ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರ ಸ್ಥಾನಕ್ಕೇರಿದ ಜಡೇಜ, ಪೂಜಾರಗೆ ಭಡ್ತಿ

Update: 2017-03-21 17:53 GMT

ಹೊಸದಿಲ್ಲಿ, ಮಾ.21: ಭಾರತದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಸಹ ಆಟಗಾರ ಆರ್.ಅಶ್ವಿನ್‌ರನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನಕ್ಕೆ ಭಡ್ತಿ ಪಡೆದಿರುವ ಚೇತೇಶ್ವರ ಪೂಜಾರ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ರಾಂಚಿಯಲ್ಲಿ ಸೋಮವಾರ ಡ್ರಾನಲ್ಲಿ ಕೊನೆಗೊಂಡ ಮೂರನೆ ಟೆಸ್ಟ್ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನ ಕಬಳಿಸಿದ್ದ ಜಡೇಜ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಜಡೇಜ 124 ರನ್‌ಗೆ 5 ಹಾಗೂ 52 ರನ್‌ಗೆ 4 ವಿಕೆಟ್ ಕಬಳಿಸಿದ್ದ ಜಡೇಜ ಒಟ್ಟು 899 ಅಂಕ ಸಂಪಾದಿಸಿದರು.

892 ಅಂಕಗಳೊಂದಿಗೆ ಅಶ್ವಿನ್‌ರೊಂದಿಗೆ ನಂ.1 ಸ್ಥಾನ ಹಂಚಿಕೊಂಡಿದ್ದ ಜಡೇಜ ಇದೀಗ ಅಗ್ರ ಸ್ಥಾನಕ್ಕೆ ಏರಿದ್ದಾರೆ. ಅಶ್ವಿನ್ ಹಾಗೂ ಬಿಷನ್ ಸಿಂಗ್ ಬೇಡಿಯ ಬಳಿಕ ನಂ.1 ಸ್ಥಾನಕ್ಕೇರಿದ ಭಾರತದ ಮೂರನೆ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ರಾಂಚಿ ಟೆಸ್ಟ್‌ನಲ್ಲಿ 202 ರನ್ ಗಳಿಸಿದ್ದ ಸೌರಾಷ್ಟ್ರದ ಬ್ಯಾಟ್ಸ್‌ಮನ್ ಪೂಜಾರ 661 ಅಂಕದೊಂದಿಗೆ ನಾಲ್ಕು ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ ದ್ವಿತೀಯ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಪೂಜಾರ ನ್ಯೂಝಿಲೆಂಡ್‌ನ ನಾಯಕ ಕೇನ್ ವಿಲಿಯಮ್ಸ್‌ರನ್ನು ಐದನೆ ಸ್ಥಾನಕ್ಕೆ ತಳ್ಳಿ ನಂ.2ನೆ ಸ್ಥಾನಕ್ಕೇರಿದ್ದಾರೆ.

ನಂ.1 ಸ್ಥಾನದಲ್ಲಿ ಮುಂದುವರಿದಿರುವ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಜೀವನಶ್ರೇಷ್ಠ 941 ಅಂಕ ಗಳಿಸಿದ್ದಾರೆ. ಸ್ಮಿತ್ ಮೂರನೆ ಟೆಸ್ಟ್‌ನಲ್ಲಿ ಅಜೇಯ 178 ಹಾಗೂ 21 ರನ್ ಗಳಿಸಿದ್ದರು.

 ಇದೇ ವೇಳೆ ಐಸಿಸಿ ಟೆಸ್ಟ್ ಟೀಮ್ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನಕ್ಕಾಗಿ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಎಪ್ರಿಲ್ 1ಕ್ಕೆ ಮೊದಲು ಯಾವ ತಂಡ 2ನೆ ಸ್ಥಾನಕ್ಕೇರಲಿದೆ ಎಂಬ ಕುತೂಹಲ ಮನೆಮಾಡಿದೆ. ನಂ.1 ಸ್ಥಾನದಲ್ಲಿರುವ ಭಾರತ ಈಗಾಗಲೇ ಐಸಿಸಿಯಿಂದ ಕೊಡಮಾಡುವ 1 ಮಿಲಿಯನ್ ಡಾಲರ್ ನಗದು ಬಹುಮಾನವನ್ನು ದೃಢಪಡಿಸಿದೆ. ಆಸ್ಟ್ರೇಲಿಯ ಎರಡನೆ ಸ್ಥಾನ ಗಳಿಸಿದರೆ 500,000 ಡಾಲರ್ ಬಹುಮಾನ ಪಡೆಯಲಿದೆ. ಧರ್ಮಶಾಲಾದಲ್ಲಿ ಭಾರತ ವಿರುದ್ಧದ ನಾಲ್ಕನೆ ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಆಸೀಸ್ 2ನೆ ಸ್ಥಾನ ಗಳಿಸಲಿದೆ.

ಒಂದು ವೇಳೆ ಆಸ್ಟ್ರೇಲಿಯ ತಂಡ ಭಾರತ ವಿರುದ್ಧ ಪಂದ್ಯವನ್ನು ಸೋತ ಬಳಿಕ ದಕ್ಷಿಣ ಆಫ್ರಿಕ ತಂಡ ನ್ಯೂಝಿಲೆಂಡ್ ವಿರುದ್ಧದ ಪಂದ್ಯವನ್ನು ಡ್ರಾ ಸಾಧಿಸಿದರೆ 2ನೆ ಸ್ಥಾನ ಪಡೆಯಲು ಅರ್ಹತೆ ಪಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News