ಭಾರತದಲ್ಲಿ ಅಂಡರ್-17 ಫುಟ್ಬಾಲ್ ವಿಶ್ವಕಪ್: ದಿನಗಣನೆ ಆರಂಭ
ಹೊಸದಿಲ್ಲಿ, ಮಾ.22: ಫಿಫಾ ಅಂಡರ್-17 ವಿಶ್ವಕಪ್‌ಗೆ ಇನ್ನು 199 ದಿನಗಳಷ್ಟೇ ಬಾಕಿ ಉಳಿದಿದ್ದು, ಸಿದ್ಧತೆ ಅಂತಿಮ ಹಂತ ತಲುಪಿದೆ. ಭಾರತದಲ್ಲಿ ಉತ್ತಮ ಟೂರ್ನಿ ನಡೆಯಲಿದೆ ಎಂದು ಫಿಫಾ ವಿಶ್ವಾಸ ವ್ಯಕ್ತಪಡಿಸಿದೆ.
ಭಾರತ ಮೊದಲ ಬಾರಿ ಫಿಫಾದ ಪ್ರಮುಖ ಟೂರ್ನಮೆಂಟ್‌ನ ಆತಿಥ್ಯವಹಿಸಿಕೊಂಡಿದ್ದು, ಟೂರ್ನಿಯು ಅಕ್ಟೋಬರ್ 6 ರಿಂದ 28ರ ತನಕ ಆರು ನಗರಗಳಾದ ಕೋಲ್ಕತಾ, ಕೊಚ್ಚಿ, ಹೊಸದಿಲ್ಲಿ, ಮುಂಬೈ, ಗುವಾಹಟಿ ಹಾಗೂ ಗೋವಾದಲ್ಲಿ ನಡೆಯಲಿದೆ.
ಭಾರತ 2013ರಲ್ಲಿ ಅಝೆರ್‌ಬೈಜಾನ್, ಐರ್ಲೆಂಡ್ ಹಾಗೂ ಉಜ್ಬೇಕಿಸ್ತಾನ ದೇಶವನ್ನು ಹಿಂದಿಕ್ಕಿ ವಿಶ್ವಕಪ್ ಆತಿಥ್ಯದ ಹಕ್ಕನ್ನು ಗೆದ್ದುಕೊಂಡಿತ್ತು. ಭಾರತ ಬಿಡ್ ಗೆದ್ದ ನಂತರ ಎಐಎಫ್‌ಎಫ್, ಫಿಫಾದ ಜೊತೆಗೂಡಿ ಭಾರತ ಪ್ರತಿಷ್ಠಿತ ಟೂರ್ನಿಯ ಆತಿಥ್ಯಕ್ಕೆ ತಯಾರಿಯನ್ನು ಆರಂಭಿಸಿದ್ದವು.
‘‘ಟೂರ್ನಿಯ ತಯಾರಿಗಳಲ್ಲವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ವಿಶ್ವಾಸ ನಮಗಿದೆ. ಮೂಲಭೂತ ಸೌಕರ್ಯಗಳು ಉತ್ತಮವಾಗಿದ್ದು, ಎಲ್ಲ ಸಿದ್ಧತೆ ಶೀಘ್ರವೇ ಪೂರ್ಣಗೊಳ್ಳುವ ವಿಶ್ವಾಸವಿದೆ’’ ಎಂದು ಟೂರ್ನಿಯ ನಿರ್ದೇಶಕರಾದ ಜೇವಿಯರ್ ಸೆಪ್ಪಿ ತಿಳಿಸಿದ್ದಾರೆ.
ಟೂರ್ನಮೆಂಟ್‌ನ ಡ್ರಾ ಪ್ರಕ್ರಿಯೆ ಜುಲೈ 7 ರಂದು ನಡೆಯಲಿದ್ದು, ಈ ತನಕ ಆತಿಥೇಯ ಭಾರತ ಸೇರಿದಂತೆ 11 ದೇಶಗಳು ಟೂರ್ನಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.
ಏಷ್ಯಾ: ಭಾರತ, ಇರಾಕ್, ಇರಾನ್, ಜಪಾನ್, ಉತ್ತರ ಕೊರಿಯಾ.
ದಕ್ಷಿಣ ಅಮೆರಿಕ: ಬ್ರೆಝಿಲ್, ಚಿಲಿ, ಕೊಲಂಬಿಯಾ, ಪರಾಗ್ವೆ
ಒಶಿಯಾನಿಯ: ನ್ಯೂಝಿಲೆಂಡ್, ನ್ಯೂ ಕ್ಯಾಲೆಡೊನಿಯ.
ಆಫ್ರಿಕ: ಮೇನಲ್ಲಿ ನಡೆಯಲಿರುವ 2017ರ ಆಫ್ರಿಕ ಅಂಡರ್-17 ಕಪ್ ಆಫ್ ನೇಶನ್ಸ್‌ನಲ್ಲಿ ನಾಲ್ಕು ತಂಡಗಳು ಅರ್ಹತೆ ಪಡೆಯಲಿವೆ.
ಸೆಂಟ್ರಲ್, ಉತ್ತರ ಅಮೆರಿಕ ಹಾಗೂ ಕೆರಿಬಿಯನ್: 2017ರ ಕೊನ್‌ಕಾಕಾಫ್ ಅಂಡರ್-17 ಚಾಂಪಿಯನ್‌ನಲ್ಲಿ ನಾಲ್ಕು ತಂಡಗಳು ಅರ್ಹತೆ ಪಡೆಯುತ್ತವೆ.
ಯುರೋಪ್: ಮೇನಲ್ಲಿ ನಡೆಯಲಿರುವ ಯುಇಎಫ್‌ಎ ಯುರೋಪಿಯನ್ ಅಂಡರ್-17 ಚಾಂಪಿಯನ್‌ಶಿಪ್‌ನಲ್ಲಿ 5 ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳಲಿವೆ.