ಭಾರತ-ಆಸ್ಟ್ರೇಲಿಯ ಮೂರನೆ ಟೆಸ್ಟ್ ಡ್ರಾ

Update: 2017-03-20 18:22 GMT

 ರಾಂಚಿ, ಮಾ.20: ಇಲ್ಲಿನ ಜೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯ ತಂಡಗಳ ತೃತೀಯ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.

ಟೆಸ್ಟ್ ಪಂದ್ಯದ ಐದನೇ ಹಾಗೂ ಅಂತಿಮ ದಿನವಾಗಿರುವ ಸೋಮವಾರ ಪೀಟರ್ ಹ್ಯಾಂಡ್ಸ್‌ಕಂಬ್ ಮತ್ತು ಶಾನ್ ಮಾರ್ಷ್ ಹೋರಾಟದ ಫಲವಾಗಿ ಆಸ್ಟ್ರೇಲಿಯ ಸೋಲಿನ ದವಡೆಯಿಂದ ಪಾರಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ದಾಖಲಿಸಿದ್ದ ಭಾರತದ ಚೇತೇಶ್ವರ ಪೂಜಾರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 152 ರನ್‌ಗಳ ಮೇಲುಗೈ ಸಾಧಿಸಿದ್ದ ಭಾರತ ನಾಲ್ಕನೆ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಕ್ಕೆ ಆರಂಭಿಕ ಆಘಾತ ನೀಡಿತ್ತು. ಇದರಿಂದಾಗಿ ಆಸ್ಟ್ರೇಲಿಯ ಆಟ ಕೊನೆಗೊಂಡಾಗ ಎರಡನೆ ಇನಿಂಗ್ಸ್‌ನಲ್ಲಿ 7.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 23 ರನ್ ಗಳಿಸಿತ್ತು. ರೆನ್‌ಶಾ 7 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
 ಇಂದು ಬ್ಯಾಟಿಂಗ್ ಮುಂದುವರಿಸಿದ ರೆನ್‌ಶಾ ಮತ್ತು ಸ್ಟೀವ್ ಸ್ಮಿತ್ ತಂಡದ ಸ್ಕೋರ್‌ನ್ನು 28.4 ಓವರ್‌ಗಳಲ್ಲಿ 59ಕ್ಕೆ ಏರಿಸಿದರು. ರೆನ್‌ಶಾ(15) ಅವರನ್ನು ಎಲ್‌ಬಿಡಬ್ಲು ಬಲೆಗೆ ಕೆಡವಿದ ಇಶಾಂತ್ ಶರ್ಮ ಭಾರತಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು.
ರೆನ್‌ಶಾ 29ನೆ ಓವರ್‌ನಲ್ಲಿ ಇಶಾಂತ್ ಶರ್ಮ ಅವರ ವಿಕೆಟ್ ಕಬಳಿಸಿದರು. ಆ ಓವರ್‌ನ 4 ಎಸೆತಗಳಲ್ಲಿ ರೆನ್‌ಶಾ ತೊಂದರೆ ಎದುರಿಸಿದರು. ಒಂದು ಬಾರಿ ಅವರ ಬ್ಯಾಟ್‌ಗೆ ಬಡಿದ ಚೆಂಡು ಹೆಲ್ಮ್‌ಟ್‌ನ ಒಳನುಗ್ಗಿತು. ಆದರೆ ರೆನ್‌ಶಾ ಅದೃಷ್ಟವಶಾತ್ ಅಪಾಯದಿಂದ ಪಾರಾದರು.
 ನಾಯಕ ಸ್ಟೀವ್ ಸ್ಮಿತ್ 21 ರನ್ ಗಳಿಸಿ ಜಡೇಜ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. 29.1 ಓವರ್‌ಗಳಲ್ಲಿ 63ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯವನ್ನು ಶಾನ್ ಮಾರ್ಷ್ ಮತ್ತು ಹ್ಯಾಂಡ್ಸ್‌ಕಂಬ್ ಜೊತೆಯಾಗಿ ಆಧರಿಸಿದರು.
ಮಾರ್ಷ್ ಮತ್ತು ಹ್ಯಾಂಡ್ಸ್‌ಕಂಬ್ ಕ್ರೀಸ್‌ನಲ್ಲಿ ತಳವೂರಿ ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಐದನೆ ವಿಕೆಟ್‌ಗೆ 124 ರನ್‌ಗಳ ಜೊತೆಯಾಟ ನೀಡಿದರು.ನಾಲ್ಕು ಗಂಟೆಗಳ ಕಾಲ ಇವರು ಕ್ರೀಸ್‌ನಲ್ಲಿ ತಳವೂರಿ ಭಾರತದ ದಾಳಿಯನ್ನು ಪುಡಿಪುಡಿ ಮಾಡಿದರು.
 91.2 ಓವರ್‌ನಲ್ಲಿ ಮಾರ್ಷ್ ಅವರು ಜಡೇಜ ಎಸೆತದಲ್ಲಿ ವಿಜಯ್‌ಗೆ ಕ್ಯಾಚ್ ನೀಡಿದರು. ಮಾರ್ಷ್ ಔಟಾಗುವ ಮೊದಲು 53 ರನ್ ಗಳಿಸಿದರು.
 ಮೊದಲ ಇನಿಂಗ್ಸ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದ್ದ ಮ್ಯಾಕ್ಸ್‌ವೆಲ್ (2) ಬೇಗನೆ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಹ್ಯಾಂಡ್ಸ್‌ಕಂಬ್ ಔಟಾಗದೆ 72 ರನ್ (200ಎ,7ಬೌ) ಮತ್ತು ಮ್ಯಾಥ್ಯೂ ವೇಡ್ ಔಟಾಗದೆ 9 ರನ್ ಗಳಿಸಿದರು.
ಭಾರತದ ಪರ ರವೀಂದ್ರ ಜಡೇಜ 54ಕ್ಕೆ 4 ವಿಕೆಟ್, ಆರ್.ಅಶ್ವಿನ್ 71ಕ್ಕೆ 1 ಮತ್ತು ಇಶಾಂತ್ ಶರ್ಮ 30ಕ್ಕೆ 1 ವಿಕೆಟ್ ಪಡೆದರು.

ಸ್ಕೋರ್ ವಿವರ

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 451 ರನ್‌ಗೆ ಆಲೌಟ್

ಭಾರತ ಪ್ರಥಮ ಇನಿಂಗ್ಸ್: 603/9 ಡಿಕ್ಲೇರ್

ಆಸ್ಟ್ರೇಲಿಯ ಎರಡನೆ ಇನಿಂಗ್ಸ್: 100 ಓವರ್‌ಗಳಲ್ಲಿ 204/6

ವಾರ್ನರ್ ಬಿ ಜಡೇಜ 14

ರೆನ್‌ಶಾ ಎಲ್‌ಬಿಡಬ್ಲು ಇಶಾಂತ್ 15

ಲಿಯೊನ್ ಬಿ ಜಡೇಜ 02

ಸ್ಟೀವ್ ಸ್ಮಿತ್ ಬಿ ಜಡೇಜ 21

ಶಾನ್ ಮಾರ್ಷ್ ಸಿ ವಿಜಯ್ ಬಿ ಜಡೇಜ 53

ಹ್ಯಾಂಡ್ಸ್‌ಕಂಬ್ ಅಜೇಯ 72

ಮ್ಯಾಕ್ಸ್‌ವೆಲ್ ಸಿ ವಿಜಯ್ ಬಿ ಅಶ್ವಿನ್ 02

ಮ್ಯಾಥ್ಯೂ ವೇಡ್ ಅಜೇಯ 09

ಇತರ 16

ವಿಕೆಟ್ ಪತನ: 1-17, 2-23, 3-59, 4-63, 5-187, 6-190.

ಬೌಲಿಂಗ್ ವಿವರ

ಆರ್.ಅಶ್ವಿನ್ 30-10-71-01

ರವೀಂದ್ರ ಜಡೇಜ 44-18-54-04

ಉಮೇಶ್ ಯಾದವ್ 15-02-36-00

ಇಶಾಂತ್ ಶರ್ಮ 11-00-30-01

ಪಂದ್ಯಶ್ರೇಷ್ಠ: ಚೇತೇಶ್ವರ ಪೂಜಾರ.

ಅಂಕಿ-ಅಂಶ

03: ಆಸ್ಟ್ರೇಲಿಯ ತಂಡ ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 150ಕ್ಕೂ ಅಧಿಕ ರನ್ ಹಿನ್ನಡೆ ಅನುಭವಿಸಿದರೂ 3ನೆ ಬಾರಿ ಪಂದ್ಯವನ್ನು ಡ್ರಾಗೊಳಿಸಲು ಯಶಸ್ವಿಯಾಗಿದೆ. ಆಸ್ಟ್ರೇಲಿಯ ಈ ಹಿಂದೆ ದಿಲ್ಲಿ(1979-80) ಹಾಗೂ ಮುಂಬೈನಲ್ಲಿ(1986-87) ಈ ಸಾಧನೆ ಮಾಡಿತ್ತು.

2008: ಭಾರತದಲ್ಲಿ 2008ರಲ್ಲಿ ಪ್ರವಾಸಿ ತಂಡವೊಂದು ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 150ಕ್ಕೂ ಅಧಿಕ ಹಿನ್ನಡೆ ಅನುಭವಿಸಿದ ಬಳಿಕ ಪಂದ್ಯವನ್ನು ಡ್ರಾಗೊಳಿಸಿತ್ತು. 2008ರಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್ ತಂಡ 151 ರನ್ ಹಿನ್ನಡೆ ಕಂಡಿದ್ದರೂ ಪಂದ್ಯವನ್ನು ಡ್ರಾಗೊಳಿಸಲು ಸಮರ್ಥವಾಗಿತ್ತು. 2007ರಲ್ಲಿ ಕೋಲ್ಕತಾದಲ್ಲಿ ಪಾಕಿಸ್ತಾನ ತಂಡ ಮೊದಲ ಇನಿಂಗ್ಸ್‌ನಲ್ಲಿ 160 ರನ್ ಹಿನ್ನಡೆ ಕಂಡಿದ್ದರೂ ಪಂದ್ಯವನ್ನು ಡ್ರಾಗೊಳಿಸಿತ್ತು.

2004: ಆಸ್ಟ್ರೇಲಿಯ ತಂಡ 2004ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ 2ನೆ ಇನಿಂಗ್ಸ್‌ನಲ್ಲಿ 100 ಹಾಗೂ ಅದಕ್ಕಿಂತ ಹೆಚ್ಚು ಓವರ್‌ಗಳ ಪಂದ್ಯ ಆಡಿತ್ತು. ಆ ಬಳಿಕ ಭಾರತದಲ್ಲಿ ಆಡಿರುವ 14 ಪಂದ್ಯಗಳಲ್ಲಿ 11 ಬಾರಿ 2ನೆ ಇನಿಂಗ್ಸ್‌ನಲ್ಲಿ ಆಲೌಟಾಗಿತ್ತು. ರಾಂಚಿ ಟೆಸ್ಟ್‌ನಲ್ಲಿ 2ನೆ ಇನಿಂಗ್ಸ್‌ನಲ್ಲಿ ಬರೋಬ್ಬರಿ 100 ಓವರ್ ಆಡಿರುವ ಆಸೀಸ್ 6 ವಿಕೆಟ್‌ಗಳನ್ನು ಕಳೆದುಕೊಂಡಿದೆ.

 38: ಆಸ್ಟ್ರೇಲಿಯ ತಂಡ ಸತತ 38 ಇನಿಂಗ್ಸ್‌ನ ಬಳಿಕ ಭಾರತದ ವಿರುದ್ಧ 5ನೆ ವಿಕೆಟ್‌ನಲ್ಲಿ ಶತಕದ ಜೊತೆಯಾಟ ನಡೆಸಿದೆ. ಹ್ಯಾಂಡ್ಸ್‌ಕಂಬ್-ಶಾನ್ ಮಾರ್ಷ್ 109 ರನ್ ಸೇರಿಸಿ 5ನೆ ವಿಕೆಟ್‌ನಲ್ಲಿ ಆಸೀಸ್‌ನ ಶತಕದ ಜೊತೆಯಾಟದ ಬರ ನೀಗಿಸಿದ್ದಾರೆ. 2014-15ರಲ್ಲಿ ಸಿಡ್ನಿಯಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಜೋ ಬನ್ಸ್ ಹಾಗೂ ಶಾನ್ ಮಾರ್ಷ್ 5ನೆ ವಿಕೆಟ್‌ನಲ್ಲಿ ಶತಕದ ಜೊತೆಯಾಟ ನಡೆಸಿದ್ದರು.

78: ಆರ್.ಅಶ್ವಿನ್ 2016-17ನೆ ಋತುವಿನಲ್ಲಿ ಒಟ್ಟು 78 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ದಕ್ಷಿಣ ಆಫ್ರಿಕದ ಡೇಲ್ ಸ್ಟೇಯ್ನಿ ದಾಖಲೆ ಸರಿಗಟ್ಟಿದ್ದಾರೆ. ರವೀಂದ್ರ ಜಡೇಜ ಈ ಋತುವಿನಲ್ಲಿ ಗರಿಷ್ಠ ವಿಕೆಟ್‌ಗಳನ್ನು (67) ಕಬಳಿಸಿದ 2ನೆ ಬೌಲರ್ ಆಗಿದ್ದಾರೆ. ಅಶ್ವಿನ್-ಜಡೇಜ ಮುಂದಿನ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಿಸಲು ಎದುರು ನೋಡುತ್ತಿದ್ದಾರೆ.

9/178: ಜಡೇಜ ಆಸ್ಟ್ರೇಲಿಯ ವಿರುದ್ಧದ 3ನೆ ಟೆಸ್ಟ್‌ನಲ್ಲಿ 178 ರನ್‌ಗೆ ಒಟ್ಟು 9 ವಿಕೆಟ್‌ಗಳನ್ನು ಉರುಳಿಸಿದ್ದು, ಇದು ಅವರ ದ್ವಿತೀಯ ಶ್ರೇಷ್ಠ ಪ್ರದರ್ಶನವಾಗಿದೆ. ತನ್ನ 29 ಟೆಸ್ಟ್ ಪಂದ್ಯಗಳಲ್ಲಿ ಮೊದಲ ಬಾರಿ ಗರಿಷ್ಠ ಓವರ್(93.3) ಬೌಲಿಂಗ್ ಮಾಡಿದ್ದಾರೆ. ರಾಂಚಿ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 124ರನ್‌ಗೆ 5 ವಿಕೆಟ್ ಹಾಗೂ 2ನೆ ಇನಿಂಗ್ಸ್‌ನಲ್ಲಿ 54 ರನ್‌ಗೆ 4 ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News