ 18) ಸಾಥ್ ನೀಡುತ್ತಿದ್ದಾರೆ. ಭಾರತ ತಂಡ ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ಗಿಂತ 91 ರನ್ ಹಿನ್ನಡೆಯಲ್ಲಿದೆ.

ಇದಕ್ಕೆ ಮೊದಲು 42 ರನ್‌ನಿಂದ ಬ್ಯಾಟಿಂಗ್ ಮುಂದವರಿಸಿದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ನಿನ್ನೆಯ ಮೊತ್ತಕ್ಕೆ 40 ರನ್ ಸೇರಿಸಿ ಸ್ಪಿನ್ನರ್ ಓ’ಕೀಫೆಗೆ ವಿಕೆಟ್ ಒಪ್ಪಿಸಿದರು. ಶತಕವಂಚಿತರಾದ ವಿಜಯ್ 183 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್‌ಗಳ ಸಹಿತ 82 ರನ್ ಗಳಿಸಿ ಔಟಾದರು.

ವಿಜಯ್ ಔಟಾದ ಬಳಿಕ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ(6)ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ(14) ಬೇಗನೆ ಔಟಾದರು. ಆಸ್ಟ್ರೇಲಿಯದ ಪರ ಕಮಿನ್ಸ್(4-59) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News