ಐದನೆ ಬಾರಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಗೆದ್ದ ಫೆಡರರ್

Update: 2017-03-20 18:14 GMT

 ಇಂಡಿಯನ್ ವೆಲ್ಸ್, ಮಾ.20: ಸ್ಟಾನಿಸ್ಲಾಸ್ ವಾವ್ರಿಂಕರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ರೋಜರ್ ಫೆಡರರ್ ಐದನೆ ಬಾರಿ ಎಟಿಪಿ ಇಂಡಿಯನ್ ವೆಲ್ಸ್ ಮಾಸ್ಟರ್ಸ್‌ ಪ್ರಶಸ್ತಿಯನ್ನು ಜಯಿಸಿ ಸರ್ಬಿಯದ ನೊವಾಕ್ ಜೊಕೊವಿಕ್ ದಾಖಲೆ ಸರಿಗಟ್ಟಿದರು.

ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸ್ವಿಸ್ ಸೂಪರ್ ಸ್ಟಾರ್ ಫೆಡರರ್ ಅವರು ತಮ್ಮದೇ ದೇಶದ ವಾವ್ರಿಂಕರನ್ನು 6-4, 7-5 ನೇರ ಸೆಟ್‌ಗಳಿಂದ ಮಣಿಸಿದರು.

ಕಳೆದ ವರ್ಷ ಮಂಡಿನೋವಿನಿಂದಾಗಿ ಆರು ತಿಂಗಳ ಕಾಲ ಸಕ್ರಿಯ ಟೆನಿಸ್‌ನಿಂದ ದೂರ ಉಳಿದಿದ್ದ ಫೆಡರರ್ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ 18ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಟೆನಿಸ್ ಅಂಗಣಕ್ಕೆ ವಾಪಸಾಗಿದ್ದರು.

 ಐದನೆ ಬಾರಿ ಇಂಡಿಯನ್ ವೆಲ್ಸ್ಸ್ ಪ್ರಶಸ್ತಿಯನ್ನು ಜಯಿಸಿರುವ ಫೆಡರರ್ ಅವರು ಜೊಕೊವಿಕ್ ದಾಖಲೆಯನ್ನು ಸರಿಗಟ್ಟಿದರು. ಫೆಡರರ್ ಈ ಹಿಂದೆ 2004, 2005, 2006 ಹಾಗೂ 2012ರಲ್ಲಿ ಇಂಡಿಯನ್ ವೇಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. 35ರ ಹರೆಯದ ಫೆಡರರ್ ಎಲೈಟ್ ಮಾಸ್ಟರ್ಸ್‌ ಪ್ರಶಸ್ತಿಯನ್ನು ಜಯಿಸಿರುವ ವಿಶ್ವದ ಹಿರಿಯ ಟೆನಿಸ್‌ಪಟು ಎನಿಸಿಕೊಂಡಿದ್ದಾರೆ. 2004ರಲ್ಲಿ ಆ್ಯಂಡ್ರೆ ಅಗಾಸ್ಸಿ ತನ್ನ 34ನೆ ವಯಸ್ಸಿನಲ್ಲಿ ಸಿನ್ಸಿನಾಟಿ ಪ್ರಶಸ್ತಿಯನ್ನು ಜಯಿಸಿದ್ದರು.

  ‘‘ನಾನು ಈವರ್ಷ ಉತ್ತಮ ಆರಂಭ ಪಡೆದಿದ್ದೇನೆ. ಕಳೆದ ವರ್ಷ ನಾನು ಯಾವುದೇ ಪ್ರಶಸ್ತಿಯನ್ನು ಜಯಿಸಿರಲಿಲ್ಲ. ನಾನು ಈ ಟೂರ್ನಿಯಲ್ಲಿ ಫೈನಲ್‌ಗೆ ತಲುಪುತ್ತೇನೆಂದು ಯೋಚಿಸಿರಲಿಲ್ಲ. ನಾಟಕೀಯವಾಗಿ ನಾನು ಫೈನಲ್‌ಗೆ ತಲುಪಿದ್ದು, ಪ್ರಶಸ್ತಿಯನ್ನು ಜಯಿಸಿದ್ದೇನೆ’’ ಫೆಡರರ್ ಪ್ರತಿಕ್ರಿಯಿಸಿದ್ದಾರೆ.

ಫೆಡರರ್ ಅವರು ವಾವ್ರಿಂಕ ವಿರುದ್ಧ ಆಡಿರುವ 22 ಪಂದ್ಯಗಳ ಪೈಕಿ 19ರಲ್ಲಿ ಜಯ ಸಾಧಿಸಿದ್ದಾರೆ. ಇದರಲ್ಲಿ ಆಸ್ಟ್ರೇಲಿಯನ್ ಓಪನ್‌ನ ಸೆಮಿ ಫೈನಲ್ ಪಂದ್ಯವೂ ಸೇರಿದೆ.

ಎಟಿಪಿ ರ್ಯಾಂಕಿಂಗ್: ಆರನೆ ಸ್ಥಾನಕ್ಕೇರಿದ ಫೆಡರರ್

ಪ್ಯಾರಿಸ್, ಮಾ.20: ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ರೋಜರ್ ಫೆಡರರ್ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ರ್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನ ಭಡ್ತಿ ಪಡೆದು 6ನೆ ಸ್ಥಾನಕ್ಕೆ ಏರಿದ್ದಾರೆ.

ಐದನೆ ಬಾರಿ ಇಂಡಿಯನ್ಸ್ ವೆಲ್ಸ್ ಪ್ರಶಸ್ತಿಯನ್ನು ಜಯಿಸಿರುವ ಫೆಡರರ್ ಫೈನಲ್‌ಗೆ ತಲುಪುವ ಮೊದಲು ನಾಲ್ಕನೆ ಸುತ್ತಿನಲ್ಲಿ ರಫೆಲ್ ನಡಾಲ್‌ರನ್ನು ಮಣಿಸಿದ್ದರು. ಫೈನಲ್‌ನಲ್ಲಿ ಸ್ವಿಸ್‌ನ ಸ್ಟಾನ್ ವಾವ್ರಿಂಕರನ್ನು ಸೋಲಿಸಿದ್ದರು.

ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಎರಡನೆ ಸುತ್ತಿನಲ್ಲಿ ಸೋತ ಹೊರತಾಗಿಯೂ ಆ್ಯಂಡಿ ಮರ್ರೆ ಎಟಿಪಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.

ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಬೇಗನೆ ನಿರ್ಗಮಿಸಿದ್ದ ನೊವಾಕ್ ಜೊಕೊವಿಕ್ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದಾರೆ. ವಾವ್ರಿಂಕ ಮೂರನೆ ಸ್ಥಾನದಲ್ಲಿದ್ದಾರೆ.

ಎಟಿಪಿ ರ್ಯಾಂಕಿಂಗ್

1. ಆ್ಯಂಡಿ ಮರ್ರೆ(ಗ್ರೇಟ್ ಬ್ರಿಟನ್)

2. ನೊವಾಕ್ ಜೊಕೊವಿಕ್(ಸೆರ್ಬಿಯ)

3. ಸ್ಟಾನ್ ವಾವ್ರಿಂಕ(ಸ್ವಿಟ್ಜರ್‌ಲ್ಯಾಂಡ್)

4. ಕೀ ನಿಶಿಕೊರಿ(ಜಪಾನ್)

5. ಮಿಲಾಸ್ ರಾವೊನಿಕ್(ಕೆನಡಾ)

6. ರೋಜರ್ ಫೆಡರರ್(ಸಿಟ್ಜರ್‌ಲ್ಯಾಂಡ್)

7.ರಫೆಲ್ ನಡಾಲ್(ಸ್ಪೇನ್)

8. ಡೊಮಿನಿಕ್ ಥೀಮ್(ಆಸ್ಟ್ರೀಯ)

9. ಮರಿನ್ ಸಿಲಿಕ್(ಕ್ರೊಯೆಷಿಯ)

10. ಜೋ-ವಿಲ್ಫ್ರೆಡ್ ಸೋಂಗ(ಫ್ರಾನ್ಸ್)

ವೆಸ್ನಿನಾಗೆ ಮಹಿಳೆಯರ ಸಿಂಗಲ್ಸ್ ಕಿರೀಟ

ಇಂಡಿಯನ್ ವೆಲ್ಸ್, ಮಾ.20: ರಶ್ಯದ ಎಲೆನಾ ವೆಸ್ನಿನಾ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇಲ್ಲಿ ರವಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ವೆಸ್ನಿನಾ ತಮ್ಮದೇ ದೇಶದ ಸ್ವೆತ್ಲಾನಾ ಕುಝ್ನೆಸೋವಾರನ್ನು 6-7(6/8), 7-5, 6-4 ಸೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.

ಮೂರು ಗಂಟೆ, 1 ನಿಮಿಷಗಳ ಕಾಲ ನಡೆದ ಫೈನಲ್ ಹಣಾಹಣಿಯಲ್ಲಿ ವಿಶ್ವದ ನಂ.15ನೆ ಆಟಗಾರ್ತಿ ವೆಸ್ನಿನಾ ಎರಡು ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್, 8ನೆ ರ್ಯಾಂಕಿನ ಕುಝ್ನೆಸೋವಾರನ್ನು ಮಣಿಸಿ ಗಮನ ಸೆಳೆದರು.

 ಕಳೆದ ವರ್ಷ ಇಂಡಿಯನ್ ವೆಲ್ಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಮುಗ್ಗರಿಸಿದ್ದ 30ರ ಹರೆಯದ ವೆಸ್ನಿನಾ ಈ ವರ್ಷ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್‌ಗೆ ತಲುಪುವ ಮೊದಲು ವಿಶ್ವದ ನಂ.1 ಆಟಗಾರ್ತಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಹಾಗೂ ಏಳು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವೀನಸ್ ವಿಲಿಯಮ್ಸ್‌ರನ್ನು ಸದೆಬಡಿದಿದ್ದರು.

ಕುಝ್ನೆಸೋವಾ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಮೂರನೆ ಬಾರಿ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಹಿಂದೆ 2007 ಹಾಗೂ 2008ರಲ್ಲಿ ಸತತ ಎರಡು ವರ್ಷ ಫೈನಲ್‌ಗೆ ತಲುಪಿದ್ದರೂ ರನ್ನರ್ಸ್‌-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು.

ಡಬ್ಲುಟಿಎ ರ್ಯಾಂಕಿಂಗ್: ಕೆರ್ಬರ್ ನಂ.1

ಪ್ಯಾರಿಸ್, ಮಾ.20: ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ನಾಲ್ಕನೆ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರೂ ಸೋಮವಾರ ಇಲ್ಲಿ ಬಿಡುಗಡೆಯಾಗಿರುವ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿಯಾಗಿ ಆಡಿದ್ದ 29ರ ಹರೆಯದ ಕೆರ್ಬರ್ ಅವರು ಸೆರೆನಾ ವಿಲಿಯಮ್ಸ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ನಡೆದಿದ್ದ ಕಾರಣ ನಂ.1 ಸ್ಥಾನಕ್ಕೇರಿದ್ದಾರೆ.

ಕೆರ್ಬರ್‌ರನ್ನು ನಾಲ್ಕನೆ ಸುತ್ತಿನಲ್ಲಿ ಸೋಲಿಸಿದ್ದ ರಶ್ಯದ ಎಲೆನಾ ವೆಸ್ನಿನಾ ಜೀವನಶ್ರೇಷ್ಠ 13ನೆ ರ್ಯಾಂಕಿಗೆ ತಲುಪಿದ್ದಾರೆ.

ಡಬ್ಲುಟಿಎ ರ್ಯಾಂಕಿಂಗ್: 1. ಆ್ಯಂಜೆಲಿಕ್ ಕೆರ್ಬರ್(ಜರ್ಮನಿ), ಸೆರೆನಾ ವಿಲಿಯಮ್ಸ್(ಅಮೆರಿಕ), 3.ಕ್ಯಾರೊಲಿನಾ ಪ್ಲಿಸ್ಕೋವಾ(ಝೆಕ್), 4. ಡೊಮಿನಿಕಾ ಸಿಬುಲ್ಕೋವಾ(ಸ್ಲೋವಾಕಿಯ), 5. ಸಿಮೊನಾ ಹಾಲೆಪ್(ರೊಮಾನಿಯ), 6.ಗಾರ್ಬೈನ್ ಮುಗುರುಝ(ಸ್ಪೇನ್), 7. ಸ್ವೆತ್ಲಾನಾ ಕುಝ್ನೆಸೋವಾ(ರಶ್ಯ), 8. ಅಗ್ನೆಸ್ಕಾ ರಾಂಡ್ವಾಂಸ್ಕಾ(ಪೊಲೆಂಡ್), 9. ಮ್ಯಾಡಿಸನ್ ಕೀ(ಅಮೆರಿಕ), 10.ಎಲಿನಾ ಸ್ವಿಟೊಲಿನಾ(ಉಕ್ರೇನ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News