×
Ad

ಕೊಹ್ಲಿಯನ್ನು ಅಣಕಿಸಿದ ಮ್ಯಾಕ್ಸ್‌ವೆಲ್

Update: 2017-03-18 23:46 IST

 ರಾಂಚಿ, ಮಾ.18: ಭಾರತ ಹಾಗೂ ಆಸ್ಟ್ರೇಲಿಯ ಕ್ರಿಕೆಟಿಗರು ಪರಸ್ಪರ ಅಣಕಿಸಿಕೊಳ್ಳುವುದಕ್ಕೆ ಕೊನೆಯಿಲ್ಲದಂತಾಗಿದೆ. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರಸ್ತುತ ಮೂರನೆ ಟೆಸ್ಟ್‌ನಲ್ಲಿ ಆತಿಥೇಯ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಅಣಕಿಸುವ ಮೂಲಕ ಸಭ್ಯತೆಯ ಎಲ್ಲೆ ಮೀರಿದ್ದಾರೆ.

3ನೆ ದಿನವಾದ ಶನಿವಾರ 81ನೆ ಓವರ್‌ನಲ್ಲಿ ಪೂಜಾರ ಅವರು ಕಮಿನ್ಸ್ ಎಸೆತವನ್ನು ಮಿಡ್-ಆನ್‌ನತ್ತ ತಳ್ಳಿದರು. ಬೌಂಡರಿಯತ್ತ ಸಾಗುತ್ತಿದ್ದ ಚೆಂಡನ್ನು ಬೆನ್ನಟ್ಟಿದ ಮ್ಯಾಕ್ಸ್‌ವೆಲ್ ಎರಡು ದಿನಗಳ ಹಿಂದೆ ಕೊಹ್ಲಿ ಫೀಲ್ಡಿಂಗ್ ಮಾಡಿ ಗಾಯಮಾಡಿಕೊಂಡ ಜಾಗದಲ್ಲೇ ಜಿಗಿಯುವ ಮೂಲಕ ಚೆಂಡನ್ನು ತಡೆದರು. ಆ ಬಳಿಕ ಬಲಭುಜವನ್ನು ಮುಟ್ಟಿಕೊಂಡು ಕೊಹ್ಲಿಯನ್ನು ಅಣಕಿಸಿದರು.

ಗುರುವಾರ ಕೊಹ್ಲಿ ಬೌಂಡರಿಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬೌಂಡರಿಯತ್ತ ಸಾಗುತ್ತಿದ್ದ ಚೆಂಡನ್ನು ತಡೆಯಲು ಹೋಗಿ ಬಲಭುಜಕ್ಕೆ ಗಾಯವಾಗಿತ್ತು. ಮೂರನೆ ದಿನವಾದ ಇಂದು ಕೊಹ್ಲಿ ಬ್ಯಾಟಿಂಗ್‌ಗೆ ಇಳಿದರೂ 23 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಕಮಿನ್ಸ್‌ಗೆ ಔಟಾಗಿದ್ದರು. ಅವರು ಸರಣಿಯಲ್ಲಿ ಮುಂದುವರಿಯುವ ಬಗ್ಗೆ ಇನ್ನೂ ಅನಿಶ್ಚಿತತೆಯಿದೆ.

 ಬೆಂಗಳೂರಿನಲ್ಲಿ ನಡೆದ ಎರಡನೆ ಟೆಸ್ಟ್‌ನಲ್ಲಿ ಆರಂಭವಾದ ಭಾರತ-ಆಸ್ಟ್ರೇಲಿಯ ತಂಡಗಳ ನಡುವಿನ ಪರಸ್ಪರ ಮೂದಲಿಕೆಯ 3ನೆ ಮೂರನೆ ಟೆಸ್ಟ್‌ನಲ್ಲಿ ಮುಂದುವರಿದಿದೆ. ಬೆಂಗಳೂರು ಟೆಸ್ಟ್‌ನಲ್ಲಿ ಆಸೀಸ್ ನಾಯಕ ಸ್ಮಿತ್ ಡಿಆರ್‌ಎಸ್ ಮೊರೆಹೋಗುವ ಮೊದಲು ಡ್ರೆಸ್ಸಿಂಗ್‌ರೂಮ್‌ನತ್ತ ನೋಡಿರುವುದಕ್ಕೆ ಕೊಹ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ಮಿತ್ ಮೋಸ ಮಾಡಲು ಯತ್ನಿಸಿದ್ದರು ಕೊಹ್ಲಿ ಆರೋಪಿಸಿದ್ದರು. ಕೊಹ್ಲಿಯ ಆರೋಪವನ್ನು ಸ್ಮಿತ್ ಸಂಪೂರ್ಣ ಅಲ್ಲಗಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News