ದೇವಧರ್ ಟ್ರೋಫಿ :ಧೋನಿ, ಯುವಿಗೆ ವಿಶ್ರಾಂತಿ, ಹರ್ಭಜನ್ ವಾಪಸ್

Update: 2017-03-21 17:55 GMT

 ಹೊಸದಿಲ್ಲಿ, ಮಾ.21: ಮುಂಬರುವ ದೇವಧರ್ ಟ್ರೋಫಿ ಟೂರ್ನಮೆಂಟ್‌ಗೆ ರೋಹಿತ್ ಶರ್ಮ ಹಾಗೂ ಪಾರ್ಥಿವ್ ಪಟೇಲ್ ಕ್ರಮವಾಗಿ ಇಂಡಿಯಾ ‘ಬ್ಲೂ’ ಹಾಗೂ ‘ರೆಡ್’ ತಂಡಗಳ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿಯಲ್ಲಿ ಚಾಂಪಿಯನ್ ಆಗಿರುವ ತಮಿಳುನಾಡು ಟೂರ್ನಮೆಂಟ್‌ನಲ್ಲಿ ಮೂರನೆ ತಂಡವಾಗಿ ಸ್ಪರ್ಧಿಸಲಿದೆ. ವಿಜಯ್ ಹಝಾರೆ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಹಿರಿಯ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡಕ್ಕೆ ವಾಪಸಾಗಿದ್ದಾರೆ.

ಹಿರಿಯ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್‌ಗೆ ವಿಶ್ರಾಂತಿ ನೀಡಲಾಗಿದೆ. ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯು 28 ಸದಸ್ಯರನ್ನು ಒಳಗೊಂಡ ಎರಡು ತಂಡಗಳನ್ನು ಪ್ರಕಟಿಸಿದ್ದು, ಸುರೇಶ್ ರೈನಾಗೆ ಅವಕಾಶ ನೀಡದೇ ಅಚ್ಚರಿಗೊಳಿಸಿದೆ. ತಂಡದಿಂದ ಕಡೆಗಣಿಸಲ್ಪಟ್ಟಿರುವ ರೈನಾ ಅವರ 50 ಓವರ್ ಪಂದ್ಯದಲ್ಲಿನ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.

ಮೂವರು ವಿಕೆಟ್‌ಕೀಪರ್‌ಗಳಾದ ಪಾರ್ಥಿವ್(ರೆಡ್ ತಂಡ), ರಿಷಬ್ ಪಂತ್(‘ಬ್ಲೂ’) ಹಾಗೂ ದಿನೇಶ್ ಕಾರ್ತಿಕ್(ತಮಿಳುನಾಡು) ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಇಶಾನ್ ಕಿಶನ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಹರ್ಭಜನ್ ಸಿಂಗ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಝಾರೆ ಟ್ರೋಫಿಯಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದರು. ವಿಜಯ್ ಹಝಾರೆ ಟ್ರೋಫಿಯಲ್ಲಿ ಎಲ್ಲ ಆರು ಪಂದ್ಯಗಳಲ್ಲಿ ಆಡಿದ್ದರು. ಪ್ರತಿ ಓವರ್‌ಗೆ 4 ರನ್ ನೀಡಿದ್ದ ಅವರು ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ್ದರು.

ದೇವಧರ್ ಟ್ರೋಫಿ ಟೂರ್ನಿಗೆ ಆಯ್ಕೆಯಾಗಿರುವ ಹರ್ಭಜನ್ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಮೊದಲು ಶಿಖರ್ ಧವನ್, ಅಂಬಟಿ ರಾಯುಡು, ಮನೀಷ್ ರಾಯುಡು ದೇವಧರ್ ಟ್ರೋಫಿ ಕೊನೆಯ ಏಕದಿನ ಟೂರ್ನಿಯಾಗಿದೆ. ಈ ಮೂವರು ಆಟಗಾರರು ಟೀಮ್ ಇಂಡಿಯಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ.

ವಿಜಯ್ ಹಝಾರೆ ಟ್ರೋಫಿ ಫೈನಲ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದ ವೇಗದ ಬೌಲರ್ ಮುಹಮ್ಮದ್ ಶಮಿ ತಂಡಕ್ಕೆ ಆಯ್ಕೆಯಾಗಿಲ್ಲ. ಶಮಿ ಧರ್ಮಶಾಲಾದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧ ಕೊನೆಯ ಹಾಗೂ 4ನೆ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

ಕಳೆದ ತಿಂಗಳು ಸಕ್ರಿಯ ಕ್ರಿಕೆಟ್‌ಗೆ ಮರಳಿದ್ದ ರೋಹಿತ್ ಶರ್ಮ ‘ಬ್ಲೂ’ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. 2016ರ ಅಕ್ಟೋಬರ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಕೊನೆಯ ಬಾರಿ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಕೆಲವು ಸಮಯದಿಂದ ಕಳಪೆ ಫಾರ್ಮ್‌ನಲ್ಲಿರುವ ಧವನ್ ರೆಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ದೇಶೀಯ ಟೂರ್ನಮೆಂಟ್‌ನಲ್ಲಿ ಆಡಿರುವ ಆಟಗಾರರನ್ನು ದೇವಧರ್ ಟ್ರೋಫಿಯಲ್ಲಿ ಆಯ್ಕೆ ಮಾಡಲಾಗಿದ್ದು, ಶ್ರೇಯಸ್ ಐಯ್ಯರ್, ಮನ್‌ದೀಪ್ ಸಿಂಗ್, ಅಂಬಟಿ ರಾಯುಡು, ಮನೋಜ್ ತಿವಾರಿ ತಂಡದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಸಹೋದರ ಕ್ರನಾಲ್ ಪಾಂಡ್ಯ, ಪಂಜಾಬ್ ಕ್ರಿಕೆಟಿಗ ಗುರುಕೀರತ್ ಸಿಂಗ್ ಮಾನ್ ವಿಜಯ್ ಹಝಾರೆಯಲ್ಲಿ ತೋರಿರುವ ಉತ್ತಮ ಪ್ರದರ್ಶನ ಆಧಾರದಲ್ಲಿ ದೇವಧರ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಆಯ್ಕೆಗಾರರ ಮನಗೆಲ್ಲಲು ಯಶಸ್ವಿಯಾಗಿದ್ದಾರೆ. ದೇವಧರ್ ಟ್ರೋಫಿಯು ಮಾ.25 ರಂದು ಆರಂಭವಾಗಿ ಮಾ.29 ರಂದು ವಿಶಾಖಪಟ್ಟಣದಲ್ಲಿ ಕೊನೆಗೊಳ್ಳಲಿದೆ.

 ಇಂಡಿಯಾ ‘ಬ್ಲೂ’: ರೋಹಿತ್ ಶರ್ಮ(ನಾಯಕ), ಮನ್‌ದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಅಂಬಟಿ ರಾಯುಡು, ಮನೋಜ್ ತಿವಾರಿ, ರಿಷಬ್ ಪಂತ್(ವಿಕೆಟ್‌ಕೀಪರ್), ದೀಪಕ್ ಹೂಡ, ಹರ್ಭಜನ್ ಸಿಂಗ್, ಕ್ರನಾಲ್ ಪಾಂಡ್ಯ, ಶಹಬಾಝ್ ನದೀಮ್, ಸಿದ್ದಾರ್ಥ್ ಕೌಲ್, ಶಾರ್ದೂಲ್ ಠಾಕೂರ್, ಪ್ರಸಿದ್ಧ ಕೃಷ್ಣ, ಪಂಕಜ್ ರಾವ್.

ಇಂಡಿಯಾ ‘ರೆಡ್’: ಪಾರ್ಥಿವ್ ಪಟೇಲ್(ನಾಯಕ, ವಿಕೆಟ್‌ಕೀಪರ್), ಶಿಖರ್ ಧವನ್, ಮನೀಷ್ ಪಾಂಡೆ, ಮಾಯಾಂಕ್ ಅಗರವಾಲ್, ಕೇದಾರ್ ಜಾಧವ್, ಇಶಾಂಕ್ ಜಗ್ಗಿ, ಗುರುಕೀರತ್ ಮಾನ್, ಅಕ್ಷರ್ ಪಟೇಲ್, ಅಕ್ಷಯ್, ಅಶೋಕ್ ದಿಂಡ, ಕುಲ್ವಂತ್ ಖೆಜ್ರೊಲಿಯ, ಧವಳ್ ಕುಲಕರ್ಣಿ, ಗೋವಿಂದ ಪೊದ್ದಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News