ತಮಿಳುನಾಡಿಗೆ ವಿಜಯ್ ಹಝಾರೆ ಟ್ರೋಫಿ

Update: 2017-03-20 18:08 GMT

ಹೊಸದಿಲ್ಲಿ, ಮಾ.20: ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಸಿಡಿಸಿದ ಆಕರ್ಷಕ ಶತಕ(112 ರನ್, 120 ಎಸೆತ) ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ಬೆಂಬಲದಿಂದ ತಮಿಳುನಾಡು ತಂಡ ಬಂಗಾಳ ತಂಡವನ್ನು 37 ರನ್‌ಗಳ ಅಂತರದಿಂದ ಸೋಲಿಸಿ ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮೂರನೆ ಬಾರಿ ತಮಿಳುನಾಡು ತಂಡ ಬಂಗಾಳ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಹಿಂದೆ 2008-09 ಹಾಗೂ 2009-10ರಲ್ಲಿ ಬಂಗಾಳವನ್ನು ಸೋಲಿಸಿತ್ತು.

 ಸೋಮವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು ತಂಡದ ಪರ ಕಾರ್ತಿಕ್ ಶತಕದ ಕೊಡುಗೆ(112 ರನ್, 120 ಎಸೆತ. 14 ಬೌಂಡರಿ) ನೀಡಿದರು. ಕಾರ್ತಿಕ್ ಏಕಾಂಗಿ ಹೋರಾಟದ ಹೊರತಾಗಿಯೂ ತಮಿಳುನಾಡು 47.2 ಓವರ್‌ಗಳಲ್ಲಿ 217 ರನ್‌ಗೆ ಆಲೌಟಾಗಿದೆ. ಮುಹಮ್ಮದ್ ಶಮಿ(4-26) ಹಾಗೂ ಅಶೋಕ್ ದಿಂಡ(3-36) ತಮಿಳುನಾಡಿನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃತಿಗೆಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕಾರ್ತಿಕ್ ಅವರು ಆಮಿರ್ ಗನಿ(0/40, 10 ಓವರ್) ಹಾಗೂ ಪ್ರಗ್ಯಾನ್ ಓಜಾ(0/49, 10 ಓವರ್) ಅವರ 20 ಓವರ್‌ಗಳ ಬೌಲಿಂಗ್‌ನಲ್ಲಿ 91 ರನ್ ಕಲೆಹಾಕಿದ ಕಾರ್ತಿಕ್ ತಮಿಳುನಾಡು ಪರ ನಿರ್ಣಾಯಕ ಸ್ಕೋರ್ ದಾಖಲಿಸಿದರು.

ಬಂಗಾಳ 180 ರನ್‌ಗೆ ಆಲೌಟ್: ಗೆಲ್ಲಲು 218 ರನ್ ಗುರಿ ಪಡೆದಿದ್ದ ಬಂಗಾಳದ ಬ್ಯಾಟ್ಸ್‌ಮನ್‌ಗಳು ತಮಿಳುನಾಡಿನ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿ ಕೇವಲ 180 ರನ್‌ಗೆ ಸರ್ವಪತನಗೊಂಡರು. ಆಫ್-ಸ್ಪಿನ್ನರ್ ವಾಷಿಂಗ್ಟನ್ ಸುಂದರ್(0/17) ವಿಕೆಟ್ ಪಡೆಯಲು ವಿಫಲರಾದರು ತನ್ನ 8 ಓವರ್‌ಗಳ ಸ್ಪೆಲ್‌ನಲ್ಲಿ ಬಂಗಾಳದ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸದಂತೆ ಕಡಿವಾಣ ಹಾಕಿದರು.

ರಾಹಿಲ್ ಶಾ(2-38), ಅಶ್ವಿನ್ ಕ್ರಿಸ್ಟ್(2-23)ಹಾಗೂ ಎಂ.ಮುಹಮ್ಮದ್(2-30) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ತಮಿಳುನಾಡಿಗೆ 37 ರನ್ ಗೆಲುವು ತಂದರು.

ಬಂಗಾಳದ ನಾಯಕ ಮನೋಜ್ ತಿವಾರಿ(32) ತಮಿಳುನಾಡು ತಂಡದ ನಾಯಕ ವಿಜಯ್ ಶಂಕರ್‌ಗೆ(1-20)ವಿಕೆಟ್ ಒಪ್ಪಿಸಿದರು. ಬಂಗಾಳ ಒಂದು ಹಂತದಲ್ಲಿ 68 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆಗ 5ನೆ ವಿಕೆಟ್‌ಗೆ 65 ರನ್ ಜೊತೆಯಾಟ ನಡೆಸಿದ ಸುದೀಪ್ ಚಟರ್ಜಿ(58 ರನ್, 79 ಎಸೆತ, 5 ಬೌಂಡರಿ) ಹಾಗೂ ಅನುಶ್‌ತುಪ್ ಮಜುಂದಾರ್(24 ರನ್, 30 ಎಸೆತ,2 ಬೌಂಡರಿ) ತಂಡವನ್ನು ಆಧರಿಸಿದರು. ಆದರೆ ಈ ಜೋಡಿಯನ್ನು ಅಪರಾಜಿತ್(1-22) ಬೇರ್ಪಡಿಸಿದರು. ಅಗ್ರ ಸ್ಕೋರರ್ ಚಟರ್ಜಿ ಎಡಗೈ ಸ್ಪಿನ್ನರ್ ಸಾಯಿ ಕಿಶೋರ್‌ಗೆ ವಿಕೆಟ್ ಒಪ್ಪಿಸಿದ ಬಳಿಕ ಬಂಗಾಳದ ಗೆಲುವಿನ ಕನಸು ಕಮರಿಹೋಯಿತು.

ಸಂಕ್ಷಿಪ್ತ ಸ್ಕೋರ್

ತಮಿಳುನಾಡು: 47.2 ಓವರ್‌ಗಳಲ್ಲಿ 217 ರನ್‌ಗೆ ಆಲೌಟ್

(ದಿನೇಶ್ ಕಾರ್ತಿಕ್ 112, ಇಂದ್ರಜಿತ್ 32, ಮುಹಮ್ಮದ್ ಶಮಿ 4-26, ಅಶೋಕ್ ದಿಂಡ 3-36)

ಬಂಗಾಳ: 45.5 ಓವರ್‌ಗಳಲ್ಲಿ 180 ರನ್‌ಗೆ ಆಲೌಟ್

(ಸುದೀಪ್ ಚಟರ್ಜಿ 58, ಮನೋಜ್ ತಿವಾರಿ 32, ಅಶ್ವಿನ್ ಕ್ರಿಸ್ಟ್ 2-23, ಮುಹಮ್ಮದ್ 2-30, ಶಾ 2-38)

ಪಂದ್ಯಶ್ರೇಷ್ಠ: ದಿನೇಶ್ ಕಾರ್ತಿಕ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News