ಇಶಾಂತ್-ರೆನ್‌ಶಾ ಮಾತಿನ ಚಕಮಕಿ

Update: 2017-03-20 18:17 GMT

ರಾಂಚಿ, ಮಾ.20: ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಇಲ್ಲಿ ಸೋಮವಾರ ಕೊನೆಗೊಂಡ ಮೂರನೆ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡದ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಭಾರತದ ವೇಗದ ಬೌಲರ್ ಇಶಾಂತ್ ಶರ್ಮ ಹಾಗೂ ಆಸೀಸ್‌ನ ಯುವ ಆರಂಭಿಕ ಆಟಗಾರ ರೆನ್‌ಶಾ ವಾಗ್ಯುದ್ಧ ನಡೆಸಿದರು. ಇನಿಂಗ್ಸ್‌ನ 29ನೆ ಓವರ್‌ನಲ್ಲಿ ಇಶಾಂತ್ ಆಸೀಸ್‌ನ ಎಡಗೈ ಬ್ಯಾಟ್ಸ್‌ಮನ್ ರೆನ್‌ಶಾ ಅವರೊಂದಿಗೆ ವಾಗ್ವಾದ ನಡೆಸಿದರು. ಅದೇ ಓವರ್‌ನ 4ನೆ ಎಸೆತದಲ್ಲಿ ರೆನ್‌ಶಾರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿ ಸೇಡು ತೀರಿಸಿಕೊಂಡರು.

ಇಶಾಂತ್ ಬೌಲಿಂಗ್ ಮಾಡಲು ಅಣಿಯಾಗುತ್ತಿದ್ದಾಗ ಸೈಟ್-ಸ್ಕ್ರೀೀನ್‌ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ರೆನ್‌ಶಾ ಕ್ರೀಸ್ ಬಿಟ್ಟು ಹೋದರು. ಇದರಿಂದ ಇಶಾಂತ್ ಕೆರಳಿ ಕೆಂಡವಾದರು. ರೆನ್‌ಶಾರೊಂದಿಗೆ ಈ ವಿಷಯಕ್ಕ ಸಂಬಂಧಿಸಿ ವಾಕ್ಸಮರ ನಡೆಸಿದರು. ಆಸೀಸ್ ನಾಯಕ ಸ್ಟೀವ್ ಸ್ಮಿತ್ ಹಾಗೂ ಭಾರತದ ನಾಯಕ ವಿರಾಟ್ ಕೊಹ್ಲಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕೆಲವು ನಿಮಿಷದ ಬಳಿಕ ಇಶಾಂತ್ ಬೌಲಿಂಗ್ ಮುಂದುವರಿಸಿದರು. ಇಶಾಂತ್ ಎಸೆದ 28ನೆ ಓವರ್‌ನ ಎರಡನೆ ಎಸೆತ ರೆನ್‌ಶಾ ಹೆಲ್ಮೆಟ್ ಗ್ರಿಲ್‌ನೊಳಗೆ ನುಸುಳಿತು. ಅದೃಷ್ಟವಶಾತ್ ರೆನ್‌ಶಾ ಮುಖಕ್ಕೆ ಯಾವುದೇ ಗಾಯವಾಗಲಿಲ್ಲ. 28ನೆ ಓವರ್‌ನ ಮೂರನೆ ಎಸೆತದಲ್ಲಿ ಇಶಾಂತ್ ಅವರು ರೆನ್‌ಶಾರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ರೆನ್‌ಶಾ ಔಟಾದ ಬಳಿಕ ಇಶಾಂತ್ ಪಂದ್ಯ ಗೆದ್ದಷ್ಟೇ ಸಂಭ್ರಮಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News